ಶುಕ್ರವಾರ, ಜುಲೈ 30, 2021
28 °C

ಮುಂಬೈ ಮಳೆ ದುರಂತ; ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ ಘೋಷಿಸಿದ ಉದ್ಧವ್ ಠಾಕ್ರೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮುಂಬೈನಲ್ಲಿ ಶನಿವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಚೆಂಬೂರ್ ಹಾಗೂ ವಿಕ್ರೋಲಿಯದಲ್ಲಿ ಗೋಡೆ ಕುಸಿತದಿಂದ ಸಂಭವಿಸಿದ ದುರಂತಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

ಗೋಡೆ ಕುಸಿತದಿಂದಾಗಿ 25 ಮಂದಿ ಮೃತಪಟ್ಟಿದ್ದು, ಭಾರಿ ಮಳೆಯಿಂದಾಗಿ ಮುಂಬೈ ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಹಲವೆಡೆ ಭೂಕುಸಿತ ಸಂಭವಿಸಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಲೋಕಲ್‌ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಠಾಕ್ರೆ ಮುಂಬೈ ನಾಗರಿಕ ಆಯುಕ್ತ ಐ.ಎಸ್. ಚಾಹಲ್ ಅವರೊಂದಿಗೆ ಮಾತನಾಡಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಗಳ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಪುರಸಭೆ ಕಾರ್ಮಿಕರು, ಅಗ್ನಿಶಾಮಕ ದಳ ಮತ್ತು ಪೊಲೀಸರೊಂದಿಗೆ ಸಂ‍ಪರ್ಕದಲ್ಲಿರುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮುಖ್ಯಮಂತ್ರಿಗಳ ಕಚೇರಿ (ಸಿಎಮ್‌ಒ) ಹೇಳಿಕೆ ಬಿಡುಗಡೆ ಮಾಡಿದ್ದು, ಸಂತ್ರಸ್ತರ ಕುಟುಂಬಸ್ಥರಿಗೆ ತಲಾ ₹5 ಲಕ್ಷ ಪರಿಹಾರ ಮತ್ತು ಗಾಯಾಳುಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದೆ.

ಮುಂಬೈ ನಗರದಲ್ಲಿ ಶನಿವಾರ ರಾತ್ರಿಯಿಂದಲೂ ಭಾರಿ ಮಳೆಯಾಗುತ್ತಿದ್ದು, ಠಾಕ್ರೆ ನಾಗರಿಕ ವಿಪತ್ತು ನಿಯಂತ್ರಣ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಹವಾಮಾನ ಇಲಾಖೆಯು ಭಾನುವಾರದಂದು ಸಹ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿರುವುದರಿಂದ ಅಧಿಕಾರಿಗಳು ಎಚ್ಚರವಾಗಿರಲು ಮತ್ತು ಪರಿಸ್ಥಿತಿಯ ಮೇಲೆ ಕಣ್ಣಿಡಲು ಠಾಕ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೀಠಿ ನದಿ ದಡ ಮತ್ತು ತೀರಕ್ಕೆ ಹತ್ತಿರವಿರುವ ಇತರ ಸ್ಥಳಗಳಲ್ಲಿ ವಾಸಿಸುವವರನ್ನು ಕೂಡಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಭಾರಿ ಮಳೆಯಿಂದಾಗಿ ಜಂಬೊ ಕೋವಿಡ್-19 ಕೇಂದ್ರಗಳಲ್ಲಿ ವೈದ್ಯಕೀಯ ಸೌಲಭ್ಯಗಳ ಪೂರೈಕೆಗೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕೆಂದು ಠಾಕ್ರೆ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

‘ತಗ್ಗು ಪ್ರದೇಶಗಳಿಂದ ನೀರನ್ನು ಇಂಗಿಸಲು ಬೇಕಾದ ಕ್ರಮಗಳನ್ನು ಕೈ‌ಗೊಳ್ಳಬೇಕು. ವಾಹನ ಸಂಚಾರಕ್ಕೆ ರಸ್ತೆಗಳನ್ನು ತೆರವುಗೊಳಿಸಬೇಕು ಮತ್ತು ರೈಲು ಸೇವೆಯನ್ನು ಆದಷ್ಟು ಬೇಗ ಪುನರಾರಂಭಿಸಬೇಕು’ ಎಂದು ಅವರು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು