ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಏಕ ಡೋಸ್‌ನ ‘ಸ್ಪುಟ್ನಿಕ್ ಲೈಟ್‌‘ ಶೀಘ್ರ

ಶೇ 79.4ರಷ್ಟು ಪರಿಣಾಮಕಾರಿ * ರಷ್ಯಾದ ರಾಯಭಾರಿ ನಿಕೋಲಾಯ್‌ ಕುಡಸೇವ್ ಹೇಳಿಕೆ
Last Updated 16 ಮೇ 2021, 16:57 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಸೋಂಕು ನಿರೋಧಕವಾಗಿ ಒಂದೇ ಡೋಸ್‌ನಲ್ಲಿ ನೀಡಬಹುದಾದ ಲಸಿಕೆಯನ್ನು ಭಾರತದಲ್ಲಿ ಆದಷ್ಟು ಶೀಘ್ರ ಬಿಡುಗಡೆ ಮಾಡಲು ರಷ್ಯಾ ಚಿಂತನೆ ನಡೆಸಿದೆ. ಭಾರತದಲ್ಲಿನ ರಷ್ಯಾದ ರಾಯಭಾರಿ ನಿಕೋಲಾಯ್‌ ಕುಡಸೇವ್ ಈ ವಿವರ ನೀಡಿದ್ದಾರೆ.

ರಷ್ಯಾದಿಂದ ಒಟ್ಟು 60 ಸಾವಿರ ಡೋಸ್‌ ‘ಸ್ಪುಟ್ನಿಕ್‌ ವಿ’ ಲಸಿಕೆಯ ಎರಡನೇ ಬ್ಯಾಚ್‌ ಭಾನುವಾರ ಹೈದರಾಬಾದ್‌ಗೆ ತಲುಪಿದ ಸಂದರ್ಭದಲ್ಲಿ ಅವರು ಈ ಮಾಹಿತಿ ಪ್ರಕಟಿಸಿದ್ದಾರೆ.

ಅಲ್ಲದೆ, ಭಾರತದಲ್ಲಿ ಇತ್ತೀಚಿಗೆ ಪರಿಚಯಿಸಿರುವ ‘ಸ್ಪುಟ್ನಿಕ್‌ ವಿ’ ಲಸಿಕೆಯ ಉತ್ಪಾದನೆಯ ಪ್ರಮಾಣವನ್ನು ವಾರ್ಷಿಕ 850 ಮಿಲಿಯನ್‌ ಡೋಸ್‌ಗಳಿಗೆ ಹಂತ ಹಂತವಾಗಿ ಹೆಚ್ಚಿಸುವ ಗುರಿಯಿದೆ ಎಂದೂ ಇದೇ ಸಂದರ್ಭದಲ್ಲಿ ತಿಳಿಸಿದರು.

‘ಇಂದು ಭಾರತಕ್ಕೆ ಎರಡನೇ ಬ್ಯಾಚ್‌ನಲ್ಲಿ 60 ಸಾವಿರ ಡೋಸ್ ತಲುಪಿದೆ. ಇದರ ಮಾದರಿಯನ್ನು ಕೇಂದ್ರ ಔಷಧ ಪ್ರಯೋಗಾಲಯಕ್ಕೆ ಕಳುಹಿಸಲಿದ್ದೇವೆ’ ಎಂದು ಲಸಿಕೆ ಆಮದು ಮಾಡಿಕೊಂಡಿರುವ ಡಾ. ರೆಡ್ಡೀಸ್‌ ಲ್ಯಾಬೊರೇಟರಿ ಸಂಸ್ಥೆಯು ಇನ್ನೊಂದೆಡೆ ಟ್ವೀಟ್ ಮಾಡಿದೆ.

‘ರಷ್ಯಾದ ‘ಸ್ಪುಟ್ನಿಕ್‌ ವಿ’ ಲಸಿಕೆಯನ್ನು ಭಾರತದಲ್ಲಿ ತುರ್ತು ಸಂದರ್ಭದಲ್ಲಿ ಬಳಸಲು ಇತ್ತೀಚೆಗೆ ಪರಿಚಯಿಸಲಾಗಿತ್ತು. ಎರಡನೇ ಬ್ಯಾಚ್‌ ಕೂಡಾ ಸಕಾಲಕ್ಕೆ ಆಗಮಿಸಿದೆ. ಸ್ಪುಟ್ನಿಕ್‌ ವಿ ಲಸಿಕೆಯ ಪರಿಣಾಮ ಜಗತ್ತಿಗೆ ತಿಳಿದಿದೆ’ ಎಂದು ಕುಡಸೇವ್ ಟ್ವೀಟ್‌ ಮಾಡಿದ್ದಾರೆ.

‘ಸ್ಪುಟ್ನಿಕ್ ಲೈಟ್‌’ ಶೀಘ್ರ: ಅಲ್ಲದೆ, ಭಾರತದಲ್ಲಿ ‘ಸ್ಪುಟ್ನಿಕ್‌ ವಿ ಲೈಟ್‌’ ಹೆಸರಿನ ಲಸಿಕೆಯನ್ನು ಶೀಘ್ರವೇ ಪರಿಚಯಿಸಲಾಗುತ್ತದೆ. ಇದು ಸ್ಪುಟ್ನಿಕ್‌ ವಿ ಲಸಿಕೆಯ (ಆರ್‌ಎಡಿ26) ಭಾಗವಾಗಿದೆ’ ಎಂದು ರಷ್ಯಾದ ಡೈರೆಕ್ಟ್‌ ಇನ್‌ವೆಸ್ಟ್‌ಮೆಂಟ್‌ ಫಂಡ್‌ (ಆರ್‌ಡಿಐಎಫ್‌) ತಿಳಿಸಿದೆ.

ಅದರ ಪ್ರಕಾರ, ‘ಸ್ಪುಟ್ನಿಕ್‌ ಲೈಟ್‌‘ ಲಸಿಕೆ ಶೇ 79.4ರಷ್ಟು ಪರಿಣಾಮಕಾರಿ. ರಷ್ಯಾದ ನಾಗರಿಕರಿಗೆ ಒಂದೇ ಡೋಸ್‌ನಲ್ಲಿ ಲಸಿಕೆ ನೀಡಿದ 28 ದಿನದ ನಂತರ ಸಂಗ್ರಹಿಸಿದ ಅಂಕಿ–ಅಂಶ ಆಧರಿಸಿ ಈ ಫಲಿತಾಂಶ ನೀಡಲಾಗಿದೆ. ಲಸಿಕೆ ಪಡೆದವರಿಗೆ ಸಾಮೂಹಿಕ ಲಸಿಕೆ ಅಭಿಯಾನದಲ್ಲಿ ಡಿಸೆಂಬರ್‌ 5 ಮತ್ತು ಏಪ್ರಿಲ್‌ 15ರ ನಡುವೆ ಎರಡನೇ ಡೋಸ್‌ ಲಸಿಕೆ ನೀಡಲಾಗಿಲ್ಲ’ ಎಂದು ಆರ್‌ಡಿಐಎಫ್‌ ವಿವರ ನೀಡಿದೆ.

ವಿಶ್ವದಾದ್ಯಂತ ಸ್ಪುಟ್ನಿಕ್‌ ವಿ ಲಸಿಕೆಯನ್ನು ರಷ್ಯಾದ ಆರ್‌ಡಿಐಎಫ್‌ ಪ್ರಚುರಪಡಿಸುತ್ತಿದೆ. ಭಾರತದಲ್ಲಿ ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಲು ಹಾಗೂ ಲಸಿಕೆಯನ್ನು ಹಂಚಿಕೆ ಮಾಡಲು ಡಾ.ರೆಡ್ಡೀಸ್‌ ಲ್ಯಾಬೊರೇಟರಿ ಲಿಮಿಟೆಡ್ ಜೊತೆಗೆ ಸೆಪ್ಟೆಂಬರ್ 2020ರಲ್ಲಿಆರ್‌ಡಿಐಎಫ್‌ ಒಪ್ಪಂದ ಮಾಡಿಕೊಂಡಿದೆ. ಭಾರತಕ್ಕೆ 100 ಮಿಲಿಯನ್‌ ಡೋಸ್‌ ಲಸಿಕೆ ಪೂರೈಸಲು ಒಪ್ಪಿದೆ.

ಸ್ಪುಟ್ನಿಕ್‌ ವಿ ಲಸಿಕೆಗೆ ಭಾರತ ಪ್ರಮುಖ ಉತ್ಪಾದನಾ ನೆಲೆ ಎಂದು ರಷ್ಯಾ ಬಲವಾಗಿ ನಂಬಿದೆ. ದೇಶದ ಪ್ರಮುಖ ಔಷಧ ಉತ್ಪಾದಕ ಕಂಪನಿಗಳು ಅಂದರೆ ಗ್ಲ್ಯಾಂಡ್ ಫಾರ್ಮಾ, ಹೆಟೆರೊ ಬಿಯೊಫಾರ್ಮಾ, ಪನೇಷಿಯ ಬಯೊಟೆಕ್, ಸ್ಟೆಲಿಸ್‌ ಬಯೊಫಾರ್ಮಾ ಮತ್ತು ವಿರ್ಚೌ ಬಯೊಟೆಕ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಆರ್‌ಡಿಐಎಫ್‌ ಇತ್ತೀಚೆಗೆ ಪ್ರಕಟಿಸಿತ್ತು. ದೇಶದಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಹಂತ ಹಂತವಾಗಿ ವಾರ್ಷಿಕ 850 ಮಿಲಿಯನ್‌ ಡೋಸ್‌ಗೆ ಹೆಚ್ಚಿಸುವ ಗುರಿಯನ್ನು ರಷ್ಯಾದ ಆರ್‌ಡಿಐಎಫ್‌ ಹೊಂದಿದೆ.

ರಷ್ಯಾದಲ್ಲಿ ‘ಸ್ಪುಟ್ನಿಕ್‌ ವಿ’ ಲಸಿಕೆಯನ್ನು ಕೋವಿಡ್ ನಿರೋಧಕವಾಗಿ ಯಶಸ್ವಿಯಾಗಿ ಬಳಕೆ ಮಾಡಲಾಗಿದೆ. ಈ ಲಸಿಕೆಯು ಕೊರೊನಾದ ರೂಪಾಂತರ ಸೋಂಕು ತಡೆಗೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕುಡಸೇವ್ ಅವರು ಟ್ವೀಟ್ ಮಾಡಿದ್ದಾರೆ.

ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್ ವಿ ಲಸಿಕೆಯನ್ನು ಭಾರತದಲ್ಲಿ ತುರ್ತು ಸಂದರ್ಭದಲ್ಲಿ ಸಾರ್ವಜನಿಕ ಬಳಕೆಗೆ ಏಪ್ರಿಲ್‌ 12ರಂದು ಅನುಮೋದಿಸಲಾಗಿತ್ತು. ದೇಶದಲ್ಲಿ ಸೋಂಕು ಪ್ರಕರಣಗಳು ತೀವ್ರಗತಿಯಲ್ಲಿ ಏರಿದಂತೆಯೇ ಈ ತೀರ್ಮಾವನ್ನು ತೆಗೆದುಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT