ಶನಿವಾರ, ಜುಲೈ 24, 2021
23 °C

ದ್ವೇಷಪೂರಿತ ಸಂದೇಶಗಳ ಮೇಲೆ ಹೊಸ ಐಟಿ ಕಾಯ್ದೆ ನಿಗಾ: ಸುಪ್ರೀಂ ಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಾಮಾಜಿಕ ಮಾಧ್ಯಮಗಳ ಮೂಲಕ ಹಬ್ಬಿಸುವ ದ್ವೇಷಪೂರಿತ ಹೇಳಿಕೆ/ಪ್ರಚೋದನಕಾರಿ ಸಂದೇಶಗಳ ಬಗ್ಗೆ, ಮಾಹಿತಿ ತಂತ್ರಜ್ಞಾನದ ಕಾಯ್ದೆಯ ಹೊಸ ನಿಯಮಗಳು ನಿಗಾ ವಹಿಸುತ್ತವೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂಥ ಸಂದೇಶಗಳನ್ನು ಹಾಕುವ ಟ್ವಿಟರ್‌ ಬಳಕೆದಾರರು ಮತ್ತು ಟ್ವಿಟರ್ ವಿರುದ್ಧ ಸಿಬಿಐ ಅಥವಾ ಎನ್‌ಐಎ ತನಿಖೆಗೆ ಸೂಚಿಸುವಂತೆ ಆಗ್ರಹಿಸಿ ಖಾಜಾ ಐಜುದ್ದೀನ್‌ ಎಂಬ ವಕೀಲರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ‘ಮಾಹಿತಿ ತಂತ್ರಜ್ಞಾನದ ಇತ್ತೀಚಿನ ನಿಯಮಗಳನ್ನು ನೀವು ಗಮನಿಸಿಲ್ಲವೇ’ ಎಂದು ಅರ್ಜಿದಾರರನ್ನು ಪ್ರಶ್ನಿಸಿತು.

ಕೊರೊನಾ ವೈರಸ್‌ ಸೋಂಕು ಹೆಚ್ಚಲು ಕಾರಣವಾಯಿತು ಎಂದು ಆರೋಪಿಸಿ ಮಾಧ್ಯಮಗಳಲ್ಲಿ ವರದಿಯಾದ ನವದೆಹಲಿಯ ನಿಜಾಮುದ್ದೀನ್‌ನಲ್ಲಿ ತಬ್ಲೀಗಿ ಜಮಾತ್‌ನಲ್ಲಿನ ಘಟನೆಯನ್ನು ಉಲ್ಲೇಖಿಸಿ ಅರ್ಜಿ ಸಲ್ಲಿಸಲಾಗಿತ್ತು.

‘ಇದು ಈಗಾಗಲೇ ಮುಗಿದು ಹೋದ ಅಧ್ಯಾಯ. ಅದನ್ನೇಕೆ ನೀವು ಮತ್ತೆ ಕೆದಕುತ್ತೀರಿ? ನ್ಯಾಯಾಲಯದ ಮುಂದೆ ಇನ್ನೂ ಸಾಕಷ್ಟು ಅರ್ಜಿಗಳಿವೆ’ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ನ್ಯಾಯಪೀಠ ಹೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರು, ತಮ್ಮ ಅರ್ಜಿ ಕೂಡ ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಧಾರ್ಮಿಕ ವೈಷಮ್ಯ ಹೆಚ್ಚಿಸುವಂಥ ಸಂದೇಶಗಳಂಥ ಪ್ರಮುಖ ಅಂಶಗಳನ್ನು ಒಳಗೊಂಡಿದ್ದಾಗಿ ವಾದಿಸಿದರು.

ಹೊಸ ಐಟಿ ಕಾಯ್ದೆಯು ಇಂಥ ವಿಷಯಗಳ ಬಗ್ಗೆ ನಿಗಾ ವಹಿಸಲಿದೆ ಎಂದು ಹೇಳಿದ ನ್ಯಾಯಪೀಠ, ಹೊಸ ನಿಯಮಗಳನ್ನು ಅಧ್ಯಯನ ಮಾಡುವಂತೆ ಅರ್ಜಿದಾರರಿಗೆ ಸೂಚಿಸಿ, ವಾರದ ಬಳಿಕ ವಿಚಾರಣೆಯನ್ನು ಮುಂದುವರಿಸುವುದಾಗಿ ಹೇಳಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು