ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋವಿಡ್‌ ರೋಗಿಗಳಲ್ಲಿ ಹೆಚ್ಚುತ್ತಿದೆ ಶಿಲೀಂಧ್ರ ಸೋಂಕು: ದೃಷ್ಟಿಹೀನತೆಯ ಅಪಾಯ

ಫಾಲೋ ಮಾಡಿ
Comments

ಅಹಮದಾಬಾದ್‌/ ಮುಂಬೈ: ಕೋವಿಡ್‌–19 ಸೋಂಕಿತರಲ್ಲಿ ಗಂಭೀರವಾದ ಶಿಲೀಂಧ್ರ ಸೋಂಕು 'ಮ್ಯೂಕರ್‌ಮೈಕಾಸಿಸ್‌' (mucormycosis) ಪ್ರಕರಣಗಳು ಏರಿಕೆಯಾಗುತ್ತಿರುವುದಾಗಿ ಮಹಾರಾಷ್ಟ್ರ ಮತ್ತು ಗುಜರಾತ್‌ನ ಆರೋಗ್ಯ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

ಗುಜರಾತ್‌ನ ಹಲವು ಭಾಗಗಳಿಂದ 'ಮ್ಯೂಕರ್‌ಮೈಕಾಸಿಸ್‌' ರೋಗಿಗಳು ಚಿಕಿತ್ಸೆಗಾಗಿ ಬರುತ್ತಿರುವುದಾಗಿ ಕಿರಣ್‌ ಸೂಪರ್ ಮಲ್ಟಿ–ಸ್ಪೆಷಾಲಿಟಿ ಹಾಸ್ಪಿಟಲ್‌ನ ಮುಖ್ಯಸ್ಥ ಮಥುರ್‌ ಸವಾಣಿ ಹೇಳಿದ್ದಾರೆ. 'ಈಗಾಗಲೇ ಈ ಸೋಂಕಿಗೆ ಸಂಬಂಧಿಸಿದ ಸುಮಾರು 50 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಇನ್ನೂ 60 ಜನರು ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ' ಎಂದಿದ್ದಾರೆ.

ಅಪರೂಪದ ಈ ಶಿಲೀಂಧ್ರ ಸೋಂಕಿನಿಂದ ದೃಷ್ಟಿಹೀನತೆ ಅಥವಾ ಇತರೆ ಗಂಭೀರ ಸಮಸ್ಯೆಗಳು ರೋಗಿಗಳಲ್ಲಿ ಉಂಟಾಗುತ್ತಿವೆ.

ಅಹಮದಾಬಾದ್‌ನ ಅಸರ್ವಾ ಸಿವಿಲ್‌ ಹಾಸ್ಪಿಟಲ್‌ನಲ್ಲಿ ನಿತ್ಯ ಐದರಿಂದ 10 ಮಂದಿ 'ಮ್ಯೂಕರ್‌ಮೈಕಾಸಿಸ್‌' ರೋಗಿಗಳಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. 'ಕೋವಿಡ್‌–19 ಎರಡೇ ಅಲೆ ತೀವ್ರವಾದ ಬೆನ್ನಲ್ಲೇ ಈ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಐದು ಪ್ರಕರಣಗಳಲ್ಲಿ ಕನಿಷ್ಠ ಒಬ್ಬರಿಗೆ ಕಣ್ಣಿನ ಸಮಸ್ಯೆ ಎದುರಾಗುತ್ತಿದೆ. ಹಲವು ಜನರು ಕುರುಡುತನ ಅನುಭವಿಸುತ್ತಿದ್ದಾರೆ' ಎಂದು ಇಎನ್‌ಟಿ ತಜ್ಞ ಡಾ.ದೇವಂಗ್‌ ಗುಪ್ತ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕೋವಿಡ್‌–19 ಸೋಂಕಿನಿಂದ ಗುಣಮುಖರಾದವರ ಪೈಕಿ ಕನಿಷ್ಠ ಎಂಟು ಜನರು 'ಮ್ಯೂಕರ್‌ಮೈಕಾಸಿಸ್‌'ನಿಂದಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. 200ಕ್ಕೂ ಹೆಚ್ಚು ಜನರಿಗೆ ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ ನಿರ್ದೇಶನಾಲಯದ ಮುಖ್ಯಸ್ಥ ಡಾ.ತಾತ್ಯರಾವ್‌ ಲಹಾನೆ ಹೇಳಿದ್ದಾರೆ.

'ಈ ಕಾಯಿಲೆಯು ಹೊಸದೇನೂ ಅಲ್ಲ, ಆದರೆ ಕೋವಿಡ್–19 ಸೋಂಕಿತರಲ್ಲಿ ಇದು ಹೆಚ್ಚಳ ಕಂಡಿದೆ. ಕೊರೊನ ಸೋಂಕಿತರಿಗೆ ಚಿಕಿತ್ಸೆಗಾಗಿ ಸ್ಟೆರಾಯ್ಡ್‌ ಬಳಸುತ್ತಿರುವುದರಿಂದ ದೇಹದಲ್ಲಿ ಸಕ್ಕರೆ ಅಂಶ ಏರಿಕೆಯಾಗುತ್ತಿದೆ ಹಾಗೂ ಕೆಲವು ಔಷಧಿಗಳು ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಕುಂದಿಸುತ್ತದೆ. ಇಂಥ ಸ್ಥಿತಿಯಲ್ಲಿ ರೋಗಿಗಳಿಗೆ ಸುಲಭವಾಗಿ ಶಿಲೀಂಧ್ರ ಸೋಂಕು ಉಲ್ಬಣಿಸುತ್ತದೆ. ಇಂಥದ್ದೇ ಒಂದು ಪ್ರಕರಣದಲ್ಲಿ ರೋಗಿಯ ಜೀವ ಉಳಿಸಲು ಅವರ ಒಂದು ಕಣ್ಣನ್ನೇ ತೆಗೆಯಬೇಕಾಯಿತು' ಎಂದು ಡಾ.ಲಹಾನೆ ತಿಳಿಸಿದ್ದಾರೆ.

'ಮ್ಯೂಕರ್‌ಮೈಕಾಸಿಸ್‌' ಅಥವಾ ಬ್ಲಾಕ್‌ ಫಂಗಸ್‌

* ಲಕ್ಷಣಗಳು: ತಲೆ ನೋವು, ಜ್ವರ, ಕಣ್ಣಿನ ಕೆಳಗಡೆ ನೋವು, ಮೂಗು ಕಟ್ಟುವುದು, ದೃಷ್ಟಿ ಹೀನತೆ.
* ಚಿಕಿತ್ಸೆ: 21 ದಿನಗಳು ಚುಚ್ಚುಮದ್ದು
* ವೆಚ್ಚ: ದಿನಕ್ಕೆ ಚುಚ್ಚುಮದ್ದುಗಳಿಗಾಗಿ ₹9,000

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT