ಶನಿವಾರ, ಮೇ 28, 2022
26 °C

ಎಲ್ಲಾ ಕೋವಿಡ್ ನಿರ್ಬಂಧಗಳನ್ನು ಹಿಂತೆಗೆದುಕೊಂಡ ನಾಗಾಲ್ಯಾಂಡ್ ಸರ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಹಿಮಾ: ಕಳೆದ ಒಂದು ತಿಂಗಳಿನಿಂದ ವಾರದ ಕೋವಿಡ್ ಪಾಸಿಟಿವಿಟಿ ದರ ಶೇ 2 ಕ್ಕಿಂತ ಕಡಿಮೆ ಇರುವ ಹಿನ್ನೆಲೆಯಲ್ಲಿ ಮತ್ತು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಸಲಹೆಯನ್ನು ಗಮನದಲ್ಲಿಟ್ಟುಕೊಂಡು, ನಾಗಾಲ್ಯಾಂಡ್‌ನಲ್ಲಿ ಎಲ್ಲಾ ಕೋವಿಡ್-19 ನಿರ್ಬಂಧಗಳನ್ನು ಶುಕ್ರವಾರದಿಂದ ಹಿಂತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ.

'ಈಗ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಜನರ ಸಂಖ್ಯೆಗೆ ಯಾವುದೇ ನಿರ್ಬಂಧವಿಲ್ಲ. ನಾಗಾಲ್ಯಾಂಡ್‌ಗೆ ಪ್ರವೇಶಿಸುವ ಪ್ರಯಾಣಿಕರು ಅಥವಾ ಪ್ರವಾಸಿಗರಿಗೆ ಕೂಡ ಕೋವಿಡ್-19 ಎಸ್‌ಒಪಿಯನ್ನು (ಪ್ರಮಾಣಿತ ಕಾರ್ಯಚರಣಾ ವಿಧಾನ) ಅನ್ನು ಸಹ ಹಿಂತೆಗೆದುಕೊಳ್ಳಲಾಗುತ್ತದೆ' ಎಂದು ನಾಗಾಲ್ಯಾಂಡ್ ಮುಖ್ಯ ಕಾರ್ಯದರ್ಶಿ ಜೆ. ಆಲಂ ಹೇಳಿದ್ದಾರೆ.

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ರಾಜ್ಯದಲ್ಲಿ ನಿರ್ಬಂಧ ವಿಧಿಸಿದ್ದ ಎರಡು ವರ್ಷಗಳ ನಂತರ ಇದೀಗ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ.

ಆದಾಗ್ಯೂ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ಗಳನ್ನು ಧರಿಸುವುದು, ಕೈಗಳ ನೈರ್ಮಲ್ಯ ಕಾಪಾಡಿಕೊಳ್ಳುವುದು ಮತ್ತು ಎಲ್ಲಾ ಸಮಯದಲ್ಲೂ ದೈಹಿಕ ಅಂತರ ಕಾಯ್ದುಕೊಳ್ಳುವುದು ಮುಂತಾದ ಸೂಕ್ತವಾದ ಕೋವಿಡ್-19 ನಡವಳಿಕೆಯನ್ನು ಅನುಸರಿಸುವುದನ್ನು ಮುಂದುವರಿಸಲು ಜನರಿಗೆ ಸಲಹೆ ನೀಡಲಾಗಿದೆ ಎಂದು ಅವರು ಹೇಳಿದರು.

ನಾಗಾಲ್ಯಾಂಡ್‌ನಲ್ಲಿ ಮೊದಲ ಬಾರಿಗೆ 2020ರ ಮೇ 25ರಂದು ಚೆನ್ನೈನಿಂದ ಹಿಂದಿರುಗಿದ ಮೂವರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು.

12 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚಿಸಲಾಗಿದೆ. ಅರ್ಹ ಜನರು ಆದಷ್ಟು ಬೇಗ ಮುನ್ನೆಚ್ಚರಿಕೆ ಡೋಸ್‌ ಲಸಿಕೆ ಹಾಕಿಸಿಕೊಳ್ಳುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಮತ್ತೊಂದು ಸುತ್ತೋಲೆಯಲ್ಲಿ, ಕೊರೊನಾ ವೈರಸ್‌ನಿಂದಾಗಿ ಪ್ರತಿದಿನ ಆಸ್ಪತ್ರೆಗೆ ದಾಖಲಾಗುವವರ ಸರಾಸರಿ ಸಂಖ್ಯೆ ಕಳೆದ ಮೂರು ವಾರಗಳಿಂದ ಐದಕ್ಕಿಂತ ಕಡಿಮೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ ತೀವ್ರವಾಗಿ ಕುಸಿದಿದೆ ಮತ್ತು ಮಾರ್ಚ್ 31ರ ವೇಳೆಗೆ 15 ಸಕ್ರಿಯ ಪ್ರಕರಣಗಳು ಮಾತ್ರ ಉಳಿದಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.

ಈಗಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ವಿಪತ್ತು ನಿರ್ವಹಣಾ ಕಾಯ್ದೆ, 2005ರ ಅಡಿಯಲ್ಲಿ ರಾಜ್ಯದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ನಿರ್ಬಂಧಗಳನ್ನು ವಿಧಿಸಿದ್ದ ಆದೇಶವನ್ನು ಮಾ. 31ರ ನಂತರ ವಿಸ್ತರಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿರುವುದಾಗಿ ಗೃಹ ಆಯುಕ್ತ ಅಭಿಜಿತ್ ಸಿನ್ಹಾ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು