ಗುರುವಾರ , ಮೇ 19, 2022
24 °C

ನೀಟ್‌: ರಾಜ್ಯಪಾಲರ ಸತ್ಕಾರಕೂಟದಿಂದ ದೂರ ಉಳಿದ ಡಿಎಂಕೆ ನಾಯಕರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ತಮಿಳುನಾಡು ವಿದ್ಯಾರ್ಥಿಗಳಿಗೆ ‘ನೀಟ್‌’ನಿಂದ ವಿನಾಯಿತಿ ನೀಡಬೇಕು ಎಂಬ ವಿಷಯವಾಗಿ ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷಕ್ಕೆ, ತಮಿಳು ಹೊಸ ವರ್ಷ ಅಂಗವಾಗಿ ರಾಜಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸತ್ಕಾರಕೂಟ ಸಾಕ್ಷಿಯಾಯಿತು.

ರಾಜ್ಯಪಾಲ ಆರ್‌.ಎನ್‌.ರವಿ ಅವರು ತಮಿಳು ಹೊಸ ವರ್ಷಾಚರಣೆ ಅಂಗವಾಗಿ ರಾಜಭವನದಲ್ಲಿ ಸತ್ಕಾರಕೂಟ ಏರ್ಪಡಿಸಿದ್ದರು. ಆದರೆ, ಆಡಳಿತಾರೂಢ ಪಕ್ಷ ಡಿಎಂಕೆ ಮುಖಂಡರು ಈ ಕಾರ್ಯಕ್ರಮದಿಂದ ದೂರ ಉಳಿಯುವ ಮೂಲಕ ಗಮನ ಸೆಳೆದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕೈಗಾರಿಕಾ ಸಚಿವ ತಂಗಂ ತೆನ್ನರಸು, ‘ನೀಟ್‌ ವ್ಯಾಪ್ತಿಯಿಂದ ತಮಿಳುನಾಡನ್ನು ಹೊರಗಿಡಬೇಕು ಎಂಬ ನಿರ್ಣಯವನ್ನು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಿ, ರಾಜ್ಯಪಾಲರಿಗೆ ಎರಡನೇ ಸಲ ಕಳುಹಿಸಲಾಗಿದೆ. ಇದಕ್ಕೆ ಅವರು ಇನ್ನೂ ಅಂಕಿತ ಹಾಕಿಲ್ಲ. ಇಂಥ ಸಮಯದಲ್ಲಿ ನಾವು ತಮಿಳು ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ, ಅದು ರಾಜ್ಯದ ಜನರ ಭಾವನೆಗಳಿಗೆ ಧಕ್ಕೆ ತರಲಿದೆ’ ಎಂದರು.

‘ಈ ನಿರ್ಣಯಕ್ಕೆ ಅಂಕಿತ ನೀಡಬೇಕೆ, ಬೇಡವೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂಬುದಾಗಿ ರಾಜ್ಯಪಾಲರು ತಿಳಿಸಿದರು. ಇಂಥ ಸನ್ನಿವೇಶದಲ್ಲಿ ನಾವು ರಾಜಭವನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಸರಿ ಎನಿಸುವುದಿಲ್ಲ. ಅಲ್ಲದೇ, ನಮ್ಮ ಈ ನಿಲುವನ್ನು ರಾಜ್ಯಪಾಲರಿಗೆ ತಿಳಿಸಿದ್ದೇವೆ’ ಎಂದು ಸಚಿವ ತೆನ್ನರಸು ಹೇಳಿದರು.

‘ಈ ವಿಷಯವಾಗಿ ಮುಂದಿನ ನಡೆ ಬಗ್ಗೆ ಮುಖ್ಯಮಂತ್ರಿ ಸ್ಟಾಲಿನ್ ನಿರ್ಧಾರ ಕೈಗೊಳ್ಳುವರು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಸೂಚನೆಯಂತೆ ಸಚಿವ ತೆನ್ನರಸು ಹಾಗೂ ಆರೋಗ್ಯ ಸಚಿವ ಮಾ.ಸುಬ್ರಮಣಿಯನ್ ಅವರು ರಾಜಭವನದಲ್ಲಿ ರಾಜ್ಯಪಾಲ ರವಿ ಅವರನ್ನು ಭೇಟಿ ಮಾಡಿದ್ದರು. ನೀಟ್‌ಗೆ ಸಂಬಂಧಿಸಿ ಫೆಬ್ರುವರಿಯಲ್ಲಿ ಎರಡನೇ ಬಾರಿ ಅಂಗೀಕರಿಸಿದ ನಿರ್ಣಯಕ್ಕೆ ಅಂಕಿತ ಹಾಕುವ ವಿಷಯವಾಗಿ ಚರ್ಚೆ ನಡೆಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು