ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾ ನೇತೃತ್ವದ ಸಂಸದೀಯ ಸಮಿತಿ ಹಿಂದಿ ಶಿಫಾರಸಿಗೆ ಸ್ಟಾಲಿನ್ ಆಕ್ಷೇಪ: ಮೋದಿಗೆ ಪತ್ರ

Last Updated 16 ಅಕ್ಟೋಬರ್ 2022, 13:01 IST
ಅಕ್ಷರ ಗಾತ್ರ

ಚೆನ್ನೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ, ಅಧಿಕೃತ ಭಾಷೆಗೆ ಸಂಬಂಧಿಸಿದ ಸಂಸದೀಯ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿರುವ ಶಿಫಾರಸಿನಲ್ಲಿ ಹಿಂದಿಗೆ ನೀಡಿರುವ ಆದ್ಯತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಪತ್ರ ಬರೆದಿದ್ದಾರೆ.

ಹಿಂದಿಗಿಂತಲೂ ಬೇರೆ ಭಾಷೆಗಳನ್ನು ಮಾತನಾಡುವ ಜನರ ಸಂಖ್ಯೆ ಭಾರತೀಯ ಒಕ್ಕೂಟದಲ್ಲಿ ಹೆಚ್ಚಾಗಿದೆ. ಪ್ರತಿಯೊಂದು ಭಾಷೆಯು ತನ್ನದೇ ಸಂಸ್ಕೃತಿ, ವಿಶೇಷತೆಯನ್ನು ಹೊಂದಿದೆ. ಇದನ್ನು ನೀವು ಪ್ರಶಂಸಿಸುತ್ತೀರಿ ಎಂಬುದರ ಬಗ್ಗೆ ನನಗೆ ಖಾತ್ರಿಯಿದೆ ಎಂದು ಸ್ಟಾಲಿನ್‌ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಹಿಂದಿಯನ್ನು ಹೇರುವ ಇತ್ತೀಚಿನ ಪ್ರಯತ್ನಗಳು ಅಪ್ರಾಯೋಗಿಕ ಮತ್ತು ವಿಭಜಕ ನಡೆ. ಇದು, ಹಿಂದಿ ಮಾತನಾಡದ ಜನರನ್ನು ಹಲವು ವಿಷಯಗಳಲ್ಲಿ ಬಹಳ ಅನಾನುಕೂಲಕರ ಪರಿಸ್ಥಿತಿಗೆ ತಳ್ಳುತ್ತದೆ. ಇದು ತಮಿಳುನಾಡು ಮಾತ್ರವಲ್ಲದೆ ತಮ್ಮ ಮಾತೃಭಾಷೆಯನ್ನು ಗೌರವಿಸುವ ಯಾವುದೇ ರಾಜ್ಯವೂ ಒಪ್ಪುವಂಥದ್ದಲ್ಲ ಎಂದು ಸ್ಟಾಲಿನ್‌ ಅಭಿಪ್ರಾಯಪಟ್ಟಿದ್ದಾರೆ.

ವೈಜ್ಞಾನಿಕ ಅಭಿವೃದ್ಧಿ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿ ತಮಿಳೂ ಸೇರಿದಂತೆ ಎಲ್ಲಾ ಭಾಷೆಗಳನ್ನು ಸೇರಿಸುವುದು, ಎಲ್ಲಾ ಭಾಷೆಗಳನ್ನು ಉತ್ತೇಜಿಸುವುದು, ಎಲ್ಲಾ ಭಾಷಿಕರಿಗೆ ಸಮಾನವಾದ ಶಿಕ್ಷಣ ಒದಗಿಸುವುದು, ಉದ್ಯೋಗದಲ್ಲಿ ಎಲ್ಲ ಭಾಷಿಕರಿಗೂ ಸಮಾನ ಅವಕಾಶ ಕಲ್ಪಿಸುವುದರತ್ತ ಒಕ್ಕೂಟ ಸರ್ಕಾರ ಪ್ರಯತ್ನಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅಮಿತ್‌ ಶಾ ನೇತೃತ್ವದ ಸಂಸದೀಯ ಸಮಿತಿ ವರದಿಯಲ್ಲಿ ಶಿಫಾರಸ್ಸು ಮಾಡಿರುವಂತೆ ವಿವಿಧ ರೀತಿಯಲ್ಲಿ ಹಿಂದಿ ಹೇರುವ ಪ್ರಯತ್ನಗಳು ನಡೆಯಬಾರದು. ಭಾರತದ ಏಕತೆಯ ವೈಭವದ ಜ್ವಾಲೆಯು ಶಾಶ್ವತವಾಗಿ ಪ್ರಜ್ವಲಿಸಬೇಕು ಎಂದು ನಾನು ವಿನಂತಿಸುತ್ತೇನೆ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಏನಿದೆ ಅಮಿತ್‌ ಶಾ ಸಮಿತಿಯ ಶಿಫಾರಸಿನಲ್ಲಿ?

ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ, ಅಧಿಕೃತ ಭಾಷೆಗೆ ಸಂಬಂಧಿಸಿದ ಸಂಸದೀಯ ಸಮಿತಿಯು ಕೆಲವು ಶಿಫಾರಸುಗಳನ್ನು ಈಚೆಗೆ ಸಲ್ಲಿಸಿದೆ. ಇವು ಹಿಂದಿ ಭಾಷೆಯ ಬಳಕೆಗೆ ಸಂಬಂಧಿಸಿದ ಶಿಫಾರಸುಗಳು. ಬೋಧನಾ ಮಾಧ್ಯಮವಾಗಿ ಈಗ ಬಳಕೆಯಲ್ಲಿರುವ ಇಂಗ್ಲಿಷ್‌ ಭಾಷೆಯ ಬದಲಾಗಿ ಹಂತ ಹಂತವಾಗಿ ಹಿಂದಿ ಅಥವಾ ಸ್ಥಳೀಯ ಭಾಷೆಯನ್ನು ತರಬೇಕು ಎಂದು ಸಮಿತಿಯ ಶಿಫಾರಸು ಹೇಳಿದೆ. ಹಿಂದಿ ಭಾಷಿಕ ಪ್ರದೇಶಗಳಲ್ಲಿ ಇರುವ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ (ಐಐಟಿ), ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್‌), ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ಕೇಂದ್ರೀಯ ವಿದ್ಯಾಲಯಗಳಲ್ಲಿನ ಬೋಧನಾ ಮಾಧ್ಯಮ ಹಿಂದಿ ಆಗಬೇಕು, ಇತರ ಪ್ರದೇಶಗಳಲ್ಲಿನ ಈ ಸಂಸ್ಥೆಗಳಲ್ಲಿನ ಬೋಧನಾ ಮಾಧ್ಯಮ ಅಲ್ಲಿನ ಭಾಷೆ ಆಗಿರಬೇಕು ಎಂದು ಕೂಡ ಸಮಿತಿಯು ಹೇಳಿದೆ. ನೇಮಕಾತಿ ಪರೀಕ್ಷೆಗಳು ಹಿಂದಿಯಲ್ಲಿ ಇರಬೇಕು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಆರ್‌ಡಿಒ) ಹಿಂದಿಯನ್ನೇ ಬಳಸಬೇಕು ಎಂದು ಕೂಡ ಹೇಳಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಹಿಂದಿ ಬಳಕೆಯನ್ನು ಉತ್ತೇಜಿಸುವ ಉದ್ದೇಶದ 112 ಶಿಫಾರಸುಗಳನ್ನು ಸಮಿತಿಯು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT