ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಗನಾ ವಿರುದ್ಧದ ಡ್ರಗ್ಸ್ ಬಳಕೆ‌ ಆರೋಪದ ಬಗ್ಗೆಯೂ ತನಿಖೆ: ಅನಿಲ್‌ ದೇಶ್‌ಮುಖ್‌

Last Updated 8 ಸೆಪ್ಟೆಂಬರ್ 2020, 16:27 IST
ಅಕ್ಷರ ಗಾತ್ರ

ಮುಂಬೈ: ನಟಿ ಕಂಗನಾ ರನೋತ್‌ ಡ್ರಗ್ಸ್‌ ತೆಗೆದುಕೊಳ್ಳುತ್ತಿದ್ದರು ಎಂಬಆರೋಪದ ಕುರಿತು ಮುಂಬೈ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಮಂಗಳವಾರ ತಿಳಿಸಿದರು.

ನಟ ಶೇಖರ್‌ ಸುಮನ್‌ ಅವರ ಪುತ್ರ ಅಧ್ಯಯನ್‌ ಸುಮನ್‌ಕಂಗನಾ ಜೊತೆ ಸಂಬಂಧ ಹೊಂದಿದ್ದರು. ಕಂಗನಾ ಅವರು ಡ್ರಗ್ಸ್‌ ತೆಗೆದುಕೊಳ್ಳುತ್ತಿದ್ದರು ಎಂದು ಅಧ್ಯಯನ್‌ ಅವರೇ ಆರೋಪ ಮಾಡಿದ್ದರು ಎಂದು ದೇಶ್‌ಮುಖ್‌ ತಿಳಿಸಿದರು.

ವಿಧಾನಸಭೆಯಲ್ಲಿ ಶಿವಸೇನಾ ಶಾಸಕರಾದ ಪ್ರತಾಪ್‌ ಸರ್ನಾಯಕ್‌ ಹಾಗೂ ಸುನೀಲ್‌ ಪ್ರಭು ಅವರುಮಂಗಳವಾರ ಈ ವಿಷಯವನ್ನು ಪ್ರಸ್ತಾಪಿಸಿದರು. ಮುಂಬೈ ಹಾಗೂ ಮಹಾರಾಷ್ಟ್ರಕ್ಕೆ ಅವಮಾನ ಎಸಗಿದ್ದಾರೆ ಎಂದು ಆರೋಪಿಸಿ, ಕಂಗನಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸರ್ನಾಯಕ್ ದೇಶ್‌ಮುಖ್‌ಗೆ ಪತ್ರವನ್ನೂ ನೀಡಿದ್ದರು. ‌

ಇದಕ್ಕೆ ಪ್ರತಿಕ್ರಿಯೆ ನೀಡಿದ ದೇಶ್‌ಮುಖ್‌, ‘ಸಂದರ್ಶನವೊಂದರಲ್ಲಿ ಅಧ್ಯಯನ್‌ ಅವರು, ತನಗೂ ಡ್ರಗ್ಸ್‌ ತೆಗೆದುಕೊಳ್ಳುವಂತೆ ಕಂಗನಾ ಒತ್ತಡ ಹಾಕುತ್ತಿದ್ದರು ಎಂದಿದ್ದರು. ಮುಂಬೈ ಪೊಲೀಸರು ಈ ಕುರಿತು ವಿಸ್ತೃತವಾದ ತನಿಖೆ ನಡೆಸಲಿದ್ದಾರೆ’ ಎಂದರು. ಈ ಬೆಳವಣಿಗೆ ಬೆನ್ನಲ್ಲೇ, ಇದು ರಾಜಕೀಯ ದ್ವೇಷವಲ್ಲ ಎಂದು ಸರ್ನಾಯಕ್‌ ಅವರು ಸ್ಪಷ್ಟನೆ ನೀಡಿದ್ದಾರೆ.

ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ(ಪಿಒಕೆ) ಹೋಲಿಸಿದ್ದ ಕಂಗನಾ, ಮೂವಿ ಮಾಫಿಯಾಗಿಂತ ನಾನು ಮುಂಬೈ ಪೊಲೀಸರನ್ನು ಕಂಡರೆ ಹೆದರುತ್ತೇನೆ ಎಂದು ಇತ್ತೀಚೆಗೆ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಸುಶಾಂತ್‌ ಸಿಂಗ್‌ ಸಾವಿನ ಪ್ರಕರಣದಲ್ಲಿ ಮಾದಕವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ) ನಟಿ ರಿಯಾ ಚಕ್ರವರ್ತಿ ಅವರನ್ನು ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಕಂಗನಾ ವಿರುದ್ಧ ತನಿಖೆಗೆ ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

‘ಬೇಜವಾಬ್ದಾರಿ ಹೇಳಿಕೆ’

‘ಮತ್ತೊಂದು ರಾಜ್ಯದ ಹೆಣ್ಣುಮಗಳು ಇಲ್ಲಿ ಜೀವನಾಧಾರಕ್ಕೆ ಆಗಮಿಸುತ್ತಾರೆ. ಮುಂಬೈ ಅವರನ್ನು ಸ್ವಾಗತಿಸುತ್ತದೆ. ಆದರೆ ಅವರೇ ಮುಂಬೈ ಪೊಲೀಸರನ್ನು ಅವಹೇಳನ ಮಾಡುತ್ತಾರೆ. ಇದು ಬೇಸರದ ವಿಷಯ. ಅದು ಬೇಜವಾಬ್ದಾರಿಯುತ ಹೇಳಿಕೆ. ಮಹಾರಾಷ್ಟ್ರವನ್ನು ಅವಮಾನಿಸಿದರೆ ಇಲ್ಲಿನ ಜನರು ಸಹಿಸಿಕೊಳ್ಳುವುದಿಲ್ಲ. ಮಹಾರಾಷ್ಟ್ರ ಬಿಜೆಪಿಗೂ ಸೇರಿದೆ. ಎಲ್ಲ ಪಕ್ಷಗಳೂ ಕಂಗನಾ ಹೇಳಿಕೆಯನ್ನು ಖಂಡಿಸಬೇಕು’ ಎಂದು ದೇಶ್‌ಮುಖ್‌ ಹೇಳಿದರು.

ಕಂಗನಾ ಬಂಗಲೆಗೆ ಬಿಎಂಸಿ ನೋಟಿಸ್‌

ಮಹಾನಗರ ಪಾಲಿಕೆಯ ಅನುಮತಿ ಪಡೆಯದೆ ಹಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಉಲ್ಲೇಖಿಸಿ,ಬಾಂದ್ರಾದಲ್ಲಿ ಇರುವ ಕಂಗನಾ ಬಂಗಲೆಯ ಗೇಟ್‌ಗೆ ಬೃಹತ್‌ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ನೋಟಿಸ್‌ ಲಗತ್ತಿಸಿದೆ. ನೋಟಿಸ್‌ ಸ್ವೀಕರಿಸಲು ಯಾರೂ ಇರದ ಕಾರಣ, ಅದನ್ನು ಗೇಟ್‌ಗೆ ಅಂಟಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಶೌಚಾಲಯ ಇರುವ ಜಾಗದಲ್ಲಿ ಕಚೇರಿ ಕೊಠಡಿ, ಮೆಟ್ಟಿಲುಗಳ ಪಕ್ಕದಲ್ಲೇ ಹೊಸ ಶೌಚಾಲಯಗಳು ಹೀಗೆ ಹಲವು ಬದಲಾವಣೆಗಳನ್ನು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಲು ಕಂಗನಾ ಅವರಿಗೆ ಬಿಎಂಸಿ 24 ಗಂಟೆಗಳ ಕಾಲಾವಕಾಶ ನೀಡಿದೆ. ಸೋಮವಾರವಷ್ಟೇ ಬಿಎಂಸಿ ಅಧಿಕಾರಿಗಳು ಬಾಂದ್ರಾದಲ್ಲಿ ಇರುವ ಕಂಗನಾ ಅವರ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ವೈ ಪ್ಲಸ್‌ ಭದ್ರತೆಗೆ ಖಂಡನೆ

ಕೋಲ್ಕತ್ತ: ಕಂಗನಾರನೋತ್‌ ಅವರಿಗೆ ವೈ ಪ್ಲಸ್‌ ಭದ್ರತೆ ನೀಡುವ ಕೇಂದ್ರದ ನಿರ್ಧಾರವನ್ನು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಖಂಡಿಸಿದ್ದಾರೆ.

ಕಂಗನಾಳನ್ನು 'ಬಾಲಿವುಡ್ ಟ್ವಿಟರಾತಿ' ಎಂದು ಕರೆದಿರುವ ಮೊಯಿತ್ರಾ, ಭಾರತದ ಜನಸಂಖ್ಯೆಯ ಪ್ರತಿ ಲಕ್ಷಕ್ಕೆ 138 ರಂತೆ ಪೊಲೀಸರ ಅನುಪಾತ ಹೊಂದಿರುವಾಗ ಆಕೆಗೆ ಏಕೆ ಭದ್ರತೆ ಸಿಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT