ಮಂಗಳವಾರ, ಸೆಪ್ಟೆಂಬರ್ 28, 2021
21 °C
ಮತ್ತೊಂದು ‘ನಿರ್ಭಯಾ’ ಪ್ರಕರಣ: ದೇಶದಾದ್ಯಂತ ಆಕ್ರೋಶ

ಮುಂಬೈ: ಅತ್ಯಾಚಾರ ಸಂತ್ರಸ್ತೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ದೇಶವನ್ನು ಬೆಚ್ಚಿಬೀಳಿಸಿದ್ದ ದೆಹಲಿಯ ‘ನಿರ್ಭಯಾ’ ಪ್ರಕರಣವನ್ನು ಹೋಲುವ ಮತ್ತೊಂದು ಹೇಯಕೃತ್ಯ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ. ತೀವ್ರ ರಕ್ತಸ್ರಾವದಿಂದ ಬಳಲಿದ್ದ 34 ವರ್ಷದ ಸಂತ್ರಸ್ತೆಯು, ಚಿಕಿತ್ಸೆ ಫಲಿಸದೇ ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

 ಮುಂಬೈನ ಸಾಕಿನಾಕಾ ಪ್ರದೇಶದಲ್ಲಿ ನಿಂತಿದ್ದ ಟೆಂಪೊವೊಂದರಲ್ಲಿ, ನಸುಕಿನ ಮೂರು ಗಂಟೆ ಹೊತ್ತಿಗೆ ಮಹಿಳೆಯ ಮೇಲೆ ಪೈಶಾಚಿಕ ಕೃತ್ಯ ನಡೆದಿತ್ತು. ಮಹಿಳೆಯ ಗುಪ್ತಾಂಗಕ್ಕೆ ಕಬ್ಬಿಣದ ಸರಳನ್ನು ತೂರಿಸಿ, ಚಾಕುವಿನಿಂದ ಹಲ್ಲೆ ಮಾಡಲಾಗಿತ್ತು. ಖೈರನಿ ರಸ್ತೆಯಲ್ಲಿ,‌ ಮಹಿಳೆಯ ಮೇಲೆ ಹಲ್ಲೆ ನಡೆಯುತ್ತಿರುವುದಾಗಿ ವಾಚ್‌ಮನ್‌ ಒಬ್ಬರು ಪೊಲೀಸ್‌ ಕಂಟ್ರೋಲ್‌ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಪೊಲೀಸರು ಧಾವಿಸುವ  ಹೊತ್ತಿಗೆ ಸಂತ್ರಸ್ತೆಯು ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ಗಂಭೀರವಾಗಿ ಗಾಯಗೊಂಡು, ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ಇಲ್ಲಿನ ರಾಜವಾಡಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೇಹವನ್ನು ಹೊಕ್ಕ ಸರಳು ಕರುಳನ್ನು ತುಂಡರಿಸಿತ್ತು ಎನ್ನಲಾಗಿದೆ. 33 ಗಂಟೆಗಳವರೆಗೆ ಜೀವನ್ಮರಣ ಹೋರಾಟ ನಡೆಸಿದ ಸಂತ್ರಸ್ತೆ, ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ನಸುಕಿನಲ್ಲಿ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

‘ಮಾಹಿತಿ ಸಿಕ್ಕ ಹತ್ತು ನಿಮಿಷಗಳ ಒಳಗಾಗಿ ಪೊಲೀಸರು ಸ್ಥಳದಲ್ಲಿದ್ದರು. ಸಮಯ ವ್ಯರ್ಥ ಮಾಡದೇ, ಅದೇ ಟೆಂಪೊದಲ್ಲಿ ಸಂತ್ರಸ್ತೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು’ ಎಂದು ಮುಂಬೈ ಪೊಲೀಸ್‌ ಆಯುಕ್ತ ಹೇಮಂತ್‌ ನಗರಾಳೆ ತಿಳಿಸಿದ್ದಾರೆ.

ಸಂತ್ರಸ್ತೆಯು ಪ್ರಜ್ಞಾಹೀನಳಾಗಿದ್ದರಿಂದ, ಹೇಳಿಕೆ ಪಡೆಯಲು ಆಗಲಿಲ್ಲ ಎಂದಿದ್ದಾರೆ.

ಆ ಪ್ರದೇಶದ ಸಿ.ಸಿ. ಟಿ.ವಿ. ದೃಶ್ಯಗಳನ್ನು ಆಧರಿಸಿ, ಪೊಲೀಸರು 45 ವರ್ಷದ ಆರೋಪಿ ಮೋಹನ್‌ ಚೌಹಾಣ್‌ ಎಂಬಾತನನ್ನು ಶುಕ್ರವಾರವೇ ಬಂಧಿಸಿದ್ದರು. ಆತ ಉತ್ತರಪ್ರದೇಶದ ಜಾನಪುರದವನು ಎಂದು ತಿಳಿದುಬಂದಿದ್ದು, ಸೆ.21ರವರೆಗೆ ಪೊಲೀಸ್‌ ವಶಕ್ಕೆ ನೀಡಲಾಗಿದೆ.

ಬಂಧಿತ ಆರೋಪಿ ಮಾತ್ರ ಸ್ಥಳದಲ್ಲಿ ಇದ್ದದ್ದು ಸಿ.ಸಿ.ಟಿ.ವಿ ದೃಶ್ಯಗಳ ಪರಿಶೀಲನೆಯಿಂದ ತಿಳಿದುಬಂದಿದೆ. ಹೀಗಾಗಿ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದಿದ್ದಾರೆ. ಸಂತ್ರಸ್ತೆಯು ಎರಡು ಮಕ್ಕಳ ತಾಯಿಯಾಗಿದ್ದು, ಸಾಕಿನಾಕಾದ ನಿವಾಸಿಯೇ ಆಗಿದ್ದರೆಂಬುದು ತಿಳಿದುಬಂದಿದೆ. ಆದರೆ, ಆಕೆಗೆ ಆರೋಪಿಯ ಪರಿಚಯ ಇತ್ತೇ ಅಥವಾ ಇಲ್ಲವೇ ಎಂಬುದು ತನಿಖೆಯಾಗಬೇಕಿದೆ. ಮಹಿಳೆಯ ರಕ್ತಸಿಕ್ತ ಬಟ್ಟೆಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿದಿದೆ ಎಂದು ಪೊಲೀಸ್‌ ಆಯುಕ್ತ ತಿಳಿಸಿದ್ದಾರೆ.

ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ 302 (ಕೊಲೆ), 376 (ಅತ್ಯಾಚಾರ), 323 (ಉದ್ದೇಶಪೂರ್ವಕ ಹಲ್ಲೆ), 504 (ಉದ್ದೇಶಪೂರ್ವಕ ದಾಳಿ) ಸೆಕ್ಷನ್‌ ಅಡಿ ಪ್ರಕರಣ ದಾಖಲಿಸಲಾಗಿದೆ. 2012
ರಲ್ಲಿ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್‌
ವೊಂದರಲ್ಲಿ ಯುವತಿಯೊಬ್ಬಳ ಮೇಲೆ ದುರುಳರು ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯ ಗುಪ್ತಾಂಗವನ್ನು ಹರಿತವಾದ ವಸ್ತುಗಳಿಂದ ಗಾಸಿಗೊಳಿಸಿದ್ದರು. ಜೀವನ್ಮರಣ ಹೋರಾಟ ನಡೆಸಿ, ಆಕೆ ಅಸುನೀಗಿದ್ದಳು. ಮೃತಪಟ್ಟ ಸಂತ್ರಸ್ತೆಯನ್ನು ’ನಿರ್ಭಯಾ‘ ಎಂದು ಹೆಸರಿಸಲಾಗಿತ್ತು. ಘಟನೆಯನ್ನು ಖಂಡಿಸಿ, ಅದೇ ಹೆಸರಿ ನಲ್ಲಿ ದೇಶದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.

ಮಹಿಳಾ ಆಯೋಗ ಆಘಾತ: ಘಟನೆಯ ಆಘಾತ ವ್ಯಕ್ತಪಡಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ, ಈ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ನಿಗದಿತ ಗಡುವಿನಲ್ಲಿ ನಿಷ್ಪಕ್ಷಪಾತದಿಂದ ನಡೆಸುವಂತೆ ಮಹಾರಾಷ್ಟ್ರ ಡಿಜಿಪಿ ಸಂಜಯ್‌ ಪಾಂಡೆ ಹಾಗೂ ಮುಂಬೈ ಪೊಲೀಸ್‌ ಆಯುಕ್ತ ಹೇಮಂತ್ ನಗರಾಳೆ ಅವರನ್ನು ಒತ್ತಾಯಿಸಿದೆ.

 ಘಟನೆಯಲ್ಲಿ ಇನ್ನೂ ಹೆಚ್ಚು ಜನರು ಭಾಗಿಯಾಗಿದ್ದಾರೆಯೇ ಎಂಬುದರತ್ತಲೂ ಪೊಲೀಸರು ತನಿಖೆ ಮಾಡಬೇಕು ಎಂದು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಆಗ್ರಹಿಸಿದ್ದಾರೆ.

ಗಲ್ಲು ಶಿಕ್ಷೆಗೆ ಆಗ್ರಹ: ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್‌, ಘಟನೆಗೆ ದುಃಖ ವ್ಯಕ್ತಪಡಿಸಿದ್ದಾರೆ.

 ಶಿವಸೇನಾ ನೇತೃತ್ವದ ಮಹಾರಾಷ್ಟ್ರ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಹರಿಹಾಯ್ದಿರುವ ಅವರು, ತಪ್ಪಿತಸ್ಥನಿಗೆ ಗಲ್ಲುಶಿಕ್ಷೆ ಆಗಬೇಕು ಎಂದಿದ್ದಾರೆ. 

ವಿಶೇಷ ತನಿಖಾ ತಂಡ ರಚನೆ:

ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವು, ಎಸಿಪಿ ಜ್ಯೋತ್ಸ್ನಾ ರಾಸಂ ನೇತೃತ್ವದ ವಿಶೇಷ ತನಿಖಾ ತಂಡ ರಚಿಸಿದೆ. ತನಿಖೆ ಪೂರ್ಣಗೊಳಿಸಲು ಒಂದು ತಿಂಗಳ ಗಡುವು ನೀಡಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು