ಮೋದಿ ಬಜೆಟ್‌ನಲ್ಲಿ ದೇಶ ಕಾಯುವ ಯೋಧರಿಗೆ ದ್ರೋಹ: ರಾಹುಲ್

ನವದೆಹಲಿ: 2021-22ನೇ ಹಣಕಾಸು ಸಾಲಿನ ಕೇಂದ್ರ ಬಜೆಟ್ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶ ಕಾಯುವ ಯೋಧರಿಗೆ ದ್ರೋಹ ಬಗೆಯಲಾಗಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಗಡಿಯಲ್ಲಿ ಚೀನಾದ ಆಕ್ರಮಣವನ್ನು ಎದುರಿಸುತ್ತಿರುವ ಯೋಧರ ಪರಿಸ್ಥಿತಿ ಸುಧಾರಿಸಲು ಏನನ್ನು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯ ಉದ್ಯಮ/ಬಂಡವಾಳಶಾಹಿ ಮಿತ್ರರನ್ನು ಕೇಂದ್ರಿಕರಿಸಿದ ಬಜೆಟ್‌ನಲ್ಲಿ ಕಠಿಣ ಪರಿಸ್ಥಿತಿಯಲ್ಲೂ ಚೀನಾದ ಆಕ್ರಮಣವನ್ನು ಎದುರಿಸುತ್ತಿರುವ ಯೋಧರಿಗೆ ಯಾವುದೇ ಬೆಂಬಲ ದೊರಕಿಲ್ಲ. ದೇಶ ಕಾಯುವ ಯೋಧರಿಗೆ ದ್ರೋಹ ಬಗೆಯಲಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದರು.
Modi’s crony centric budget means-
Jawans facing Chinese aggression in extreme conditions will get no support.
India’s defenders betrayed.
— Rahul Gandhi (@RahulGandhi) February 5, 2021
ನರೇಂದ್ರ ಮೋದಿ ಬಜೆಟ್‌ನಲ್ಲಿ ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ (ಎಂಎಸ್‌ಎಂಇ) ವಲಯದ ಕೆಲಸಗಾರರಿಗೂ ದ್ರೋಹ ಬಗೆಯಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ರೈತರು ಪ್ರತಿಭಟನೆ ಹಿಂಪಡೆಯುವುದಿಲ್ಲ, ಸರ್ಕಾರವೇ ಏನಾದರೂ ಮಾಡಬೇಕು: ರಾಹುಲ್ ಗಾಂಧಿ
ಅತಿ ಹೆಚ್ಚು ತೊಂದರೆಗೊಳಗಾಗಿರುವ ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ ವಲಯದವರಿಗೆ ಕಡಿಮೆ ಬಡ್ಡಿಯ ಸಾಲವನ್ನು ನೀಡಲಾಗಿಲ್ಲ. ಜಿಎಸ್‌ಟಿ ನೆರವನ್ನು ನೀಡಲಾಗಿಲ್ಲ ಎಂದು ಆರೋಪಿಸಿದರು.
ಈ ಮೊದಲು ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ಜನರ ಕೈಗಳಿಗೆ ಹಣವನ್ನು ತಲುಪಿಸುವುದನ್ನು ಮರೆತುಬಿಡಿ. ನರೇಂದ್ರ ಮೋದಿ ಸರ್ಕಾರ ಭಾರತದ ಸಂಪತ್ತನ್ನು ಬಂಡವಾಳಶಾಹಿ ಉದ್ಯಮ ಮಿತ್ರರಿಗೆ ಹಸ್ತಾಂತರಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.