ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಪರಿವರ್ತಿತ ಕೈದಿಗಳ ಮಾಹಿತಿ ಇಲ್ಲ: ಎನ್‌ಸಿಆರ್‌ಬಿ

ಸಿಎಚ್‌ಆರ್‌ಐನಿಂದ ಆರ್‌ಟಿಐ ಅಡಿ ಅರ್ಜಿ
Last Updated 4 ಡಿಸೆಂಬರ್ 2020, 9:20 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಜೈಲುಗಳಲ್ಲಿರುವ ಕೈದಿಗಳ ಪೈಕಿ, ಲಿಂಗ ಪರಿವರ್ತಿತರ ಸಂಖ್ಯೆ ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ನ್ಯಾಷನಲ್‌ ಕ್ರೈಂ ರೆಕಾರ್ಡ್‌ ಬ್ಯುರೊ (ಎನ್‌ಸಿಆರ್‌ಬಿ) ತಿಳಿಸಿದೆ.

ಆರ್‌ಟಿಐ ಅಡಿ ಕಾಮನ್‌ವೆಲ್ತ್ ಹ್ಯೂಮನ್‌ ರೈಟ್ಸ್‌ ಇನಿಷಿಯೇಟಿವ್‌ (ಸಿಎಚ್‌ಆರ್‌ಐ) ಎಂಬ ಸಂಸ್ಥೆ ಸಲ್ಲಿಸಿದ್ದ ಅರ್ಜಿಗೆ ಎನ್‌ಸಿಆರ್‌ಬಿ ಈ ಉತ್ತರ ನೀಡಿದೆ. ಆದರೆ, ದೇಶದ ಜೈಲುಗಳಲ್ಲಿರುವ ಇಂಥ ಕೈದಿಗಳ ಸಂಖ್ಯೆ 214 ಎಂದು ಸಿಎಚ್‌ಆರ್‌ಐ ನಡೆಸಿರುವ ಸಮೀಕ್ಷೆ ಹೇಳುತ್ತದೆ.

‘2019ರ ಮೇನಿಂದ ಕಳೆದ ಏಪ್ರಿಲ್‌ವರೆಗಿನ ಅವಧಿಯಲ್ಲಿ 214 ಜನ ಲಿಂಗಪರಿವರ್ತಿತ ಕೈದಿಗಳು ವಿವಿಧ ಜೈಲುಗಳಲ್ಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಆದರೆ, ಎನ್‌ಸಿಆರ್‌ಬಿ ತನ್ನ ವಾರ್ಷಿಕ ವರದಿಯಲ್ಲಿ ಈ ಮಾಹಿತಿಯನ್ನು ಸೇರಿಸಲು ವಿಫಲವಾಗಿದೆ’ ಎಂದು ಸಿಎಚ್‌ಆರ್‌ಐ ಸಿದ್ಧಪಡಿಸಿರುವ ‘ಲಾಸ್ಟ್‌ ಐಡೆಂಟಿಟಿ: ಟ್ರಾನ್ಸ್‌ಜೆಂಡರ್ ಪರ್ಸನ್ಸ್‌ ಇನ್‌ಸೈಡ್‌ ಇಂಡಿಯನ್‌ ಪ್ರಿಸನ್ಸ್‌’ ಎಂಬ ವರದಿ ಹೇಳುತ್ತದೆ.

ಉತ್ತರ ಪ್ರದೇಶದಲ್ಲಿ ಗರಿಷ್ಠ 47 ಜನ ಇಂಥ ಕೈದಿಗಳಿದ್ದರೆ, ತೆಲಂಗಾಣ–40, ಒಡಿಶಾ– 20, ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ತಲಾ 18 ಜನ ಲಿಂಗಪರಿವರ್ತಿತ ಕೈದಿಗಳಿದ್ದಾರೆ ಎಂದು ಇದೇ ವರದಿಯಲ್ಲಿ ವಿವರಿಸಲಾಗಿದೆ.

ಲಿಂಗಪರಿವರ್ತಿತರು ಎದುರಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ಅದಕ್ಕೆ ಸ್ಪಂದಿಸುವಲ್ಲಿ ಜೈಲು ಅಧಿಕಾರಿಗಳು ವಿಫಲರಾಗಿದ್ದಾರೆ. ಜೈಲುಗಳಲ್ಲಿರುವ ಪುರುಷ ಕೈದಿಗಳ ಮೇಲೆಯೇ ಅವರ ಗಮನ ಕೇಂದ್ರೀಕೃತವಾಗಿದೆ ಎಂದು ವರದಿ ಹೇಳುತ್ತದೆ.

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್‌, ಮಹಾರಾಷ್ಟ್ರ ಮತ್ತು ರಾಜಸ್ಥಾನ ಸೇರಿದಂತೆ ಕೇವಲ 10 ರಾಜ್ಯಗಳ ಜೈಲುಗಳಲ್ಲಿ ಮಾತ್ರ ಪುರುಷ ಮತ್ತು ಮಹಿಳಾ ಕೈದಿಗಳಿಂದ ಪ್ರತ್ಯೇಕವಾಗಿ ಲಿಂಗಪರಿವರ್ತಿತರನ್ನು ಇರಿಸಲು ವ್ಯವಸ್ಥೆ ಇದೆ. ತಮಿಳುನಾಡು ಮತ್ತು ಉತ್ತರ ಪ್ರದೇಶದ ಕೆಲವು ಜೈಲುಗಳಲ್ಲಿ ಮಾತ್ರ ಇಂಥ ವ್ಯವಸ್ಥೆ ಇದೆ.

ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಂದರ್ಭದಲ್ಲಿ ಕೋರ್ಟ್‌ನ ವಾರಂಟ್‌ನಲ್ಲಿ ಉಲ್ಲೇಖಿಸಿರುವ ಮಾಹಿತಿಯ ಆಧಾರದಲ್ಲಿ ಲಿಂಗಪರಿವರ್ತಿತರನ್ನು ಪ್ರತ್ಯೇಕಿಸುವ ವ್ಯವಸ್ಥೆ ಪಂಜಾಬ್‌, ಜಾರ್ಖಂಡ್‌ ಹಾಗೂ ಕೇರಳದ ಕೆಲವು ಜೈಲುಗಳಲ್ಲಿದೆ ಎಂದು ಸಿಎಚ್‌ಆರ್‌ಐ ಆರ್‌ಟಿಐನಡಿ ಪಡೆದ ಮಾಹಿತಿ ಹೇಳುತ್ತದೆ.

ಕರ್ನಾಟಕದಲ್ಲಿ ಮಾತ್ರ ಜೈಲು ಅಧಿಕಾರಿಗಳಿಗೆ ತರಬೇತಿ

ಲಿಂಗ ಪರಿವರ್ತಿತರ ಹಕ್ಕುಗಳ ಬಗ್ಗೆ ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡುವುದು, ಅವರನ್ನು ಈ ವಿಷಯದಲ್ಲಿ ಸಂವೇದನಾಶೀಲರನ್ನಾಗಿ ಮಾಡುವ ಸಲುವಾಗಿ ತರಬೇತಿ ಅಗತ್ಯ. ಕರ್ನಾಟಕದಲ್ಲಿ ಮಾತ್ರ ಜೈಲು ಅಧಿಕಾರಿಗಳಿಗೆ ಇಂತಹ ತರಬೇತಿ ನೀಡಲಾಗಿದೆ ಎಂದು ಸಿಎಚ್‌ಆರ್‌ಐ ವರದಿ ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT