ಗುರುವಾರ , ಸೆಪ್ಟೆಂಬರ್ 16, 2021
24 °C
ಪಕ್ಷದಲ್ಲಿ ಹುದ್ದೆ ಅಥವಾ ಸಚಿವ ಸ್ಥಾನಕ್ಕೆ ಬೇಡಿಕೆ

ಪಂಜಾಬ್ ಕಾಂಗ್ರೆಸ್ ಪುನಾರಚನೆಯ ಚಿಂತನೆ: ಪ್ರಿಯಾಂಕಾ–ರಾಹುಲ್ ಭೇಟಿಯಾದ ಸಿಧು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾಂಗ್ರೆಸ್‌ ಮುಖಂಡ ನವಜೋತ್‌ಸಿಂಗ್‌ ಸಿಧು ಅವರು ಪಕ್ಷದ ಮುಖಂಡರಾದ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಬುಧವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ವಿಧಾನಸಭಾ ಚುನಾವಣೆಗೂ ಮುನ್ನ ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷವನ್ನು ಪುನಾರಚಿಸುವ ಚಿಂತನೆ ನಡೆದಿದ್ದು, ಅದರಲ್ಲಿ ತಮ್ಮ ಸ್ಥಾನದ ಬಗ್ಗೆ ಸಿಧು ಅವರು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ಪಂಜಾಬ್‌ನ ಉಪಮುಖ್ಯಮಂತ್ರಿಯಾಗಿದ್ದ ಸಿಧು, ತಮಗೆ ನೀಡಿರುವ ಖಾತೆಯ ವಿಚಾರದಲ್ಲಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್‌ ಜತೆಗೆ ಮುನಿಸಿಕೊಂಡು ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಈಗ ಪಕ್ಷದಲ್ಲಿ ಗೌರವಯುತ ಸ್ಥಾನ ಅಥವಾ ಸಚಿವ ಸ್ಥಾನಕ್ಕಾಗಿ ಪಟ್ಟುಹಿಡಿದಿದ್ದಾರೆ ಎನ್ನಲಾಗಿದೆ.

ಪ್ರಿಯಾಂಕಾ ಜತೆಗೆ ಮಾತುಕತೆಯ ನಂತರ ಅವರ ಜತೆಗೆ ನಿಂತು ತೆಗೆಸಿದ ಚಿತ್ರವನ್ನು ಬುಧವಾರ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿರುವ ಸಿಧು, ‘ಪ್ರಿಯಾಂಕಾ ಅವರ ಜತೆಗೆ ಸುದೀರ್ಘ ಮಾತುಕತೆ ನಡೆಸಿದ್ದೇನೆ. ಇನ್ನು ರಾಹುಲ್‌ ಅವರನ್ನು ಭೇಟಿಯಾಗುವೆ’ ಎಂದು ಬರೆದಿದ್ದರು. ಆದರೆ ಸಿಧು ಜತೆಗೆ ಭೇಟಿ ನಿಗದಿಯಾಗಿಲ್ಲ ಎಂದು ರಾಹುಲ್‌, ಆ ನಂತರ ಹೇಳಿದ್ದರು. ಆದರೂ ಸಂಜೆಯ ವೇಳೆಗೆ ಸಿಧು ಅವರು ರಾಹುಲ್‌ ನಿವಾಸಕ್ಕೆ ಬಂದಿದ್ದರು.

ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಪಕ್ಷದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಕಾಂಗ್ರೆಸ್‌ನ ಕೇಂದ್ರದ ನಾಯಕತ್ವವು ಪ್ರಯತ್ನಿಸುತ್ತಿದ್ದರೆ, ಸಿಧು ಅವರು ಅಮರಿಂದರ್‌ ವಿರುದ್ಧ ಬಂಡಾಯವೆದ್ದು ವಾಗ್ದಾಳಿ ನಡೆಸುತ್ತಿದ್ದಾರೆ. ಇದು ಪಕ್ಷಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ‘ಸಿಧು ವರ್ತನೆಯು ಸಂಪೂರ್ಣ ಅಶಿಸ್ತಿನದ್ದು’ ಎಂದು ಅಮರಿಂದರ್‌ ಟೀಕಿಸಿದ್ದಾರೆ.

ಸಿಧು– ಸಿಂಗ್‌ ನಡುವಿನ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಮೂವರು ಸದಸ್ಯರ ಸಮಿತಿಯನ್ನು ಕಾಂಗ್ರೆಸ್‌ ಹೈಕಮಾಂಡ್‌ ರಚಿಸಿದೆ. ಇಬ್ಬರೂ ನಾಯಕರು ಈಗಾಗಲೇ ಈ ಸಮಿತಿಯ ಮುಂದೆ ಹಾಜರಾಗಿ ತಮ್ಮ ವಾದವನ್ನು ಮಂಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು