ಮಂಗಳವಾರ, ಮಾರ್ಚ್ 9, 2021
31 °C
ಮುರಿದುಬಿದ್ದ ಒಗ್ಗಟ್ಟು: ವಿಭಜನೆಯತ್ತ ಸಾಗಿದ ಸಮುದಾಯಗಳು: ಮಮತಾ – ಸುವೇಂದು ಅಧಿಕಾರಿ ನಡುವೆ ಪೈಪೋಟಿ

ನಂದಿಗ್ರಾಮ: ಹೋರಾಟದ ತಾಣದಲ್ಲಿ ಕೋಮು ಧ್ರುವೀಕರಣ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನಂದಿಗ್ರಾಮ(ಪಶ್ಚಿಮ ಬಂಗಾಳ): ಕೆಲ ವರ್ಷಗಳ ಹಿಂದೆ ಚಳವಳಿ ತಾಣವಾಗಿ ಹಿಂಸಾಚಾರಕ್ಕೂ ಕಾರಣವಾಗಿದ್ದ ನಂದಿಗ್ರಾಮದಲ್ಲಿ ಈಗ ಸಂಪೂರ್ಣ ವಿಭಿನ್ನ ಸನ್ನಿವೇಶ ನಿರ್ಮಾಣವಾಗಿದೆ. ಒಂದು ಸಮಯದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ್ದ ಇಲ್ಲಿನ ಸಮುದಾಯಗಳು ಈಗ ವಿಭಜನೆಯತ್ತ ಸಾಗಿವೆ. ರಾಜಕೀಯವಾಗಿಯೂ ವಿಭಿನ್ನ ನಿಲುವುಗಳನ್ನು ತಳೆದಿವೆ.

ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಲು ಇಲ್ಲಿ ನಡೆಸಿದ ಹೋರಾಟವೇ ಪ್ರಮುಖವಾಗಿತ್ತು. ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಒಳಗೊಂಡ ನಂದಿಗ್ರಾಮ ಕ್ಷೇತ್ರ ರಾಷ್ಟ್ರದ ಗಮನಸೆಳೆದಿತ್ತು. ಈಗ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವಂತೆ ಮತ್ತೊಮ್ಮೆ ಎಲ್ಲರ ಚಿತ್ತ ಇತ್ತ ಹರಿದಿದೆ.

ಕೈಗಾರಿಕೆಗಾಗಿ ಭೂಸ್ವಾಧೀನ ವಿರೋಧಿಸಿ ನಡೆದ ಹೋರಾಟ ಹಿಂಸಾಚಾರಕ್ಕೆ ತಿರುಗಿತ್ತು. 2007ರಿಂದ ಇಲ್ಲಿ ಹೋರಾಟ ಆರಂಭವಾಗಿತ್ತು. ‘ತೋಮರ್‌ ನಾಮ್‌, ಅಮರ್‌ ನಾಮ್‌, ನಂದಿಗ್ರಾಮ, ನಂದಿಗ್ರಾಮ’ (ನಿನ್ನ ಹೆಸರು, ನನ್ನ ಹೆಸರು, ನಂದಿಗ್ರಾಮ, ನಂದಿಗ್ರಾಮ) ಎನ್ನುವ ಘೋಷಣೆಯೊಂದಿಗೆ ಹೋರಾಟ ಆರಂಭವಾಗಿತ್ತು. ವಿಶೇಷ ಆರ್ಥಿಕ ವಲಯ ಸ್ಥಾಪಿಸುವ ಎಡರಂಗ ಸರ್ಕಾರದ ವಿರುದ್ಧ ಸಾಮಾಜಿಕವಾಗಿಯೂ ಮತ್ತು ರಾಜಕೀಯವಾಗಿಯೂ ಒಗ್ಗೂಡಿ ಪ್ರಬಲ ಹೋರಾಟವೇ ನಡೆಸಿದ್ದು ಅಪರೂಪವಾಗಿತ್ತು.

ಆದರೆ, ಇಂದು ‘ತೋಮರ್‌ ನಾಮ್‌, ಅಮರ್‌ ನಾಮ್‌, ನಂದಿಗ್ರಾಮ, ನಂದಿಗ್ರಾಮ’ ಘೋಷಣೆ ಕ್ರಮೇಣ ಕ್ಷೀಣಿಸುತ್ತಿದ್ದು, ‘ಜೈ ಶ್ರೀ ರಾಮ’ ಘೋಷಣೆಗಳು ಮೊಳಗೊತ್ತಿವೆ.

ಈ ಪ್ರದೇಶದ ಪ್ರಮುಖ ಮತ್ತು ಟಿಎಂಸಿ ಹಿರಿಯ ರಾಜಕಾರಣಿಯಾಗಿದ್ದ ಸುವೇಂದು ಅಧಿಕಾರಿ ಬಿಜೆಪಿ ಸೇರಿರುವುದು ಮತ್ತು ಮಮತಾ ಬ್ಯಾನರ್ಜಿ ಅವರು ಇಲ್ಲಿಂದಲೇ ಸ್ಪರ್ಧಿಸುವುದಾಗಿ ಹೇಳಿರುವುದರಿಂದ ಕೋಮು ಧ್ರುವೀಕರಣಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ನಂದಿಗ್ರಾಮ ಚಳವಳಿಗೆ ನೇತೃತ್ವವಹಿಸಿದ್ದ ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿ ಎಲ್ಲರ ಕಣ್ಮಣಿಯಾಗಿದ್ದರು. ಮಮತಾ ಬ್ಯಾನರ್ಜಿ ಅವರ ನಿರ್ದೇಶನದಂತೆ ಹೋರಾಟಗಳು ನಡೆದಿದ್ದವು. ವಿಶೇಷ ಆರ್ಥಿಕ ವಲಯದಲ್ಲಿ ಇಂಡೊನೇಷ್ಯಾದ ಸಲಿಂ ಸಮೂಹ ಸ್ಥಾಪಿಸಲು ಉದ್ದೇಶಿಸಿದ್ದ ‘ಕೆಮಿಕಲ್‌ ಹಬ್‌’ ವಿರುದ್ಧ ಸಾಮೂಹಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರಸ್ತುತ ಟಿಎಂಸಿ ಲೋಕಸಭಾ ಸದಸ್ಯರಾಗಿರುವ ಅಧಿಕಾರಿ ಅವರ ತಂದೆ ಸಿಸಿರ್‌ ಅವರು ‘ಭೂಮಿ ಉಚ್ಚೇದ್‌ ಪ್ರತಿರೋಧ ಕಮಿಟಿ’ಯ (ಬಿಯುಪಿಸಿ) ಸಂಚಾಲಕರಾಗಿದ್ದರು. ವಿಭಿನ್ನ ರಾಜಕೀಯ ಸಿದ್ಧಾಂತ ಹೊಂದಿದವರು ಈ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಟಿಎಂಸಿ, ಕಾಂಗ್ರೆಸ್‌, ಆರ್‌ಎಸ್‌ಎಸ್‌ ಮತ್ತು ಎಡಪಕ್ಷಗಳ ಧೋರಣೆಯಿಂದ ಅಸಮಾಧಾನಗೊಂಡಿದ್ದವರು ಒಗ್ಗೂಡಿ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದರು. ಈ ಹೋರಾಟ ಹಿಂಸಾಚಾರಕ್ಕೆ ತಿರುಗಿದ ಸಂದರ್ಭದಲ್ಲಿ ನಡೆದ ಪೊಲೀಸರ ಗುಂಡಿನ ದಾಳಿಯಲ್ಲಿ 14 ಮಂದಿ ಮೃತಪ‍ಟ್ಟಿದ್ದರು.

ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಮೂಲೆಗುಂಪಾದ ಬಳಿಕ, ಮಮತಾ ಬ್ಯಾನರ್ಜಿ ಅವರ ಟಿಎಂಸಿ ಮತ್ತು ಬಿಜೆಪಿ ನಡುವೆ ಈಗ ನಂದಿಗ್ರಾಮಕ್ಕಾಗಿ ರಾಜಕೀಯ ಹೋರಾಟ ನಡೆಯುತ್ತಿದೆ. ಪ್ರತಿಸ್ಪರ್ಧಿಯಾಗಿರುವ ರಾಜಕೀಯ ಪಕ್ಷಗಳ ರ್‍ಯಾಲಿಗಳ ಮೇಲೆ ದಾಳಿಗಳು ನಡೆಯುತ್ತಿವೆ.

ಬಿಯುಪಿಸಿ ಹೋರಾಟದ ಬಳಿಕ ಈ ಪ್ರದೇಶದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಕೃಷಿ ಚಟುವಟಿಕೆಗಳೇ ಪ್ರಧಾನವಾಗಿದ್ದು, ಭತ್ತ ಮತ್ತು ತರಕಾರಿಯನ್ನು ಪ್ರಮುಖವಾಗಿ ಬೆಳೆಯಲಾಗುತ್ತಿದೆ.

2007ರಿಂದ 2011ರವರೆಗೆ ಪದೇ ಪದೇ ನಡೆದ ಹಿಂಸಾಚಾರದಲ್ಲೇ ನಂದಿಗ್ರಾಮ ತತ್ತರಿಸಿತ್ತು. ಬಿಯುಪಿಸಿ ಮತ್ತು ಸಿಪಿಐ (ಎಂ) ಕಾರ್ಯಕರ್ತರ ನಡುವೆ ಸಂಘರ್ಷಗಳು ನಡೆದು ಹಲವರು ಸಾವಿಗೀಡಾಗಿದ್ದರೂ ಧಾರ್ಮಿಕವಾಗಿ ವಿಭಜನೆಗೊಂಡಿರಲಿಲ್ಲ ಅಥವಾ ಕೋಮು ಧ್ರುವೀಕರಣಗೊಂಡಿರಲಿಲ್ಲ. ಕೇವಲ ರಾಜಕೀಯವಾಗಿ ಸಂಘರ್ಷಗಳು ನಡೆದಿದ್ದವು ಎಂದು ಸ್ಥಳೀಯ ಮುಖಂಡರು ಹೇಳುತ್ತಾರೆ.

‘ಕಳೆದ ಆರೇಳು ವರ್ಷಗಳಲ್ಲಿ ನಂದಿಗ್ರಾಮ ಬಹಳಷ್ಟು ಬದಲಾವಣೆ ಕಂಡಿದೆ. ಈ ಮೊದಲು ಎಲ್ಲ ಸಮುದಾಯಗಳು ಒಗ್ಗೂಡಿ ಶಾಂತಿಯಿಂದ ಬದುಕುತ್ತಿದ್ದರು. ಆಗಲೂ ಭಿನ್ನಾಭಿಪ್ರಾಯಗಳಿದ್ದವು ಮತ್ತು ಹಿಂಸಾಚಾರ ನಡೆದಿತ್ತು. ಆದರೆ, ಆಗ ಧಾರ್ಮಿಕವಾಗಿ ಇರಲಿಲ್ಲ. ಕೇವಲ ರಾಜಕೀಯವಾಗಿತ್ತು. ಈಗ ಬಹುಸಂಖ್ಯೆಯ ಹಿಂದೂಗಳು ಒಂದು ಬಣದಲ್ಲಿದ್ದರೆ, ಮುಸ್ಲಿಮರು ಇನ್ನೊಂದು ಬಣದಲ್ಲಿದ್ದಾರೆ. ಹಿಂದೆ ಇಂತಹ ಸನ್ನಿವೇಶವನ್ನು ನಾವು ಎಂದೂ ಕಂಡಿರಲಿಲ್ಲ’ ಎಂದು ಭೂಸ್ವಾಧೀನ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದ ಸ್ಥಳೀಯ ನಿವಾಸಿ ರಸೂಲ್‌ ಕಾಜಿ ಹೇಳುತ್ತಾರೆ.

‘ಸಮುದಾಯಗಳ ವಿಭಜನೆಗೆ ಟಿಎಂಸಿ ಸರ್ಕಾರವೇ ಹೊಣೆಯಾಗಿದೆ. ಮುಸ್ಲಿಂ ಸಮುದಾಯವನ್ನು ಓಲೈಸುವಲ್ಲೇ ಟಿಎಂಸಿ ಸರ್ಕಾರ ತೊಡಗಿತು. ಜತೆಗೆ, ಒಂದು ಸಮುದಾಯದ ವಿರುದ್ಧ ಇನ್ನೊಂದು ಸಮುದಾಯವನ್ನು ಎತ್ತಿಕಟ್ಟಿತು’ ಎಂದು ಗೋಕುಲಪುರ ಗ್ರಾಮದ ಬಾಮದೇವ್‌ ಮೊಂಡಲ್‌ ದೂರುತ್ತಾರೆ.

‘ಹಿಂದೂಗಳು ಹಾಗೂ ಮುಸ್ಲಿಮರು ಒಗ್ಗಟ್ಟಾಗಿ ಇಲ್ಲಿ ಹೋರಾಟ ನಡೆಸಿದ್ದೇವೆ. ಆದರೆ, ನಮಗೆ ಏನೂ ಸಿಗಲಿಲ್ಲ. ಇಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಕೆಲವು ಮುಖಂಡರು ಮಾತ್ರ ಲಾಭ ಮಾಡಿಕೊಂಡರು’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಂದಿಗ್ರಾಮ ಎಂದಿಗೂ ತನ್ನ ಜಾತ್ಯತೀತತೆ ಸ್ವರೂಪವನ್ನು ಕಳೆದುಕೊಳ್ಳುವುದಿಲ್ಲ. ಇದು ಸದಾ ಜಾತ್ಯತೀತ ಕ್ಷೇತ್ರವಾಗಿರುತ್ತದೆ’ ಎಂದು ಟಿಎಂಸಿಯ ಪೂರ್ವ ಮಿದ್ನಾಪೂರದ ಅಧ್ಯಕ್ಷ ಅಖಿಲ್‌ ಗಿರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು