ಶನಿವಾರ, ಡಿಸೆಂಬರ್ 3, 2022
21 °C

ದೆಹಲಿ: ಶ್ರದ್ಧಾ ವಾಲಕರ್‌ ಶವದ ತುಂಡುಗಳ ಬಿಸಾಡಿದ್ದ ಅರಣ್ಯದಲ್ಲಿ ಪೊಲೀಸರ ಶೋಧ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾಲ್‌ಸೆಂಟರ್‌ ಉದ್ಯೋಗಿ, ಮುಂಬೈ ಮೂಲದ ಶ್ರದ್ಧಾ ವಾಲಕರ್‌ ಎಂಬ ಯುವತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಆಕೆಯ ಸಹ ಜೀವನದ (ಲೀವ್‌ ಇನ್‌ ರಿಲೇಷನ್‌ಶಿಪ್‌) ಸಂಗಾತಿ, ಹಂತಕ ಅಫ್ತಾಬ್ ಅಮೀನ್ ಪೂನಾವಾಲಾನನ್ನು (28) ‌ದೆಹಲಿ ಪೊಲೀಸರು, ಮಂಗಳವಾರ ದಕ್ಷಿಣ ದೆಹಲಿಯ ಛತರ್‌ಪುರದ ಅರಣ್ಯಕ್ಕೆ ಕರೆದೊಯ್ದು ಪರಿಶೀಲನೆ ನಡೆಸಿದರು.

ಸಣ್ಣ ಸಣ್ಣದಾಗಿ ಕತ್ತರಿಸಿದ್ದ ಶವದ 35 ತುಂಡುಗಳ ಪೈಕಿ ಕೆಲವನ್ನು ಎಸೆದಿದ್ದ ಅರಣ್ಯದಲ್ಲಿನ ಜಾಗ ಗುರುತಿಸಲು ಪೊಲೀಸರಿಗೆ ಮೂರು ತಾಸು ಹಿಡಿಯಿತು. ಅಪರಾಧ ಕೃತ್ಯದ ದೃಶ್ಯ ಮರುಸೃಷ್ಟಿ ಮುಗಿಸಿದ ನಂತರ ಆರೋಪಿಯನ್ನು ತನಿಖಾ ತಂಡ ಪುನಃ ಠಾಣೆಗೆ ಕರೆತಂದಿತು.

ಆರೋಪಿ ತನಿಖೆ ವೇಳೆ, ಅಮೆರಿಕದ ಕ್ರೈಮ್‌ ಶೋ ‘ಡೆಕ್ಸ್‌ಟರ್’ ಎಂಬ ಸರಣಿ ಹಂತಕನ ಕಥೆ ಆಧರಿತ ಧಾರಾವಾಹಿಯಿಂದ ಪ್ರೇರಿತನಾಗಿದ್ದಾಗಿ ಹೇಳಿದ್ದಾನೆ. ಶ್ರದ್ಧಾ ಮತ್ತು ಅಫ್ತಾಬ್‌ ಅವರನ್ನು ಬೆಸೆದ ಅಮೆರಿಕ ಮೂಲದ ಆನ್‌ಲೈನ್ ಡೇಟಿಂಗ್ ಆ್ಯಪ್ ‘ಬಂಬಲ್’ನ ಅಧಿಕಾರಿಗಳನ್ನೂ ತನಿಖೆ ಭಾಗವಾಗಿ ಸಂಪರ್ಕಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ‌

‘ಶ್ರದ್ಧಾ ಶವದ ತುಂಡುಗಳು ಫ್ರಿಜ್‌ನಲ್ಲಿರುವಾಗಲೇ ಮತ್ತೊಬ್ಬಳನ್ನು ಪರಿಚಯಿಸಿಕೊಂಡು ಅದೇ ಮನೆಗೆ ಕರೆತಂದಿದ್ದ. ಆಕೆಯೊಂದಿಗೂ ಕೆಲವು ದಿನಗಳು ಒಟ್ಟಿಗಿದ್ದ ಎನ್ನುವ ಮಾಹಿತಿ ಇದೆ. ಈವರೆಗೆ ಶ್ರದ್ಧಾ ದೇಹದ 13 ತುಂಡುಗಳು ಸಿಕ್ಕಿವೆ. ಹಂತಕ ಕೃತ್ಯಕ್ಕೆ ಬಳಸಿದ ಆಯುಧ ಪತ್ತೆಯಾಗಿಲ್ಲ. ಸ್ವತಃ ಬಾಣಸಿಗನ ತರಬೇತಿ ಪಡೆದಿದ್ದ ಆರೋಪಿ, ಶವ ತುಂಡು ಮಾಡಲು ಮಾಂಸ ಕತ್ತರಿಸುವ ಆಯುಧವನ್ನು ಆತ ಖರೀದಿಸಿದ ಮಾಹಿತಿಯೂ ಸಿಕ್ಕಿದೆ’ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

‘ಲವ್‌ ಜಿಹಾದ್‌’ ಆಯಾಮದ ತನಿಖೆಗೆ ಬಿಜೆಪಿ ಶಾಸಕ ಆಗ್ರಹ (ಮುಂಬೈ ವರದಿ): ಶ್ರದ್ಧಾ ವಾಲಕರ್‌ ಕೊಲೆ ಪ್ರಕರಣವನ್ನು ‘ಲವ್‌ ಜಿಹಾದ್‌’ ಆಯಾಮದಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಿ ಬಿಜೆಪಿ ಶಾಸಕ ರಾಮ್‌ ಕದಮ್‌ ಮಂಗಳವಾರ ದೆಹಲಿ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಘಾಟ್ಕೋಪರ್‌ ಪ್ರದೇಶದಲ್ಲಿ ಮುಂಬೈ ಶಾಸಕ ಕದಮ್‌ ಮತ್ತು ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರು.   

ವೈದ್ಯರನ್ನು ಭೇಟಿಯಾಗಿದ್ದ ಹಂತಕ
ಶ್ರದ್ಧಾಳನ್ನು ಹತ್ಯೆ ಮಾಡಿದ ಅದೇ ತಿಂಗಳಿನಲ್ಲಿ (ಮೇ) ಚಾಕುವಿನಿಂದ ಆದ ಗಾಯದ ಚಿಕಿತ್ಸೆಗೆ ಆರೋಪಿ ಅಫ್ತಾಬ್‌ ವೈದ್ಯರನ್ನು ಭೇಟಿ ಮಾಡಿರುವ ಸಂಗತಿ ಹೊರಬಿದ್ದಿದೆ.

‘ಎರಡು ದಿನಗಳ ಹಿಂದೆ, ಪೊಲೀಸರು ಆರೋಪಿಯನ್ನು ನನ್ನ ಆಸ್ಪತ್ರೆಗೆ ಕರೆತಂದು, ಈ ವ್ಯಕ್ತಿಗೆ ಮೇ ತಿಂಗಳಲ್ಲಿ ಚಿಕಿತ್ಸೆ ನೀಡಲಾಗಿತ್ತೇ ಎಂದು ಕೇಳಿದರು. ಆತನ ಗುರುತು ಹಿಡಿದು, ಹೌದು ಎಂದೆ. ಚಿಕಿತ್ಸೆ ವೇಳೆ ಆತ ಇಂಗ್ಲಿಷಿನಲ್ಲಿ ಮಾತನಾಡುತ್ತಿದ್ದ. ಗಾಯ ಹೇಗಾಯಿತೆಂದು ಕೇಳಿದಾಗ ಹಣ್ಣು ಕತ್ತರಿಸುವಾಗ ಸಣ್ಣ ಗಾಯವಾಯಿತು ಎಂದಿದ್ದ. ತನ್ನದು ಮುಂಬೈ ಮೂಲ, ಉದ್ಯೋಗ ನಿಮಿತ್ತ ದೆಹಲಿಗೆ ಬಂದಿರುವೆ ಎಂದಿದ್ದ’ ಎಂದು ವೈದ್ಯ ಡಾ. ಅನಿಲ್‌ ಕುಮಾರ್ ತಿಳಿಸಿದ್ದಾರೆ.

ಕೊಲೆಯ ಹಿಂದೆ ದೊಡ್ಡ ಸಂಚು
ಶ್ರದ್ಧಾ ಅವರ ಹತ್ತಿರದ ಒಬ್ಬ ಸ್ನೇಹಿತರು ‘ಆಕೆಯ ಕೊಲೆ ಹಿಂದೆ ದೊಡ್ಡ ಸಂಚು ಇದೆ’ ಎಂದು ಸಂಶಯಿಸಿದರೆ, ಮತ್ತೊಬ್ಬ ಸ್ನೇಹಿತ ‘ಆಕೆ ಒಮ್ಮೆ ನನಗೆ ಮೊಬೈಲ್‌ ಕರೆ ಮಾಡಿ, ಪೂನಾವಾಲಾ ತನ್ನನ್ನು ಕೊಲೆ ಮಾಡಲಿದ್ದಾನೆ’ ಎಂದು ಹೇಳಿಕೊಂಡಿದ್ದಳು ಎಂದು ತಿಳಿಸಿದ್ದಾರೆ.

‘ಸಮೂಹ ಮಾಧ್ಯಮದಲ್ಲಿ ಪದವಿ ಪಡೆದಿದ್ದ ಶ್ರದ್ಧಾ ಪತ್ರಕರ್ತೆಯಾಗಲು ಬಯಸಿದ್ದಳು. ರಂಗಭೂಮಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಆಕೆಗೆ ನಟನೆ ಎಂದರೆ ಬಹಳ ಇಷ್ಟ. ಆಕೆಯದು ಸದಾ ಉತ್ಸಾಹದಿಂದ ಪುಟಿಯುತ್ತಿದ್ದ ವ್ಯಕ್ತಿತ್ವ. ಆದರೆ ಅಫ್ತಾಬ್‌ ಆಕೆಯ ಬದುಕಿನಲ್ಲಿ ಪ್ರವೇಶಿಸಿದ ಮೇಲೆ ಎಲ್ಲವೂ ಬದಲಾಯಿತು’ ಎಂದು ವಸೈ ಪ್ರದೇಶದ ಶ್ರದ್ಧಾ ಸ್ನೇಹಿತರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು