ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸರ್ಕಾರಕ್ಕೆ 7 ವರ್ಷ: ಮನ್ ಕಿ ಬಾತ್‌ನಲ್ಲಿ ಗುಣಗಾನ

Last Updated 30 ಮೇ 2021, 8:54 IST
ಅಕ್ಷರ ಗಾತ್ರ

ನರೇಂದ್ರ ಮೋದಿ ಪ್ರಧಾನಿಯಾಗಿ ರಾಷ್ಟ್ರದ ಚುಕ್ಕಾಣಿ ಹಿಡಿದು ಇಂದಿಗೆ 7 ವರ್ಷ ಪೂರ್ಣಗೊಂಡಿದ್ದನ್ನು ಮನ್‌ ಕಿ ಬಾತ್‌ನಲ್ಲಿ ಸ್ಮರಿಸುತ್ತ ಕಾಕತಾಳೀಯವೆಂಬಂತೆ ಮೇ 30ರಂದು ಮನದ ಮಾತುಗಳನ್ನು ಆಡುತ್ತಿದ್ದೇನೆ ಎಂದರು.

ಕಳೆದ 7 ವರ್ಷಗಳಲ್ಲಿ ದೇಶವು 'ಎಲ್ಲರೊಂದಿಗೆ, ಎಲ್ಲರ ಅಭಿವೃದ್ಧಿ, ಎಲ್ಲರ ವಿಶ್ವಾಸ' ಎಂಬ ಮಂತ್ರವನ್ನು ಅನುಸರಿಸುತ್ತಿದೆ. ದೇಶದ ಸೇವೆಯಲ್ಲಿ ನಾವೆಲ್ಲರೂ ಪ್ರತಿಕ್ಷಣವೂ ಸಮರ್ಪಣಾ ಭಾವದೊಂದಿಗೆ ಕೆಲಸ ಮಾಡಿದ್ದೇವೆ ಎಂದು ಪಿಎಂ ಮೋದಿ ತಮ್ಮ ಸರ್ಕಾರದ ಬಗ್ಗೆ ಹೇಳಿಕೊಂಡರು.

ಈ 7 ವರ್ಷಗಳಲ್ಲಿ ಯಾವುದೇ ಸಾಧನೆ ಮಾಡಿದರೂ ಅದು ದೇಶದ್ದಾಗಿದೆ, ದೇಶವಾಸಿಗಳದ್ದಾಗಿದೆ. ಭಾರತವು ಇತರ ದೇಶಗಳ ಚಿಂತನೆಯ ಪ್ರಕಾರ ಮತ್ತು ಅವರ ಒತ್ತಡದಂತೆ ನಡೆಯುವುದಿಲ್ಲ, ತನ್ನ ಮನೋನಿಶ್ಚಯದಂತೆ ನಡೆಯುತ್ತದೆ ಎನ್ನುವುದನ್ನು ಗಮನಿಸಿದಾಗ ಹೆಮ್ಮೆಯೆನಿಸುತ್ತದೆ. ನಮ್ಮ ವಿರುದ್ಧ ಸಂಚು ರೂಪಿಸಿದವರಿಗೆ ಭಾರತ ಈಗ ಸೂಕ್ತ ಉತ್ತರವನ್ನು ನೀಡುತ್ತದೆ. ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ಭಾರತ ರಾಜಿ ಮಾಡಿಕೊಳ್ಳದಿದ್ದಾಗ, ನಮ್ಮ ಸೇನಾಪಡೆಗಳ ಬಲ ಹೆಚ್ಚಾದಾಗ, ಹೌದು, ನಾವು ಸರಿಯಾದ ಹಾದಿಯಲ್ಲಿದ್ದೇವೆ ಎಂದು ಭಾಸವಾಗುತ್ತದೆ ಎಂದು ಮೋದಿ ಹೇಳಿದರು.

70 ವರ್ಷಗಳ ನಂತರ ತಮ್ಮ ಗ್ರಾಮದಲ್ಲಿ ವಿದ್ಯುತ್‌ ಬಂತೆಂದು ಸಾಕಷ್ಟು ಜನ ಧನ್ಯವಾದ ಹೇಳುತ್ತಿದ್ದಾರೆ. ಗ್ರಾಮಗಳಿಗೆ ರಸ್ತೆ ಸಂಪರ್ಕ ಸಿಕ್ಕಿದ್ದರಿಂದ ಮೊದಲ ಬಾರಿಗೆ ತಾವು ಕೂಡ ವಿಶ್ವದ ಇತರ ಭಾಗಕ್ಕೆ ಸೇರಿದವರೆಂಬ ಭಾವನೆ ಮೂಡಿತೆಂದು ಬುಡಕಟ್ಟು ಪ್ರದೇಶದ ಕೆಲವು ಸ್ನೇಹಿತರು ಸಂದೇಶ ಕಳುಸಿದ್ದು ನೆನಪಿದೆ. ಕೆಲವರು ಬ್ಯಾಂಕ್‌ ಖಾತೆ ತೆರೆದ ಸಂತಸ ಹಂಚಿಕೊಂಡರೆ, ಕೆಲವರು ಹೊಸ ಉದ್ಯೋಗ ಆರಂಭಿಸಿದ ಸಂತಸ ಹಂಚಿಕೊಂಡಿದ್ದಾರೆ. 'ಪ್ರಧಾನ ಮಂತ್ರಿ ಆವಾಸ್ಯೋಜನೆ' ಮೂಲಕ ಮನೆ ಪಡೆದವರು ಗೃಹಪ್ರವೇಶಕ್ಕೆ ಬರಬೇಕೆಂದು ಆಹ್ವಾನಿಸಿದ್ದಾರೆ ಎಂದು ಮೋದಿ ತಮ್ಮ ಸರ್ಕಾರದ ಗುಣಗಾನ ಮಾಡಿದರು.

ವೈದ್ಯಕೀಯ ಸಿಬ್ಬಂದಿ ಸೇವೆ ದೊಡ್ಡದು:
ಕೊರೊನಾ ವೈರಸ್‌ ಭಾರತವನ್ನು ಪ್ರವೇಶಿಸಿದ ಸಂದರ್ಭ ದೇಶದಲ್ಲಿ ಕೇವಲ ಒಂದು ಪರೀಕ್ಷಾ ಪ್ರಯೋಗಾಲಯವಿತ್ತು. ಆದರೆ ಇಂದು ಎರಡೂವರೆ ಸಾವಿರಕ್ಕಿಂತ ಹೆಚ್ಚು ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಆರಂಭದಲ್ಲಿ ಕೇವಲ ನೂರು ಪರೀಕ್ಷೆಗಳು ನಡೆಯುತ್ತಿದ್ದವು. ಇಂದು 20 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳು ನಡೆಯುತ್ತಿವೆ. ಇಲ್ಲಿಯವರೆಗೆ 22 ಕೋಟಿಗೂ ಹೆಚ್ಚು ಮಾದರಿ ಪರೀಕ್ಷೆ ನಡೆಸಲಾಗಿದೆ.

ಕೊರೊನಾ ಸೋಂಕಿತರ ಮಧ್ಯೆ ಹೋಗಿ ಮಾದರಿ ಸಂಗ್ರಹಿಸುತ್ತಿರುವುದು ದೊಡ್ಡ ಸೇವೆ. ನಮ್ಮ ಸುರಕ್ಷತೆಗಾಗಿ ವೈದ್ಯಕೀಯ ಕಾರ್ಯಕರ್ತರು ಬಿಸಿಲಿನ ತಾಪದ ಮಧ್ಯೆಯೂ ನಿರಂತರವಾಗಿ ಪಿಪಿಇ ಕಿಟ್‌ ಧರಿಸಿ ಕೆಲಸ ಮಾಡುತ್ತಿದ್ದಾರೆ. ಇವರ ಸೇವೆಯಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ ಎಂದು ಪಿಎಂ ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT