ಭಾನುವಾರ, ಅಕ್ಟೋಬರ್ 25, 2020
28 °C

ಅ.1ರಿಂದ ಹೊಸ ನಿಯಮಗಳು: ಡಿಎಲ್, ಆರ್‌ಸಿ ಕಾರ್ಡ್‌ ಬೇಕಿಲ್ಲ; ಡಿಜಿಟಲ್ ಕಾಪಿ ಸಾಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಿಜಿ ಲಾಕರ್‌–ಪ್ರಾತಿನಿಧಿಕ ಚಿತ್ರ

ನವದೆಹಲಿ: ಅಕ್ಟೋಬರ್‌ 1ರಿಂದ ಹೊಸ ನಿಯಮಗಳು ಜಾರಿಗೆ ಬರುತ್ತಿದ್ದು, ವಾಹನ ಸವಾರರು ಚಾಲನಾ ಪರವಾನಗಿ (ಡಿಎಲ್‌) ಮತ್ತು ರೆಜಿಸ್ಟ್ರೇಷನ್‌ ಸರ್ಟಿಫಿಕೆಟ್‌ (ಆರ್‌ಸಿ) ಕಾರ್ಡ್‌ಗಳ ಬದಲು ಇ–ಕಾಪಿಗಳನ್ನು ತೋರಿಸಬಹುದಾಗಿದೆ.

ವಾಹನ ಸವಾರರು ಡಿಎಲ್‌ ಮತ್ತು ಆರ್‌ಸಿ ಕಾರ್ಡ್‌ಗಳನ್ನು ಜೊತೆಯಲ್ಲೇ ಇಟ್ಟುಕೊಳ್ಳುವ ಅಗತ್ಯವಿರುವುದಿಲ್ಲ. ಪರಿಶೀಲನೆ ಸಂದರ್ಭಗಳಲ್ಲಿ ಡಿಜಿಟಲ್‌ ಪ್ರತಿಗಳನ್ನು ತೋರಿಸಿದರೆ ಸಾಕು. ಕೇಂದ್ರ ಸರ್ಕಾರದ ಡಿಜಿ ಲಾಕರ್‌ ಅಥವಾ ಎಂ–ಪರಿವಹನ್‌ ರೀತಿಯ ಪೋರ್ಟಲ್‌ಗಳಿಗೆ ದಾಖಲೆಗಳನ್ನು ಅಪ್‌ಲೋಡ್‌ ಮಾಡಿಕೊಂಡು, ಅಗತ್ಯವಾದಲ್ಲಿ ಡಿಜಿಟಲ್‌ ಪ್ರತಿಯನ್ನೇ ತೋರಿಸಬಹುದಾಗಿದೆ.

ಇನ್ನೂ ಕೇಂದ್ರದ ಮೋಟಾರು ವಾಹನ ನಿಯಮಾವಳಿಗಳಿಗೆ ಇತ್ತೀಚೆಗೆ ತರಲಾಗಿರುವ ತಿದ್ದುಪಡಿಗಳ ಅನ್ವಯ, ವಾಹನ ಚಾಲನೆ ಮಾಡುವ ಸಮಯದಲ್ಲಿ ಮಾರ್ಗಸೂಚಿಗಾಗಿ (ಮ್ಯಾಪ್‌/ನ್ಯಾವಿಗೇಷನ್‌) ಮಾತ್ರ ಮೊಬೈಲ್‌ ಫೋನ್‌ಗಳ ಬಳಕೆ ಮಾಡಬಹುದಾಗಿದೆ. ಅದೂ ಸಹ ಡ್ರೈವರ್‌ ಏಕಾಗ್ರತೆಗೆ ಭಂಗ ಬಾರದ ರೀತಿಯಲ್ಲಿರಬೇಕು.

ದೇಶೀಯವಾಗಿ ತಯಾರಿಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ಆಮದು ಮಾಡಿಕೊಳ್ಳುವ ಓಪನ್‌ ಸೆಲ್‌ ಪ್ಯಾನೆಲ್‌ಗಳ ಮೇಲೆ ಶೇ 5ರಷ್ಟು ಆಮದು ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದ್ದು, ಟಿವಿಗಳ ಬೆಲೆ ಏರಿಕೆಯಾಗಲಿದೆ.

ಸಿಹಿ ತಿನಿಸು ಮಾರಾಟ ಮಾಡುವ ಅಂಗಡಿಗಳಲ್ಲಿ ಪ್ಯಾಕ್‌ ಮಾಡದಿರುವ ತಿಂಡಿಗಳಿಗೆ ಬಳಸಬಹುದಾದ ಕೊನೆಯ ದಿನದ ಮಾಹಿತಿ ಫಲಕವನ್ನು ಕಡ್ಡಾಯವಾಗಿ ಹಾಕಬೇಕಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್ಎಸ್‌ಎಐ) ಹೊಸ ನಿಯಮಗಳ ಅನ್ವಯ ಸಿಹಿ ಮಾರಾಟ ಅಂಗಡಿಗಳಲ್ಲಿ ಪ್ಯಾಕ್‌ ಮಾಡದಿರುವ ತಿಂಡಿಗಳಿಗೆ 'ಬಳಸಬಹುದಾದ ಕೊನೆಯ ದಿನ' ಪ್ರಕಟಿಸುವುದು ಕಡ್ಡಾಯ ಮಾಡಲಾಗಿದೆ. ಹಾಗೇ ಸಾಸಿವೆ ಎಣ್ಣೆ ಜೊತೆಗೆ ಇತರೆ ಯಾವುದೇ ಅಡುಗೆ ಎಣ್ಣೆ ಬೆರಕೆ ಮಾಡಿ ಬಳಸುವುದನ್ನು ನಿಷೇಧಿಸಲಾಗಿದೆ.

ವಿದೇಶ ಪ್ರವಾಸಗಳ ಪ್ಯಾಕೇಜ್‌ಗಳ ಖರೀದಿ ಸೇರಿದಂತೆ ಹೊರದೇಶಗಳಿಗೆ ವರ್ಗಾಯಿಸಲಾದ ₹7 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ಮೂಲದಲ್ಲಿಯೇ ತೆರಿಗೆ ಸಂಗ್ರಹ (ಟಿಸಿಎಸ್‌) ಅನ್ವಯವಾಗಲಿದೆ. ಮೂಲದಲ್ಲಿಯೇ ತೆರಿಗೆ ಕಡಿತ (ಟಿಡಿಎಸ್‌) ಆಗಿರದಿದ್ದರೆ ಟಿಸಿಎಸ್‌ ಅನ್ವಯಿಸುತ್ತದೆ. ಯಾವುದೇ ಮೊತ್ತದ ವಿದೇಶ ಪ್ರವಾಸದ ಪ್ಯಾಕೇಜ್‌ಗಳಿಗೆ ಶೇ 5ರಷ್ಟು ತೆರಿಗೆ ಬೀಳಲಿದೆ ಹಾಗೂ ವಿದೇಶಕ್ಕೆ ವರ್ಗಾಯಿಸಲಾದ ಹಣ ಏಳು ಲಕ್ಷ ರೂಪಾಯಿ ಮೀರಿದರೆ ಮಾತ್ರ ತೆರಿಗೆ ಬೀಳಲಿದೆ.

ಡಿಬಿಟ್‌ ಕಾರ್ಡ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಸುರಕ್ಷತೆಗಾಗಿ ಆರ್‌ಬಿಐ ಹೊಸ ನಿಯಮಗಳನ್ನು ಪ್ರಕಟಿಸಿದ್ದು, ಕಾರ್ಡ್‌ ಬಳಕೆದಾರರು ಒಟಿಪಿ ಸೇವೆಗಳಿಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಅಂತರರಾಷ್ಟ್ರೀಯ ವಹಿವಾಟು, ಆನ್‌ಲೈನ್‌ ಹಾಗೂ ಕಾಂಟ್ಯಾಕ್ಟ್‌ಲೆಸ್‌ ಕಾರ್ಡ್‌ಗಳ ವಹಿವಾಟಿನ ಮೇಲೆ ಮಿತಿಯನ್ನು ನಿಗದಿ ಪಡಿಸಿಕೊಳ್ಳಬಹುದಾಗಿದೆ. ಕಾರ್ಡ್‌ನಿಂದ ಇ–ಪಾವತಿ ನಡೆಸುವುದನ್ನು ನಿಷ್ಕ್ರಿಯಗೊಳಿಸಿಕೊಳ್ಳಬಹುದು.

ಆದಾಯ ತೆರಿಗೆ ಇಲಾಖೆಯ ಮೂಲದಲ್ಲಿಯೇ ತೆರಿಗೆ ಸಂಗ್ರಹ (ಟಿಸಿಎಸ್‌) ಹೊಸ ಪದ್ಧತಿ ಅಡಿಯಲ್ಲಿ ಇ–ಕಾಮರ್ಸ್‌ ಆಪರೇಟರ್‌ಗಳು ಸರಕು ಮತ್ತು ಸೇವೆಗಳ ಮಾರಾಟದೊಂದಿಗೆ ಶೇ 1ರಷ್ಟು ತೆರಿಗೆ ಕಡಿತ ಮಾಡಿಕೊಳ್ಳಬೇಕಿದೆ. ಒಟ್ಟು ಮೊತ್ತದ ಮೇಲೆ ತೆರಿಗೆ ಕಡಿತಗೊಳಿಸಬೇಕಾಗುತ್ತದೆ.

ಬಡ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಒದಗಿಸಿರುವ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಸೆಪ್ಟೆಂಬರ್‌ 30ಕ್ಕೆ ಕೊನೆಯಾಗಿದೆ. ಫಲಾನುಭವಿಗಳು ಇನ್ನು ಮುಂದೆ ಗ್ಯಾಸ್‌ ಸಿಲಿಂಡರ್‌ಗಳನ್ನು ಖರೀದಿಸಬೇಕಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು