ಗುರುವಾರ , ಮೇ 13, 2021
44 °C
ಚುನಾವಣಾ ಆಯೋಗಕ್ಕೆ ಮಮತಾ ಮರುಮನವಿ

ಕೊನೆಯ ಮೂರು ಹಂತದ ಮತದಾನ ಒಂದೇ ದಿನ ನಡೆಸಿ: ಮಮತಾ ಮರುಮನವಿ

ಪಿಟಿಐ Updated:

ಅಕ್ಷರ ಗಾತ್ರ : | |

ಚಕೂಲಿಯಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಕೊನೆಯ ಮೂರು ಹಂತದ ಮತದಾನವನ್ನು ಒಂದೇ ದಿನ ನಡೆಸಿ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚುನಾವಣಾ ಆಯೋಗವನ್ನು ಕೋರಿಕೊಂಡಿದ್ದಾರೆ.

ಕೋವಿಡ್‌-19 ಪ್ರಕರಣಗಳು ವಿಪರೀತ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವ ಕಾರಣ, ತಮ್ಮ ಮನವಿಯನ್ನು ಪರಿಗಣಿಸುವಂತೆ ಅವರು ಕೋರಿಕೊಂಡಿದ್ದಾರೆ. ಇಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು, ‘ಮುಂದಿನ ಎಲ್ಲಾ ಹಂತದ ಮತದಾನವನ್ನು ಒಂದೇ ದಿನ ಅಥವಾ ಎರಡು ದಿನದಲ್ಲಿ ಮುಗಿಸಿ. ಜನರ ಆರೋಗ್ಯದ ದೃಷ್ಟಿಯಿಂದಲಾದರೂ ಮತದಾನದ ದಿನಗಳ ಸಂಖ್ಯೆಯನ್ನು ಇಳಿಸಿ. ದಯವಿಟ್ಟು ಬಿಜೆಪಿ ಏನು ಹೇಳುತ್ತದೆ ಎಂಬುದನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳಬೇಡಿ’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಕೊನೆಯ ನಾಲ್ಕೂ ಹಂತದ ಮತದಾನವನ್ನು ಒಂದೇ ದಿನ ನಡೆಸಿ ಎಂದು ಮಮತಾ ಬ್ಯಾನರ್ಜಿ ಅವರು ಈ ಹಿಂದೆಯೂ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಆಯೋಗವು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.

ಕೋವಿಡ್‌ ಇರುವ ಕಾರಣ ರಾಜ್ಯದಲ್ಲಿ ಮುಂದಿನ ಪ್ರಚಾರ ಸಭೆಗಳ ಸಮಯವನ್ನು 20 ನಿಮಿಷಕ್ಕೆ ಇಳಿಸಿದ್ದೇವೆ. ಪ್ರಚಾರ ಸಭೆಗಳ ಸಂಖ್ಯೆಯನ್ನೂ ಕಡಿಮೆ ಮಾಡಿದ್ದೇವೆ. ಸಣ್ಣ-ಪುಟ್ಟ ಸಭೆಗಳನ್ನಷ್ಟೇ ನಡೆಸುತ್ತೇವೆ ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ.

ಕಚ್ಚಾ ಬಾಂಬ್‌ ದಾಳಿ

ಉತ್ತರ 24 ಪರಗಣ ಜಿಲ್ಲೆಯ ಪಾನಿಹಾತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸನ್ಮೋಯ್ ಬಂದೋಪಾಧ್ಯಾಯ ಅವರ ಮನೆಯ ಮೇಲೆ ಭಾನುವಾರ ತಡರಾತ್ರಿ ದುಷ್ಕರ್ಮಿಗಳು ಬಾಂಬ್‌ ದಾಳಿ ನಡೆಸಿದ್ದಾರೆ.

ಸನ್ಮೋಯ್ ಅವರ ಮನೆಗೆ ಸ್ವಲ್ಪ ಹಾನಿಯಾಗಿದೆ. ಆದರೆ ಯಾರಿಗೂ ಗಾಯಗಳಾಗಿಲ್ಲ. ಕೃತ್ಯಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚುನಾವಣಾ ಕಣದಲ್ಲಿ

* ಈಗ ನಡೆಯುತ್ತಿರುವ ಚುನಾವಣೆಯ ಮತ ಎಣಿಕೆಯಲ್ಲಿ ಎಲ್ಲಾ ಮತಯಂತ್ರಗಳ ಜತೆ ವಿವಿಪ್ಯಾಟ್‌ ಹೋಲಿಕೆ ಮಾಡಿ ನೋಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿ ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ. ಚುನಾವಣಾ ಪ್ರಕ್ರಿಯೆಯ ಮಧ್ಯೆ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ

* ಪಶ್ಚಿಮ ಬಂಗಾಳದ ವಿಧಾನಸಭಾ ಕ್ಷೇತ್ರಗಳಿಗೆ ಆರನೇ ಹಂತದಲ್ಲಿ ನಡೆಯಲಿರುವ ಮತದಾನದ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರವು ಸೋಮವಾರ ಸಂಜೆ ಅಂತ್ಯವಾಗಿದೆ

* ಆರನೇ ಹಂತದಲ್ಲಿ ಮತದಾನ ನಡೆಯಲಿರುವ ಪಶ್ಚಿಮ ಬಂಗಾಳದ ಪೂರ್ವ ವರ್ಧಮಾನ್ ಮತ್ತು ವೀರ್‌ಭೂಮಿ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಚುನಾವಣಾ ಆಯೋಗವು ವರ್ಗಾವಣೆ ಮಾಡಿದೆ

* ಪಶ್ಚಿಮ ಬಂಗಾಳದ ವಿವಿಧೆಡೆ ಕೇಂದ್ರ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹಲವು ರೋಡ್‌ ಶೋಗಳನ್ನು ನಡೆಸಿದ್ದಾರೆ. ಮಮತಾ ಬ್ಯಾನರ್ಜಿ ಅವರು ಎರಡು ಪ್ರಚಾರ ಸಭೆ ನಡೆಸಿದ್ದಾರೆ

ನುಡಿ-ಕಿಡಿ

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದು ಪಕ್ಷದ ನಾಯಕರಿಗೆ ಮನದಟ್ಟಾಗಿದೆ. ಪಶ್ಚಿಮ ಬಂಗಾಳದಲ್ಲಿ ಹೀನಾಯವಾಗಿ ಸೋಲುವ ಭಯದಿಂದಲೇ ರಾಹುಲ್ ಗಾಂಧಿ ಅವರು ಪ್ರಚಾರ ಸಭೆಗಳನ್ನು ರದ್ದುಪಡಿಸಿದ್ದಾರೆ

- ರವಿಶಂಕರ್ ಪ್ರಸಾದ್, ಕೇಂದ್ರ ಸಚಿವ

ಚುನಾವಣಾ ಆಯೋಗವು ಬಿಜೆಪಿ ಹೇಳಿದಂತೆ ಕೇಳುತ್ತಿದೆ. ಬಿಜೆಪಿ ತನ್ನ ಪ್ರಚಾರ ಸಭೆಗಳನ್ನು ರದ್ದುಪಡಿಸುವುದಿಲ್ಲ. ಹೀಗಾಗಿಯೇ ಮತದಾನದ ದಿನಾಂಕವನ್ನು ಆಯೋಗ ಬದಲಿಸುತ್ತಿಲ್ಲ. ಗಲಭೆಕೋರ ಮತ್ತು ಯುದ್ಧಪ್ರಿಯ ಬಿಜೆಪಿಗೆ ಜನರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ

- ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ಚುನಾವಣೆಯನ್ನು ಚುನಾವಣಾ ಆಯೋಗವು ಸಂವಿಧಾನಬದ್ಧವಾಗಿ ನಡೆಸುತ್ತದೆ. ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ನಾವು ಪಾಲಿಸುತ್ತಿದ್ದೇವೆ. ಚುನಾವಣೆ ಹೇಗೆ ಮತ್ತು ಯಾವಾಗ ನಡೆಯುತ್ತದೆ ಎಂಬುದನ್ನು ಚುನಾವಣಾ ಆಯೋಗ ನಿರ್ಧರಿಸುತ್ತದೆ, ಬಿಜೆಪಿ ಅಲ್ಲ

ಪಶ್ಚಿಮ ಬಂಗಾಳ ಬಿಜೆಪಿ ಘಟಕ

ಬಿಜೆಪಿ ಪ್ರಚಾರ ಸಭೆಗಳಲ್ಲಿ ಸಾವಿರಾರು ಜನರು ಭಾಗಿಯಾಗುವುದನ್ನು ನಾವೆಲ್ಲಾ ನೋಡಿದ್ದೇವೆ. ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಅಲ್ಲಿ ಕಡೆಗಣಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿದಿನ ನಾಲ್ಕು ಪ್ರಚಾರ ಸಭೆ ನಡೆಸುತ್ತಾರೆ

- ಪಿ.ಚಿದಂಬರಂ, ಕಾಂಗ್ರೆಸ್ ನಾಯಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು