ಸೋಮವಾರ, ಜನವರಿ 17, 2022
27 °C

ಯೋಗಿ ಬೇಡ, ಮೋದಿಯೇ ಬರಲಿ: ಉತ್ತರ ಪ್ರದೇಶದ ಬಿಜೆಪಿಯಲ್ಲಿ ಅಸಮಾಧಾನದ ಪಿಸುಮಾತು

ಸಂಜಯ್‌ ಪಾಂಡೆ Updated:

ಅಕ್ಷರ ಗಾತ್ರ : | |

ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಬಿಜೆಪಿಯ ಅತ್ಯಂತ ಜನಪ್ರಿಯ ನಾಯಕರೆಂದು ಕೆಲ ದಿನಗಳ ಹಿಂದೆಯಷ್ಟೇ ಬಿಂಬಿಸಲಾಗಿತ್ತು. ದೇಶದಾದ್ಯಂತ ಜನಪ್ರಿಯತೆ ಹೊಂದಿರುವ ಯೋಗಿ ಅವರು ಪ್ರಧಾನಿ ಮೋದಿಗೆ ಸವಾಲಾಗಿ ಹೊರಹೊಮ್ಮಬಹುದು ಎಂದು ಬಿಜೆಪಿಯ ಅನೇಕ ನಾಯಕರು ನಂಬಿದ್ದರು. 

ಹಿಂದುತ್ವದಲ್ಲಿ ಗಟ್ಟಿ ನಂಬಿಕೆಯುಳ್ಳ ವ್ಯಕ್ತಿಯು ಸುಲಭವಾಗಿ ಮತಗಳನ್ನು ಧ್ರುವೀಕರಿಸಬಹುದು ಎಂಬುದು ಈ ನಾಯಕರ ಅಭಿಲಾಷೆಯಾಗಿತ್ತು. ಆದರೆ, ಹಿಂದುಳಿದ ಹಾಗೂ ದಲಿತ ವರ್ಗಗಳಿಗೆ ಸೇರಿದ ಬಿಜೆಪಿ ನಾಯಕರು ಸಮಾಜವಾದಿ ಪಕ್ಷಕ್ಕೆ ವಲಸೆ ಹೋಗುತ್ತಿರುವುದು ಕೇಸರಿ ಪಕ್ಷದ ಉನ್ನತ ನಾಯಕರನ್ನು ನಿದ್ದೆಗೆಡಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಬೆಳವಣಿಗೆಯು ಪ್ರಧಾನಿ ಮೋದಿಯವರನ್ನು ವಿಚಲಿತಗೊಳಿಸಿದೆ ಎಂಬ ಮಾತುಗಳು ಮುನ್ನೆಲೆಗೆ ಬಂದಿವೆ. 

ಕಳೆದ ನಾಲ್ಕು ದಿನಗಳಲ್ಲಿ ಒಬಿಸಿ ಮತ್ತು ದಲಿತ ಸಮುದಾಯದ ಮೂವರು ಪ್ರಬಲ ಸಚಿವರು ಸೇರಿದಂತೆ 11 ಬಿಜೆಪಿ ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ, ಇನ್ನೂ ಕೆಲವು ಮುಖಂಡರು ರಾಜೀನಾಮೆ ನೀಡುವ ಹಂತದಲ್ಲಿದ್ದಾರೆ.

ಈಗ ಯೋಗಿ ಸಂಪುಟವನ್ನು ತೊರೆದು ಹೋದ ನಾಯಕರು ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಅಪಾರ ಕೊಡುಗೆ ನೀಡಿದವರು. ಕಾರಣ, ಹಿಂದುಳಿದ ಹಾಗೂ ದಲಿತರ ಮತಗಳನ್ನು ಸೆಳೆಯುವಲ್ಲಿ ಅವರು ಯಶಸ್ವಿಯಾಗಿದ್ದರು. ತಮ್ಮ ನಿರ್ಗಮನಕ್ಕೆ ಆದಿತ್ಯನಾಥ್ ಅವರೇ ಕಾರಣವೆಂದು ಈ ನಾಯಕರು ಆರೋಪಿಸಿರುವುದು ಗಮನಾರ್ಹ ಸಂಗತಿಯಾಗಿದೆ. 

ಬಿಜೆಪಿಯನ್ನು ತೊರೆದ ನಾಯಕರೆಲ್ಲರೂ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವ ಬೆಳವಣಿಗೆ ಮಾಜಿ ಸಿಎಂ ಅಖಿಲೇಶ್‌ ಯಾದವ್‌ ಅವರಿಗೆ ಬಲತಂದುಕೊಟ್ಟಿದೆ. ಇದು ಯೋಗಿ ಆದಿತ್ಯನಾಥ್‌ ಅವರ ಜನಪ್ರಿಯತೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬುದು ಕೆಲ ಬಿಜೆಪಿ ನಾಯಕರ ಅಭಿಪ್ರಾಯವಾಗಿದೆ. ಬಿಜೆಪಿ ರಾಜ್ಯ ಘಟಕದಲ್ಲಿ ಯೋಗಿ ವಿರುದ್ಧ ಯಾರೂ ಮಾತನಾಡುತ್ತಿಲ್ಲವಾದರೂ, ಒಳಗೊಳಗೇ ಅಸಮಾಧಾನದ ಪಿಸುಮಾತುಗಳು ಕೇಳಿಬರುತ್ತಿವೆ. 

‘ಈ ಚುನಾವಣೆಯನ್ನು ಮುನ್ನಡೆಸಲು ಯೋಗಿಯವರಿಗೆ ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಈಗ ಪಕ್ಷದ ಹೊಣೆಯನ್ನು ಅವರಿಗೆ ವಹಿಸುವುದು ಸಮಂಜಸವಲ್ಲ. ರಾಜ್ಯದಲ್ಲಿ ಪ್ರಚಾರದ ಉಸ್ತುವಾರಿಯನ್ನು ಮೋದಿಯವರೇ ವಹಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ’ ಎಂದು ಬಿಜೆಪಿಯ ಉನ್ನತ ನಾಯಕರೊಬ್ಬರು(ಹೆಸರು ಹೇಳಲು ಇಚ್ಛಿಸದ) ಹೇಳಿದರು.

‘ಉತ್ತರ ಪ್ರದೇಶದಲ್ಲಿ ಬಿಜೆಪಿಯು ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಮೋದಿಯವರಿಂದ ಹೆಚ್ಚಿನ ಪ್ರಚಾರದ ಅವಶ್ಯಕತೆ ಇದೆ’ ಎಂದು ಅವರು ತಿಳಿಸಿದರು.

ಹಿಂದುಳಿದ ವರ್ಗಗಳಿಗೆ ಸೇರಿದ ಪ್ರಭಾವಿ ನಾಯಕರು ಬಿಜೆಪಿಯನ್ನು ತೊರೆದ ವಿಚಾರ ಸ್ವತಃ ಯೋಗಿ ಆದಿತ್ಯನಾಥ್‌ ಅವರಿಗೆ ಆಘಾತವನ್ನು ಉಂಟು ಮಾಡಿದೆ. ಇದಕ್ಕೆ ಪುಷ್ಠಿ ನೀಡುವಂತೆ ಯೋಗಿ ಅವರು ಶುಕ್ರವಾರ ದಲಿತರ ಮನೆಯಲ್ಲಿ ಭೋಜನ ಮಾಡಿದ್ದಾರೆ. ‌‌

ಈ ವೇಳೆ ಮಾತನಾಡಿರುವ ಯೋಗಿ ಆದಿತ್ಯನಾಥ್‌, ‘ಸಮಾಜವಾದಿ ಪಕ್ಷದ ಆಡಳಿತದಲ್ಲಿ ಸಾಮಾಜಿಕ ಶೋಷಣೆ ಸಾಮಾನ್ಯವಾಗಿತ್ತೇ ಹೊರತು ಸಾಮಾಜಿಕ ನ್ಯಾಯವಲ್ಲ. ಯಾವುದೇ ತಾರತಮ್ಯವಿಲ್ಲದೆ ಸಮಾಜದ ಪ್ರತಿಯೊಂದು ವರ್ಗದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಶ್ರಮಿಸುತ್ತಿದೆ. ಕುಟುಂಬ ರಾಜಕೀಯದ ಹಿಡಿತದಲ್ಲಿರುವವರು ಸಮಾಜದ ಯಾವುದೇ ವರ್ಗಕ್ಕೆ ನ್ಯಾಯವನ್ನು ನೀಡಲು ಸಾಧ್ಯವಿಲ್ಲ. ಸಮಾಜವಾದಿ ಪಕ್ಷದ ಸರ್ಕಾರವು ದಲಿತರು ಮತ್ತು ಬಡವರ ಹಕ್ಕುಗಳ ಡಕಾಯತಿ ನಡೆಸಿತ್ತು’ ಎಂದು ವಾಗ್ದಾಳಿ ನಡೆಸಿದ್ದಾರೆ. 

ಇವನ್ನೂ ಓದಿ...

ಉ. ಪ್ರದೇಶ: ಬಿಜೆಪಿ ತೊರೆದಿದ್ದ ಸಚಿವರು, ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ

ವಿಧಾನಸಭೆ ಚುನಾವಣೆ 2022: ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ‘ವಲಸೆ’ ಬಿಸಿ

ಬಿಜೆಪಿಗೆ ಅಮೆಜಾನ್‌ನಲ್ಲಿ ಬೀಗ ಬುಕ್‌ ಮಾಡಿ ಗೇಲಿ ಮಾಡಿದ ಎಸ್‌ಪಿ ​

UP Elections 2022: ಒಬಿಸಿ ನಾಯಕರ ಬೆನ್ನಲ್ಲೇ ಬಿಜೆಪಿ ತೊರೆದ ‘ಗುಜ್ಜಾರ್’ ನಾಯಕ

ಉ.ಪ್ರದೇಶದಲ್ಲಿ ಬಿಜೆಪಿಗೆ ಮತ್ತೊಂದು ಆಘಾತ: ಸಚಿವ ದಾರಾ ಸಿಂಗ್ ಚೌಹಾಣ್ ರಾಜೀನಾಮೆ ​

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು