ಸೋಮವಾರ, ಆಗಸ್ಟ್ 8, 2022
22 °C

ನಿರುದ್ಯೋಗಕ್ಕೆ ಆಕ್ರೋಶ: ಪ್ರಧಾನಿ ಮೋದಿ ಜನ್ಮದಿನದಂದು ದೇಶದ ವಿವಿಧೆಡೆ ಪ್ರತಿಭಟನೆ

ಜಯಸಿಂಹ ಆರ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು:‌ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು (ಸೆಪ್ಟೆಂಬರ್ 17) ಯುವಜನರು ದೇಶದಾದ್ಯಂತ ‘ರಾಷ್ಟ್ರೀಯ ನಿರುದ್ಯೋಗ ದಿನ’ವನ್ನಾಗಿ ಆಚರಿಸಿದ್ದಾರೆ. ಯುವಜನರು, ವಿರೋಧ ಪಕ್ಷಗಳ ಯುವ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ‘ಉದ್ಯೋಗ ನೀಡಿ’ ಎಂದು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ 70ನೇ ವರ್ಷದ ಜನ್ಮದಿನಕ್ಕೆ ಶುಭಾಶಯ ಕೋರಿ ಜನಸಾಮಾನ್ಯರು, ಗಣ್ಯರು ಗುರುವಾರ ಬೆಳಗ್ಗೆಯೇ  #HappyBirthdayPMModi ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡಲು ಆರಂಭಿಸಿದ್ದರು. ಗುರುವಾರ ಬೆಳಗ್ಗೆ ಈ ಹ್ಯಾಷ್‌ಟ್ಯಾಗ್‌ ಭಾರತದಲ್ಲಿ ಟ್ವಿಟರ್‌ ಟ್ರೆಂಡ್ ಆಗಿತ್ತು. ಮಧ್ಯಾಹ್ನದವರೆಗೂ ಇದೇ ಟ್ರೆಂಡ್ ಆಗಿತ್ತು. 

ಅದರೆ, ಮಧ್ಯಾಹ್ನದ ವೇಳೆಗೆ ದೆಹಲಿ, ವಾರಾಣಸಿ, ಕೋಲ್ಕತ್ತ, ಲಖನೌ, ಪಟ್ನಾ, ಚೆನ್ನೈನಲ್ಲಿ ಯುವಜನರು ಪ್ರತಿಭಟನೆ ನಡೆಸಿ ‘ರಾಷ್ಟ್ರೀಯ ನಿರುದ್ಯೋಗ ದಿನ’ವನ್ನು ಆಚರಿಸಿದರು. ಪಕೋಡ ಮಾರಾಟ ಮಾಡುವುದೂ ದೊಡ್ಡ ಉದ್ಯೋಗ ಎಂದು ಮೋದಿ ಅವರು ನೀಡಿದ್ದ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ರಸ್ತೆಯಲ್ಲೇ ಸಮೋಸ, ಪಕೋಡ ಮತ್ತು ಬಜ್ಜಿ ಮಾಡಿ ಮಾರಾಟ ಮಾಡಿದರು.

ಪದವೀಧರರು ತಮ್ಮ ಪದವಿ ಪತ್ರಗಳನ್ನು ಕುತ್ತಿಗೆಗೆ ನೇತುಹಾಕಿಕೊಂಡು ತರಕಾರಿ ಮಾರಾಟ ಮಾಡಿ, ಬೂಟ್ ಪಾಲಿಷ್ ಮಾಡಿದ್ದು ಹಲವೆಡೆ ನಡೆದಿದೆ. ಅಲ್ಲದೆ  #NationlUnemploymentDay ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡಲು ಆರಂಭಿಸಿದರು. ಮಧ್ಯಾಹ್ನ 3 ಗಂಟೆಯ ವೇಳೆಗೆ ಈ ಹ್ಯಾಷ್‌ಟ್ಯಾಗ್ ಟ್ವಿಟರ್‌ನಲ್ಲಿ ಮೊದಲ ಟ್ರೆಂಡ್ ಆಯಿತು. ಸಂಜೆ 6ರವರೆಗೂ ಇದೇ ಹ್ಯಾಷ್‌ಟ್ಯಾಗ್‌ ಮೊದಲ ಟ್ರೆಂಡ್ ಆಗಿತ್ತು. ಜಾಗತಿಕ ಟ್ವಿಟರ್‌ ಟ್ರೆಂಡ್‌ನಲ್ಲಿ ಈ ಹ್ಯಾಷ್‌ಟ್ಯಾಗ್‌ 5ನೇ ಸ್ಥಾನದಲ್ಲಿತ್ತು. ಗುರುವಾರ ರಾತ್ರಿ 10ರ ವೇಳೆಗೆ ಈ ಹ್ಯಾಷ್‌ಟ್ಯಾಗ್‌ನಲ್ಲಿ 10 ಲಕ್ಷಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಗಿತ್ತು.

ಮಧ್ಯಾಹ್ನ ಮೂರರ ವೇಳೆಗೆ ಹಂಸರಾಜ್ ಮೀನಾ ಎಂಬುವವರು, ‘ನಿರುದ್ಯೋಗವನ್ನು ಖಂಡಿಸಿ ಸೆಪ್ಟೆಂಬರ್ 17ರ ಸಂಜೆ 17 ಗಂಟೆ (5 ಗಂಟೆ) 17 ನಿಮಿಷಕ್ಕೆ ಟ್ವೀಟ್ ಮಾಡಿ’ ಎಂದು ಕರೆನೀಡಿದರು. 5 ಗಂಟೆಯ ನಂತರ, #17Baje17Minute ಹ್ಯಾಷ್‌ಟ್ಯಾಗ್‌ನಲ್ಲಿ ಹೆಚ್ಚಿನ ಸಂಖ್ಯೆಯ ಟ್ವೀಟ್‌ಗಳು ಬರಲಾರಂಭಿಸಿದವು. ಒಂಬತ್ತು ಗಂಟೆಯ ವೇಳೆಗೆ ಈ ಹ್ಯಾಷ್‌ಟ್ಯಾಗ್‌ನಲ್ಲಿ 8.82 ಲಕ್ಷಕ್ಕೂ ಹೆಚ್ಚು ಜನರ ಟ್ವೀಟ್‌ಗಳು ಪ್ರಕಟವಾದವು. ಅಲ್ಲದೆ ಭಾರತದ ಟ್ವಿಟರ್‌ಟ್ರೆಂಡ್‌ನಲ್ಲಿ ಇದು ಮೊದಲ ಸ್ಥಾನ ಪಡೆಯಿತು.

ಪ್ರಧಾನಿ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿರುವ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಹಲವು ವಿದ್ಯಾರ್ಥಿಗಳು ತಮ್ಮ ಪದವಿ ಅಂಕಪಟ್ಟಿಗಳ ಪ್ರತಿಗಳಿಗೆ ಬೆಂಕಿಹಚ್ಚಿ ಪ್ರತಿಭಟನೆ ನಡೆಸಿದರು. ದೇಶದ ಹಲವು ಯುವಕರು ತಮ್ಮ ಅಂಕಪಟ್ಟಿಗಳ ಪ್ರತಿ, ಪದವಿಪತ್ರದ ಪ್ರತಿ, ಉದ್ಯೋಗಕ್ಕೆ ಸಲ್ಲಿಸಬೇಕಿದ್ದ ಅರ್ಜಿಗಳನ್ನು ಸುಟ್ಟು, ಟ್ವಿಟರ್‌ನಲ್ಲಿ ಚಿತ್ರ ಮತ್ತು ವಿಡಿಯೊಗಳನ್ನು ಹಾಕಲಾರಂಭಿಸಿದರು. ಇದರ ಬೆನ್ನಲ್ಲೇ ದೇಶದ ಹಲವೆಡೆ ಯುವಜನರು ಪಂಜಿನ ಮೆರವಣಿಗೆ ನಡೆಸಿ, ಉದ್ಯೋಗ ನೀಡುವಂತೆ ಪ್ರಧಾನಿಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಹಲವರು ಟ್ವಿಟರ್‌ನಲ್ಲಿ ತಮ್ಮ ಹೆಸರಿನ ಮುಂದೆ ‘ಬೆರೋಜ್‌ಗಾರ್‌’ (ನಿರುದ್ಯೋಗಿ) ಎಂದು ಸೇರಿಸಿಕೊಂಡು ಪ್ರತಿಭಟನೆ ನಡೆಸಿದ್ದಾರೆ.

ಡಿಸ್‌ಲೈಕ್ ಅಭಿಯಾನ: ಜೆಇಇ ಮತ್ತು ನೀಟ್‌ ಪರೀಕ್ಷೆಯನ್ನು ಮುಂದೂಡಿ ಎಂಬ ಒತ್ತಾಯದ ನಡುವೆಯೂ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅವರಿಗೆ ಸಂಬಂಧಿಸಿದ ಪೋಸ್ಟ್‌ಗಳಿಗೆ ಡಿಸ್‌ಲೈಕ್‌ ಒತ್ತುವ ಅಭಿಯಾನ ನಡೆದಿತ್ತು. ಮೋದಿ ಅವರ ಮನದ ಮಾತು ಕಾರ್ಯಕ್ರಮಕ್ಕೆ ವ್ಯಕ್ತವಾಗಿದ್ದ ಲೈಕ್‌ಗಳಿಗಿಂತ, ಮೂರು ಪಟ್ಟು ಹೆಚ್ಚು ಡಿಸ್‌ಲೈಕ್‌ಗಳು ಬಂದಿದ್ದವು. 

***

ಗಡ್ಡ ಬೆಳೆಸಬೇಡಿ, ಆರ್ಥಿಕತೆ ಬೆಳೆಸಿ. ನಿಮ್ಮ ಮನದ ಮಾತು ಬೇಕಿಲ್ಲ, ನಮ್ಮ ಕೆಲಸದ ಬಗ್ಗೆ ಮಾತಾಡಿ. ಸರ್ಕಾರಿ ಸಂಸ್ಥೆಗಳನ್ನು ಮಾರಬೇಡಿ, ನಿಮ್ಮ ಪಕ್ಷದ ಕಚೇರಿ ಮಾರಿ. 
–ಬೆರೋಜ್‌ಗಾರ್ ರಾಜಶೋವನ್ ಪೌಲ್ @rajshovanpaul49

***

 ಪ್ರಿಯ ಪ್ರಧಾನಿ ಮೋದಿಜೀ ನಾನು ಶಿಪ್ಪಿಂಗ್ ಮ್ಯಾನೇಂಜ್‌ಮೆಂಟ್ ಸ್ನಾತಕೋತ್ತರ ಕೋರ್ಸ್‌ನಲ್ಲಿ ಭಾರತಕ್ಕೇ 3ನೇ ರ‍್ಯಾಂಕ್‌ ಬಂದಿದ್ದೇನೆ. ಆದರೆ ನನಗೆ ನೀಡಲು ಯಾವ ಶಿಪ್ಪಿಂಗ್ ಕಂಪನಿಯಲ್ಲೂ ಉದ್ಯೋಗವಿಲ್ಲ
–ಬೆರೋಜ್‌ಗಾರ್ ನಿತಿನ್ ಕರಣ್ @nitinkarn66

***

ಭಾರತ 45 ವರ್ಷಗಳಲ್ಲಿ ಇದೇ ಮೊದಲ ಭಾರಿ ಅತಿಹೆಚ್ಚು ನಿರುದ್ಯೋಗದ ಸಮಸ್ಯೆ ಎದುರಿಸುತ್ತಿದೆ. ಲಾಕ್‌ಡೌನ್ ಎನ್ನುವುದು ಒಂದು ನೆಪ ಅಷ್ಟೆ. ಪ್ರಧಾನಿಗಳೇ ನಮಗೆ ಉದ್ಯೋಗ ನೀಡಿ. ಇಲ್ಲವೇ ರಾಜೀನಾಮೆ ನೀಡಿ ಮನೆಗೆ ಹೋಗಿ
-ಪವನ್ ದೀಕ್ಷಿತ್ @PawanDixit

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು