ಶುಕ್ರವಾರ, ಫೆಬ್ರವರಿ 26, 2021
32 °C

ಜಮ್ಮು: ಎನ್‌ಕೌಂಟರ್‌ನಲ್ಲಿ ಉಗ್ರನ ಹತ್ಯೆ, ಭಾರಿ ಶಸ್ತ್ರಾಸ್ತ್ರ ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ದೊಡ್ಡ ಮಟ್ಟದ ದಾಳಿಯೊಂದಕ್ಕೆ ಸಂಚು ರೂಪಿಸಿದ್ದರು ಎನ್ನಲಾದ ಮೂವರು ಉಗ್ರರನ್ನು ಶ್ರೀನಗರದ ಹೊರವಲಯದಲ್ಲಿ ಭದ್ರತಾ ಪಡೆ ಸಿಬ್ಬಂದಿ ಹೊಡೆದುರುಳಿಸಿದ್ದಾರೆ.

ಶ್ರೀನಗರ–ಬಾರಾಮುಲ್ಲಾ ಹೆದ್ದಾರಿಯಲ್ಲಿರುವ ಲವೆಪೊರಾ ಪ್ರದೇಶದಲ್ಲಿ ಮಂಗಳವಾರ ಸಂಜೆ ಉಗ್ರರು ಮತ್ತು ಭದ್ರತಾ ಪಡೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ. ‘ಈ ಪ್ರದೇಶದಲ್ಲಿ ಉಗ್ರರ ಚಟುವಟಿಕೆ ಹೆಚ್ಚಾಗುತ್ತಿರುವುದರ ಬಗ್ಗೆ ಕಳೆದ ಕೆಲ ದಿನಗಳಿಂದ ಗುಪ್ತಚರ ಮಾಹಿತಿ ದೊರೆಯುತ್ತಿತ್ತು. ಮಂಗಳವಾರ, ಇಲ್ಲಿನ ಮನೆಯೊಂದರಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ದೊರೆಯಿತು’ ಎಂದು ಕಿಲೊ ಫೋರ್ಸ್‌ನ ಜನರಲ್‌ ಆಫಿಸರ್‌ ಕಮಾಂಡಿಂಗ್‌ ಮೇಜರ್‌ ಜನರಲ್‌ ಎಚ್‌.ಎಸ್‌.ಸಾಹಿ ಸುದ್ದಿಗಾರರಿಗೆ ತಿಳಿಸಿದರು.

‘ಮನೆಯೊಳಗೆ ಉಗ್ರರು ಅವಿತಿರುವುದು ಖಚಿತವಾದ ಬಳಿಕ, ಅವರಿಗೆ ಶರಣಾಗುವಂತೆ ಸೇನೆಯ ರಾಷ್ಟ್ರೀಯ ರೈಫಲ್ಸ್‌, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸಿಆರ್‌ಪಿಎಫ್‌ ಸಿಬ್ಬಂದಿ ಹೇಳಿದ್ದರು. ಆದರೆ, ಉಗ್ರರು ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ
ದರು. ಜೊತೆಗೆ ಗ್ರೆನೇಡ್‌ ಕೂಡಾ ಎಸೆದಿದ್ದರು. ರಾತ್ರಿಯಾಗಿದ್ದ ಕಾರಣ, ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ, ಇಡೀ ಪ್ರದೇಶವನ್ನು ಸುತ್ತುವರಿಯಲಾಗಿತ್ತು. ಬುಧವಾರ ಬೆಳಗ್ಗೆ ಕಾರ್ಯಾಚರಣೆ ಮುಂದುವರಿಸಿದ ಸಂದರ್ಭದಲ್ಲಿ, ದಾಳಿಗೆ ಉಗ್ರರು ಭಾರಿ ಶಸ್ತ್ರಾಸ್ತ್ರಗಳನ್ನು ಬಳಸಿದರು. ಸೇನೆಯ ಪ್ರತಿದಾಳಿಯಲ್ಲಿ ಉಗ್ರರು ಮೃತಪಟ್ಟರು’ ಎಂದು ಸಾಹಿ ಹೇಳಿದರು.

‘ಹೆದ್ದಾರಿಯಲ್ಲಿ ದೊಡ್ಡ ಮಟ್ಟದ ದಾಳಿ ನಡೆಸಲು ಮೂವರೂ ಉಗ್ರರು ಸಂಚು ರೂಪಿಸಿದ್ದರು. ಭದ್ರತಾ ಸಿಬ್ಬಂದಿ ಅವರನ್ನು ಸುತ್ತುವರಿದ ಸಂದರ್ಭದಲ್ಲಿ ಅವರು ಬಳಸಿದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳೇ ಇದಕ್ಕೆ ಸಾಕ್ಷಿ. ಉಗ್ರರು ಯಾವ ಸಂಘಟನೆಗೆ ಸೇರಿದವರು ಎನ್ನು
ವುದನ್ನು ಪತ್ತೆಹಚ್ಚಲಾಗುತ್ತಿದೆ’ ಎಂದು ಸೇನೆಯ ಕಮಾಂಡರ್‌ ಹೇಳಿದರು.

ಮೃತಪಟ್ಟ ಮೂವರೂ ಉಗ್ರರು ಸ್ಥಳೀಯರಾಗಿದ್ದು, ಇತ್ತೀಚೆಗಷ್ಟೇ ಉಗ್ರ ಸಂಘಟನೆ ಸೇರಿದ್ದರು ಎನ್ನಲಾಗಿದೆ. ಭದ್ರತಾ ಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ಅವರ ಮೇಲೆ ಕೆಲ ಯುವಕರು ಕಲ್ಲೆಸೆದ ಘಟನೆಯೂ ನಡೆದಿದೆ. ಮಂಗಳವಾರ ಸಂಜೆಯಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಕಾರ್ಯಾಚರಣೆ ಮುಕ್ತಾಯವಾದ ಬಳಿಕ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಈ ವರ್ಷ ಶ್ರೀನಗರದಲ್ಲಿ ನಡೆದ 10ನೇ ಎನ್‌ಕೌಂಟರ್‌ ಇದಾಗಿದ್ದು, ಇಲ್ಲಿಯವರೆಗೂ 22 ಉಗ್ರರು ಹತ್ಯೆಯಾಗಿದ್ದಾರೆ. ‘ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಚುರುಕಿನ ಕಾರ್ಯಾಚರಣೆ ನಡೆಸುತ್ತಿದ್ದು, ಗುಪ್ತಚರ ವಿಭಾಗವೂ ಸಕ್ರಿಯವಾಗಿದೆ. ಹೀಗಾಗಿ ಉಗ್ರರು ಶ್ರೀನಗರದತ್ತ ಸ್ಥಳಾಂತರಗೊಳ್ಳುತ್ತಿದ್ದಾರೆ. ಆದ್ದರಿಂದ ಶ್ರೀನಗರದಲ್ಲಿ ಇತ್ತೀಚೆಗೆ ಗುಂಡಿನ ಚಕಮಕಿ ಹೆಚ್ಚಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ನಮ್ಮ ಮಕ್ಕಳು ಉಗ್ರರಲ್ಲ’
ಲವೆಪೊರಾ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ಉಗ್ರರ ಕುಟುಂಬ ಸದಸ್ಯರು ಸೇನೆ, ಪೊಲೀಸರ ಹೇಳಿಕೆಯನ್ನು ನಿರಾಕರಿಸಿದ್ದು, ‘ನಮ್ಮ ಮಕ್ಕಳು ನಾಗರಿಕರು, ಉಗ್ರರಲ್ಲ’ ಎಂದಿದ್ದಾರೆ.

ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅಜೀಜ್‌ ಅಹಮ್ಮದ್‌ ಗನೀ, ಅಥೇರ್‌ ಮುಷ್ತಕ್‌ ವಾನಿ ಹಾಗೂ ಶೋಪಿಯನ್‌ ಜಿಲ್ಲೆಯ ಜುಬೈರ್‌ ಅಹ್ಮದ್‌ ಲೊನೆಯ ಕುಟುಂಬ ಸದಸ್ಯರು, ಶ್ರೀನಗರ ಪೊಲೀಸ್‌ ನಿಯಂತ್ರಣ ಕೊಠಡಿಯ ಮುಂಭಾಗ ಜಮಾಯಿಸಿ ಪ್ರತಿಭಟನೆ ನಡೆಸಿದರು. ‘ಈ ಎನ್‌ಕೌಂಟರ್‌ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ನಮಗೆ ನ್ಯಾಯ ನೀಡಬೇಕು’ ಎಂದು ಅವರು ಆಗ್ರಹಿಸಿದರು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು