ಗುರುವಾರ , ಅಕ್ಟೋಬರ್ 29, 2020
26 °C

ಪ್ರಜಾಸತ್ತಾತ್ಮಕ ಭಾರತದ ದನಿ ಹತ್ತಿಕ್ಕುವ ಕೆಲಸ ಮುಂದುವರಿದಿದೆ: ರಾಹುಲ್ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಜ್ಯಸಭೆಯ ಎಂಟು ಸದಸ್ಯರನ್ನು ಅಮಾನತು ಮಾಡಿದ ಬಗ್ಗೆ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಅಮಾನತಾದವರಲ್ಲಿ ಕಾಂಗ್ರೆಸ್‌ನ ಮೂವರು ಸದಸ್ಯರು ಇದ್ದಾರೆ.

'ಪ್ರಜಾಸತ್ತಾತ್ಮಕ ಭಾರತದ ದನಿ ಹತ್ತಿಕ್ಕುವ ಕೆಲಸ ಮುಂದುವರಿದಿದೆ. ಸಂಸದರಿಗೆ ಮೊದಲು ಮಾತನಾಡುವ ಅವಕಾಶ ನಿರಾಕರಿಸಲಾಯಿತು. ನಂತರ ಅವರನ್ನು ಅಮಾನತು ಮಾಡಲಾಯಿತು' ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಎರಡು ಮಸೂದೆಗಳನ್ನು ರಾಜ್ಯಸಭೆಯಲ್ಲಿ ಅಂಗೀಕರಿಸುವ ವೇಳೆ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದ್ದವು. ಕೆಲ ಅಹಿತಕರ ವಿದ್ಯಮಾನಗಳೂ ಸಂಭವಿಸಿದ್ದವು. ಈ ಬೆಳವಣಿಗೆಯ ನಂತರ ಎಂಟು ಸದಸ್ಯರನ್ನು ಅಮಾನತು ಮಾಡಲಾಯಿತು.

'ಪ್ರಜಾಸತ್ತಾತ್ಮಕ ಭಾರತದ ದನಿ ಅಡಗಿಸುವ ಕೆಲಸ ಮುಂದುವರಿದಿದೆ. ಮೊದಲು ದನಿ ಹತ್ತಿಕ್ಕಲಾಯಿತು, ನಂತರ ಸಂಸದರನ್ನು ಅಮಾನತುಗೊಳಿಸಲಾಯಿತು. ಕೃಷಿಗೆ ಸಂಬಂಧಿಸಿದ ಕೆಟ್ಟ ಕಾನೂನುಗಳ ಬಗ್ಗೆ ಒಲವಿರುವವರು ರೈತರ ಸಂಕಷ್ಟಕ್ಕೆ ಕುರುಡಾಗಿದ್ದಾರೆ' ಎಂದು ರಾಹುಲ್‌ಗಾಂಧಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಈ 'ಸರ್ವಶಕ್ತ' ಸರ್ಕಾರದ ಕೊನೆಯಿಲ್ಲದ ಉದ್ಧಟತನವು ಇಡೀ ದೇಶಕ್ಕೆ ಆರ್ಥಿಕ ಸಂಕಷ್ಟ ತೊಂದೊಡ್ಡಿದೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಬೆಳವಣಿಗೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ, 'ದೇಶದಲ್ಲಿ ಸಂಸದೀಯ ಪದ್ಧತಿ ಅಸ್ತಿತ್ವದಲ್ಲಿದೆಯೇ?' ಎಂದು ಪ್ರಶ್ನಿಸಿದ್ದಾರೆ.

'ಸಂಸತ್ತಿನ ರೈತರ ದನಿ ಎತ್ತುವುದು ಪಾಪಕಾರ್ಯವೇ? ಸರ್ವಾಧಿಕಾರಿಗಳು ಸಂಸತ್ತನ್ನು ಒತ್ತೆಯಿರಿಸಿಕೊಂಡಿದ್ದಾರೆಯೇ?' ಎಂದು ಸುರ್ಜೆವಾಲಾ ಕೇಳಿದ್ದಾರೆ.

#KisaanVirodhiModi ಹ್ಯಾಷ್‌ಟ್ಯಾಗ್‌ನೊಂದಿಗೆ ಟ್ವಿಟರ್‌ನಲ್ಲಿ ಆಕ್ರೋಶ ಹೊರಹಾಕಿರುವ ಸುರ್ಜೆವಾಲಾ, 'ಅಧಿಕಾರದ ಪ್ರಭಾವದಿಂದಾಗಿ ನಿಮಗೆ ಸತ್ಯದ ಶಬ್ದಗಳು ಕೇಳಿಸುತ್ತಿಲ್ಲ. ರೈತರು, ಕಾರ್ಮಿಕರು, ಸಣ್ಣ ಅಂಗಡಿಗಳನ್ನು ನಡೆಸುವವರು, ಸಂಸದರು... ಹೀಗೆ ಎಷ್ಟು ಜನರ ಧ್ವನಿಯನ್ನು ನೀವು ಹತ್ತಿಕ್ಕುತ್ತೀರಿ?' ಎಂದು ಪ್ರಶ್ನಿಸಿದ್ದಾರೆ.

ರಾಜ್ಯಸಭಾ ಸದಸ್ಯರಾದ ಡೊಲಾ ಸೇನ್, ಡೆರೆಕ್ ಒ ಬ್ರೇನ್ (ಟಿಎಂಸಿ), ಸಂಜಯ್ ಸಿಂಗ್ (ಎಎಪಿ), ಕೆ.ಕೆ.ರಾಗೇಶ್, ಎಲಮರಂ ಕರೀಂ  (ಸಿಪಿಎಂ), ರಾಜೀವ್ ಸತವ್, ರಿಪಿನ್ ಬೊರೆನ್, ಸೈಯದ್ ನಾಜಿರ್ ಹುಸೇನ್ (ಕಾಂಗ್ರೆಸ್) ಅವರ ಅಮಾನತು ಗೊತ್ತುವಳಿಯನ್ನು ಸರ್ಕಾರವು ಸೋಮವಾರ ರಾಜ್ಯಸಭೆಯಲ್ಲಿ ಅಂಗೀಕರಿಸಿತ್ತು.

ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಗೊತ್ತುವಳಿಯನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು. ಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡ ಎಂಟೂ ಮಂದಿಗೆ ಸದನದಿಂದ ಹೊರನಡೆಯುವಂತೆ ಸೂಚಿಸಿದ್ದರು. ಅದರೆ ಅಮಾನತಾದ ಸದಸ್ಯರು ಸದನದಲ್ಲಿಯೇ ಉಳಿದು ಅಧ್ಯಕ್ಷರ ರೂಲಿಂಗ್‌ಗೆ ವಿರೋಧ ವ್ಯಕ್ತಪಡಿಸಿದ್ದರು.

ಸದನವನ್ನು ನಿಯಮಗಳಿಗೆ ಅನುಸಾರವಾಗಿ ನಡೆಸಿಲ್ಲ ಎಂಬ ಕಾರಣ ಮುಂದೊಡ್ಡಿ, ಉಪಸಭಾಧ್ಯಕ್ಷ ಹರಿವಂಶ್ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯನ್ನೂ ಸಭಾಧ್ಯಕ್ಷರು ತಳ್ಳಿಹಾಕಿದ್ದರು.

ಕೃ‍ಷಿ ಮಸೂದೆಯನ್ನು ಅಂಗೀಕರಿಸುವ ಸಂದರ್ಭ ಸದನವನ್ನು ಮುನ್ನಡೆಸುತ್ತಿದ್ದ ಉಪಸಭಾಧ್ಯಕ್ಷ ಹರಿವಂಶ್ ಅವರ ಮೇಲೆ ವಿರೋಧ ಪಕ್ಷಗಳ ಸದಸ್ಯರು ಹರಿಹಾಯ್ದ ರೀತಿ ಮತ್ತು ಅವರಿಗೆ ಬೆದರಿಕೆ ಒಡ್ಡಿದ ವಿಚಾರವನ್ನು ಸಭಾಧ್ಯಕ್ಷ ವೆಂಕಯ್ಯನಾಯ್ಡು ಖಂಡಿಸಿದರು.

ರೈತರ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮತ್ತು ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕುರಿತಂತೆ ರೈತರ ಜತೆ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಮಸೂದೆಗಳನ್ನು ಭಾನುವಾರ ರಾಜ್ಯಸಭೆಯಲ್ಲಿ ಧ್ವನಿಮತದೊಂದಿಗೆ ಅನುಮೋದಿಸಲಾಯಿತು. ಈ ಸಂದರ್ಭ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು.

ಈ ಎರಡೂ ಮಸೂದೆಗಳಿಗೆ ಈಗಾಗಲೇ ಲೋಕಸಭೆಯ ಅನುಮೋದನೆ ದೊರೆತಿದೆ. ಸಹಿಗಾಗಿ ರಾಷ್ಟ್ರಪತಿ ಕಚೇರಿಗೆ ಎರಡೂ ಮಸೂದೆಗಳನ್ನು ಸರ್ಕಾರ ಕಳುಹಿಸಿಕೊಡಲಿದೆ. ರಾಷ್ಟ್ರಪತಿ ಸಹಿಯ ನಂತರ ಈ ಮಸೂದೆಗಳು ಕಾನೂನುಗಳ ಸ್ವರೂಪ ಪಡೆದುಕೊಳ್ಳುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು