ಗುರುವಾರ , ಅಕ್ಟೋಬರ್ 1, 2020
27 °C

ಮಳೆಯಲ್ಲಿ ಮ್ಯಾನ್‌ಹೋಲ್‌ ಬಳಿ ಜನರ ಎಚ್ಚರಿಸುತ್ತಿದ್ದ ಮಹಿಳೆಗೆ ಪ್ರಶಂಸೆಯ ಸುರಿಮಳೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ಸುರಿವ ಮಳೆ, ರಸ್ತೆಯಲ್ಲಿ ಮ್ಯಾನ್‌ ಹೋಲ್‌ ಬಳಿ ನಿಂತು ಈ ಕಡೆ ಬರಬೇಡಿ ಎಂದು ವಾಹನ ಸವಾರರಿಗೆ ಸನ್ನೆ ಮಾಡುತ್ತ ಮಹಾನಗರ ಪಾಲಿಕೆ ಸಿಬ್ಬಂದಿ ಬರುವವರೆಗೂ ಅಲ್ಲಿಯೇ ಇದ್ದ ಆ ಮಧ್ಯ ವಯಸ್ಕ ಮಹಿಳೆಯ ಬಗ್ಗೆ ಮುಂಬೈ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

ಹೂ ಮಾರಿ ಜೀವನ ಸಾಗಿಸುವ ಕಾಂತಾ ಮೂರ್ತಿ ಸುರಿಯುವ ಮಳೆಯನ್ನು ಲೆಕ್ಕಿಸದೇ, ತನ್ನ ಪ್ರಾಣದ ಹಂಗು ತೊರೆದು  ಮ್ಯಾನ್‌ಹೋಲ್‌ ಬಳಿ 7 ಗಂಟೆಗಳ ನಿಂತು ಸಂಭವಿಸಬಹುದಾದ ಪ್ರಾಣ ಹಾನಿಯನ್ನು ತಪ್ಪಿಸಿದ್ದಾರೆ. ಸುರಿಯವ ಮಳೆ, ರಸ್ತೆಯಲ್ಲಿ ಹರಿವ ನೀರಿನ ನಡುವೆ ವಾಹನ ಸವಾರರಿಗೆ ಹಾಗೂ ಪಾದಾಚಾರಿಗಳಿಗೆ ಈ ಕಡೆ ಬರಬೇಡಿ ಎಂದು ಸನ್ನೆ ಮಾಡುತ್ತ ಸಂಚಾರಿ ಪೊಲೀಸರ ಮಾದರಿಯಲ್ಲಿ ಕೆಲಸ ಮಾಡುವುದನ್ನು ಕೆಲವರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವನ್ನು ಅಪ್‌ಲೋಡ್‌ ಮಾಡಿದ್ದಾರೆ.

ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು ಮುಂಬೈ ಜನತೆ ಕಾಂತಾ ಮೂರ್ತಿಯವರ ಸಾಮಾಜಿಕ ಕಳಕಳಿ ಹಾಗೂ ಜೀವದ ಹಂಗು ತೊರೆದು ಕೆಲಸ ಮಾಡಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

ಕಳೆದೊಂದು ವಾರದಲ್ಲಿ ಮುಂಬೈ ಮಹಾನಗರ ವರುಣನ ಆರ್ಭಟಕ್ಕೆ ತೊಪ್ಪೆಯಾಗಿತ್ತು. ಇಲ್ಲಿನ ಮಟ್ಟಗಾಂವ್‌ ಪ್ರದೇಶದ ರಸ್ತೆಯೊಂದರಲ್ಲಿ ಮ್ಯಾನ್‌ಹೋಲ್‌ ಮುಚ್ಚುಳ ತುಂಡಾಗಿ ನೀರು ಹೊರಬರುತ್ತಿತ್ತು. ಇದನ್ನು ಗಮನಿಸಿದ ಕಾಂತಾ ಮೂರ್ತಿ ಮ್ಯಾನ್‌ ಹೋಲ್‌ ಬಳಿ ನಿಂತು ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದರು. ಇದನ್ನು ಗಮನಿಸಿದ ಕೆಲ ಪೊಲೀಸ್‌ ಅಧಿಕಾರಿಗಳು ಕಾಂತಾ ಮೂರ್ತಿಗೆ ಮನೆಗೆ ತೆರಳುವಂತೆ ಗದರಿಸಿದ್ದರು. ಯಾವುದಕ್ಕೂ ಜಗ್ಗದೇ, 7 ಗಂಟೆಗಳ ನಂತರ ಪಾಲಿಕೆ ಸಿಬ್ಬಂದಿ ಬಂದ ಮೇಲೆ ಕಾಂತಾ ಮೂರ್ತಿ ಆ ಸ್ಥಳದಿಂದ ತೆರಳಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಬೀದಿ ಬದಿಯಲ್ಲಿ ಹೂ ಮಾರಾಟ ಮಾಡಿ ಜೀವನ ನಡೆಸುವ ಕಾಂತಾ ಮೂರ್ತಿಗೆ 8 ಜನ ಮಕ್ಕಳಿದ್ದಾರೆ. 5 ಜನರಿಗೆ ಮದುವೆ ಮಾಡಿದ್ದು ಇನ್ನು ಮೂವರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪಾರ್ಶ್ವವಾಯುಗೆ ತುತ್ತಾಗಿರುವ ಪತಿಯನ್ನು ನೋಡುವುದರ ಜತೆಗೆ ಮಕ್ಕಳ ವಿದ್ಯಾಭ್ಯಾಸ ಹೊರೆಯನ್ನು ನಿಭಾಯಿಸಬೇಕಾಗಿದೆ. ಹೂ ಮಾರಾಟದಿಂದಲೇ ನಮ್ಮ ಬದುಕಿನ ಬಂಡಿ ಸಾಗುತ್ತಿದೆ ಎಂದು ಕಾಂತಾ ಮೂರ್ತಿ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು