ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗಳ ಸೋಲಿನಿಂದ ಸೂಕ್ತ ಪಾಠ ಕಲಿಯಬೇಕಿದೆ: ಸೋನಿಯಾ ಗಾಂಧಿ

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ
Last Updated 10 ಮೇ 2021, 9:23 IST
ಅಕ್ಷರ ಗಾತ್ರ

ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷ ಎದುರಿಸಿದ ಗಂಭೀರವಾದ ಹಿನ್ನಡೆಗಳಿಂದ ಸರಿಯಾದ ಪಾಠಗಳನ್ನು ಕಲಿಯುವತ್ತ ಗಮನ ಹರಿಸಬೇಕು. ಸೋಲುಗಳಿಗೆ ಕಾರಣವಾದ ಅಂಶಗಳನ್ನು ಗುರುತಿಸಿ ಅವಲೋಕಿಸಲು ಸಣ್ಣದಾದ ಗುಂಪೊಂದನ್ನು ರಚಿಸಬೇಕಿದೆ‘ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರು.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಸೋಮವಾರ ನಡೆದ ಮಹತ್ವದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯ ಉದ್ಘಾಟನಾ ಭಾಷಣ ಮಾಡಿದ ಅವರು, ‘ಈ ಗುಂಪು, ಹಿನ್ನೆಡೆಗೆ ಕಾರಣವಾಗುವ ಪ್ರತಿಯೊಂದು ಅಂಶವನ್ನೂ ಗುರುತಿಸಿ, ಅವಲೋಕಿಸಬೇಕು‘ ಎಂದು ಅವರು ಹೇಳಿದರು.

ಇತ್ತೀಚೆಗೆ ನಡೆದ ಚುನಾವಣೆಗಳ ಪೈಕಿ ಪಶ್ಚಿಮ ಬಂಗಾಳದಲ್ಲಿ ಪಕ್ಷ ಕಳಪೆ ಪ್ರದರ್ಶನ ತೋರಿದೆ. ಪುದುಚೇರಿಯಲ್ಲಿ ಅಧಿಕಾರ ಕಳೆದುಕೊಂಡಿದೆ. ಕೇರಳ ಮತ್ತು ಅಸ್ಸಾಂನಲ್ಲಿ ಮರಳಿ ಅಧಿಕಾರ ಪಡೆಯುವಲ್ಲಿ ಪಕ್ಷ ವಿಫಲವಾಗಿದೆ. ತಮಿಳುನಾಡಿನಲ್ಲಿ ಮಿತ್ರ ಪಕ್ಷ ಡಿಎಂಕೆ ಸಹಾಯದಿಂದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಚುನಾವಣೆಗಳಲ್ಲಿ ಪಕ್ಷ ತೋರಿದ ಕಳಪೆ ಪದರ್ಶನವನ್ನು ಪರಾಮರ್ಶಿಸುವುದಕ್ಕಾಗಿಯೇ ಈ ಮಹತ್ವದ ಸಭೆಯನ್ನು ಕರೆಯಲಾಗಿದೆ.

‘ಚುನಾವಣೆಗಳಲ್ಲಾಗಿರುವ ಗಂಭೀರವಾದ ಹಿನ್ನಡೆಗಳ ಬಗ್ಗೆ ಗಮನ ಹರಿಸಬೇಕು. ಈ ಸೋಲಿನಿಂದ ನಾವು ತೀರಾ ನಿರಾಶೆಗೊಂಡಿದ್ದೇವೆ. ಇಂಥ ಸೋಲಿಗೆ ಕಾರಣವಾದ ಪ್ರತಿಯೊಂದು ಅಂಶವನ್ನು ಗಮನಿಸಿ, ಶೀಘ್ರ ವರದಿ ನೀಡುವುದ ಕ್ಕಾಗಿ ಒಂದು ಸಣ್ಣ ಗುಂಪನ್ನು ರಚಿಸುತ್ತಿದ್ದೇನೆ‘ ಎಂದು ಸೋನಿಯಾ ಅವರು ಹೇಳಿದರು.

‘ಕೇರಳ ಮತ್ತು ಅಸ್ಸಾಂ ರಾಜ್ಯದಲ್ಲಿ ಹಾಲಿ ಇದ್ದಂತಹ‌ ಸರ್ಕಾರಗಳನ್ನು ಸೋಲಿಸುವಲ್ಲಿ ಏಕೆ ವಿಫಲರಾದೆವು ಹಾಗೂ ಪಶ್ಚಿಮ ಬಂಗಾಳದಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಏಕೆ ಸಾಧ್ಯವಾಗಲಿಲ್ಲ? ಈ ಬಗ್ಗೆ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು‘ ಎಂದು ಸೋನಿಯಾ ಹೇಳಿದರು.

‘ಇವೆಲ್ಲ ಘಟನೆಗಳು ಅಹಿತಕರ ಪಾಠಗಳನ್ನು ಕಲಿಸುತ್ತವೆ. ಆದರೆ, ನಾವು ವಾಸ್ತವಕ್ಕೆ ಮುಖಾಮುಖಿಯಾಗಿ, ಸತ್ಯವನ್ನು ಅರ್ಥ ಮಾಡಿಕೊಳ್ಳದಿದ್ದರೆ, ಇವುಗಳಿಂದಲೂ ಸರಿಯಾದ ಪಾಠಗಳನ್ನು ಕಲಿಯುವುದಿಲ್ಲ‘ ಎಂದು ಅವರು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ವೇಳಾಪಟ್ಟಿ ಕುರಿತು ಚರ್ಚಿಸಲಾಗುತ್ತದೆ ಎಂದು ಸೋನಿಯಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT