ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಬಾ ಪೆಂಡಾಲ್‌ಗೆ ಅಕ್ರಮವಾಗಿ ಪ್ರವೇಶಿಸಿದ ಮೂವರು ಹಿಂದೂಯೇತರರು ಪೊಲೀಸ್‌ ವಶಕ್ಕೆ

Last Updated 2 ಅಕ್ಟೋಬರ್ 2022, 13:51 IST
ಅಕ್ಷರ ಗಾತ್ರ

ಉಜ್ಜೈನಿ: ತಮ್ಮ ಗುರುತನ್ನು ಮುಚ್ಚಿಟ್ಟು ಇಲ್ಲಿನ ಗರ್ಬಾ ಪೆಂಡಾಲ್‌ವೊಂದನ್ನು ಪ್ರವೇಶಿಸಿದ ಮೂವರು ಹಿಂದೂಯೇತರ ವ್ಯಕ್ತಿಗಳನ್ನು ಬಜರಂಗ ದಳದ ಕಾರ್ಯಕರ್ತರು ಭಾನುವಾರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಾಧವ್‌ನಗರದ ಕಾಳಿದಾಸ ಅಕಾಡೆಮಿಯಲ್ಲಿ ಗರ್ಬಾ ಪೆಂಡಾಲ್‌ ಹಾಕಲಾಗಿತ್ತು. ಶನಿವಾರ ರಾತ್ರಿ ಪೆಂಡಾಲ್‌ ಪ್ರವೇಶಿಸಿದ ಈ ಮೂವರನ್ನು ಸುತ್ತುವರಿದ ಜನರ ಗುಂಪು, ‘ಅವರನ್ನು ಬಿಡಿ, ಅವರಿಗೆ ಹೊಡೆಯಬೇಡಿ’ ಎಂದು ಹೇಳುತ್ತಿರುವ ದೃಶ್ಯದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಜನರ ಗಲಾಟೆ ಬಗ್ಗೆ ತಿಳಿದ ಗರ್ಬಾ ಆಯೋಜಕರು, ಬಹುಶಃ ಅಸಭ್ಯ ಹಾಡುಗಳನ್ನು ಹಾಕಿರಬಹುದು ಎಂದು ಪರಿಶೀಲಿಸಲು ಮುಂದಾದಾಗ ಮೂವರು ಹಿಂದೂಯೇತರ ವ್ಯಕ್ತಿಗಳು ಪೆಂಡಾಲ್‌ ಅನ್ನು ಪ್ರವೇಶಿಸಿರುವುದು ತಿಳಿದುಬಂತು. ಜನರು ಅವರನ್ನು ಸುತ್ತುವರೆದು ಹೊಡೆಯಲು ಪ್ರಾರಂಭಿಸಿದಂತೆ, ಬಜರಂಗ ದಳದ ಕಾರ್ಯಕರ್ತರು ಮೂವರನ್ನು ಪೊಲೀಸರಿಗೆ ಒಪ್ಪಿಸಿದರು.

‘ಮುಸ್ಲಿಂ ವ್ಯಕ್ತಿಗಳುಈ ರೀತಿ ಪೆಂಡಾಲ್‌ಗಳಿಗೆ ಪ್ರವೇಶಿಸುವುದು ‘ಲವ್‌ ಜಿಹಾದ್‌’ ಮಾಡುವ ಉದ್ದೇಶದಿಂದಾಗಿ’ ಎಂದು ಬಜರಂಗ ದಳ ಸಂಚಾಲಕ ಅಂಕಿತ್‌ ಚೌಬೆ ಆರೋಪಿಸಿದರು.

ಗುರುತು ಪರಿಶೀಲಿಸಿ: ‘ಲವ್ ಜಿಹಾದ್‌’ ಅನ್ನು ತಡೆಗಟ್ಟುವ ಉದ್ದೇಶದಿಂದಾಗಿ, ಗರ್ಬಾ ಪೆಂಡಾಲ್‌ಗಳನ್ನು ಪ್ರವೇಶಿಸುವವರ ಗುರುತಿನ ಚೀಟಿಯನ್ನು ಪರಿಶೀಲಿಸಿ ನಂತರ ಒಳಗೆ ಬಿಟ್ಟುಕೊಳ್ಳಬೇಕು’ ಎಂದು ಮಧ್ಯಪ್ರದೇಶದ ಸಂಸ್ಕೃತಿ ಸಚಿವೆ ಉಷಾ ಠಾಕೂರ್‌ ಅವರು ಇತ್ತೀಚೆಗೆ ಹೇಳಿದ್ದರು.

***

ಹಲವು ಹಿಂದೂಪರ ಸಂಘಟನೆಗಳು, ಗರ್ಬಾ ಪೆಂಡಾಲ್‌ಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸಿವೆ. ಅದಕ್ಕಾಗಿ ತಮ್ಮ ಕಾರ್ಯಕರ್ತರನ್ನು ಪೆಂಡಾಲ್‌ಗಳಲ್ಲಿ ನಿಯೋಜಿಸಿವೆ. ಘಟನೆಯ ಕುರಿತು ಯಾರೂ ಈ ವರೆಗೆ ದೂರು ನೀಡಿಲ್ಲ. ಮೂವರನ್ನು ಬಿಟ್ಟು ಕಳುಹಿಸಿದ್ದೇವೆ

– ವಿನೋದ್‌ ಕುಮಾರ್‌ ಮೀನಾ, ನಗರ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT