ಮಂಗಳವಾರ, ಏಪ್ರಿಲ್ 13, 2021
30 °C

ಸುಶಾಂತ್ ಸಿಂಗ್ ಸಾವು: ಚಾರ್ಜ್‌ಶೀಟ್‌ನಲ್ಲಿ ನಟಿ ರಿಯಾ ಚಕ್ರವರ್ತಿ ಸೇರಿ 33 ಹೆಸರು

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕವಸ್ತು ನಿಯಂತ್ರಣ ಬ್ಯೂರೊ (ಎನ್‌ಸಿಬಿ) ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ಆರೋಪಪಟ್ಟಿಯನ್ನು ಸಲ್ಲಿಸಿದೆ. ಸುಶಾಂತ್ ಅವರ ಮಾಜಿ ಮ್ಯಾನೇಜರ್ ರಿಯಾ ಚಕ್ರವರ್ತಿ ಮತ್ತು ಅವರ ಸೋದರ ಶೋವಿಕ್ ಚಕ್ರವರ್ತಿ ಸೇರಿದಂತೆ 33 ಜನರನ್ನು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ. ಸುಶಾಂತ್ ಅವರ ಮನೆಯ ಕೆಲಸದಾಳುಗಳ ಹೆಸರೂ ಆರೋಪಪಟ್ಟಿಯಲ್ಲಿ ಇದೆ.

ಸುಶಾಂತ್ ಸಿಂಗ್ ಅವರ ತಂದೆ ಪಟ್ನಾದಲ್ಲಿ ದಾಖಲಿಸಿದ್ದ ವಂಚನೆ, ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ವೇಳೆ ಮಾದಕವಸ್ತು ಪೂರೈಕೆಗೆ ಸಂಬಂಧಿಸಿದ ಕೆಲವು ಸಾಕ್ಷ್ಯಗಳನ್ನು ಜಾರಿ ನಿರ್ದೇಶನಾಲಯವು ಕಲೆ ಹಾಕಿತ್ತು. ಈ ಸಾಕ್ಷ್ಯಗಳನ್ನು ಎನ್‌ಸಿಬಿಗೆ ಹಸ್ತಾಂತರಿಸಿತ್ತು. 2020ರ ಸೆಪ್ಟೆಂಬರ್‌ನಲ್ಲಿ ಪ್ರಕರಣ  ದಾಖಲಿಸಿಕೊಂಡಿದ್ದ ಎನ್‌ಸಿಬಿ, ಈಗ ಆರೋಪಪಟ್ಟಿ ಸಲ್ಲಿಸಿದೆ.

ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯು 11,700 ಪುಟಗಳನ್ನು ಹೊಂದಿದೆ. ಅಲ್ಲದೆ, ಸುಮಾರು 50,000 ಪುಟಗಳಷ್ಟು ಇರುವ ಆರೋಪಪಟ್ಟಿಯ ಡಿಜಿಟಲ್ ಪ್ರತಿಯನ್ನೂ ನ್ಯಾಯಾಲಯಕ್ಕೆ ಎನ್‌ಸಿಬಿ ಸಲ್ಲಿಸಿದೆ.

‘ತನಿಖೆ ವೇಳೆ ವಶಕ್ಕೆ ಪಡೆಯಲಾದ ಮಾದಕವಸ್ತುಗಳು, ಮಾದಕವಸ್ತುಗಳ ಪರೀಕ್ಷಾ ವರದಿಗಳು, ಹಲವು ಸ್ವರೂಪದ ಸಾಕ್ಷ್ಯಗಳು, ವಾಟ್ಸ್‌ಆ್ಯಪ್‌ ಚಾಟ್‌ನ ಸ್ಕ್ರೀನ್‌ಶಾಟ್‌ಗಳು, ಮೊಬೈಲ್ ಕರೆ ಮತ್ತು ಎಸ್‌ಎಂಎಸ್‌ ವಿವರ, ಹಣ ವರ್ಗಾವಣೆ ವಿವರಗಳನ್ನು ಎನ್‌ಸಿಬಿ ಕಲೆಹಾಕಿತ್ತು. ಈ ಸಾಕ್ಷ್ಯಗಳು, 30 ಆರೋಪಿಗಳ ಹೇಳಿಕೆಗಳು ಮತ್ತು 200 ಸಾಕ್ಷಿಗಳ ಹೇಳಿಕೆಯನ್ನು ಎನ್‌ಸಿಬಿ ದಾಖಲಿಸಿಕೊಂಡಿತ್ತು. ಇವುಗಳ ಆಧಾರದ ಮೇಲೆ ಆರೋಪಪಟ್ಟಿಯನ್ನು ಸಿದ್ಧಪಡಿಸಲಾಗಿದೆ’ ಎಂದು ಎನ್‌ಸಿಬಿ ಹೇಳಿವೆ.

‘ತನಿಖೆಯ ವೇಳೆ ಭಾರಿ ಪ್ರಮಾಣದಲ್ಲಿ ಚರಸ್, ಗಾಂಜಾ, ಎಲ್‌ಎಸ್‌ಡಿ ಮತ್ತು ಎಕ್ಸ್‌ಟೆಸಿ ಮಾದಕವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಅಲ್ಲದೆ, ಮತ್ತು ಬರಿಸುವ ಔಷಧಗಳನ್ನೂ ಭಾರಿ ಪ್ರಮಾಣದಲ್ಲಿ ವಶಕ್ಕೆ ಪಡೆಯಲಾಗಿತ್ತು. ಜತೆಗೆ ಸಂಬಂಧಪಟ್ಟ ಕಾಯ್ದೆಗಳ ಅಡಿ ಕ್ರಮ ತೆಗೆದುಕೊಳ್ಳಲಾಗಿದೆ. ತನಿಖೆ ಇನ್ನೂ ನಡೆಯುತ್ತಿದೆ. ಇನ್ನೂ ಹಲವು ಅನಾಮಧೇಯ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಬೇಕಿದೆ. ಶೀಘ್ರದಲ್ಲೇ ಪೂರಕ ಆರೋಪಪಟ್ಟಿ
ಯನ್ನು ಸಲ್ಲಿಸುತ್ತೇವೆ’ ಎಂದು ಎನ್‌ಸಿಬಿ ತಿಳಿಸಿದೆ.

8 ಮಂದಿ ಇನ್ನೂ ಕಸ್ಟಡಿಯಲ್ಲಿ: ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ಈವರೆಗೆ 30 ಜನರನ್ನು ಬಂಧಿಸಿತ್ತು. ವಿಚಾರಣೆಯ ನಂತರ ಹಲವರನ್ನು ಬಿಡುಗಡೆ ಮಾಡಿತ್ತು. ರಿಯಾ ಚಕ್ರವರ್ತಿ ಮತ್ತು ಶೋವಿಕ್ ಚಕ್ರವರ್ತಿ ಅವರು ಈಚೆಗೆ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಆದರೆ, ಇನ್ನೂ ಎಂಟು ಮಂದಿ ಎನ್‌ಸಿಬಿ ಬಂಧನದಲ್ಲಿ ಇದ್ದು, ವಿಚಾರಣೆ ನಡೆಯುತ್ತಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು