ಬುಧವಾರ, ಆಗಸ್ಟ್ 17, 2022
29 °C
ರಾಜ್ಯ ಸರ್ಕಾರಗಳಿಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಸೂಚನೆ

ಗಿಡ ನೆಡುವಂತೆ ಹೌಸಿಂಗ್‌ ಸೊಸೈಟಿಗಳಿಗೆ ನಿರ್ದೇಶಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ತಮ್ಮ ಸುತ್ತಮುತ್ತಲಿನ ಜಾಗಗಳಲ್ಲಿ ಗಿಡಗಳನ್ನು ನೆಡುವಂತೆ ಹೌಸಿಂಗ್‌ ಸೊಸೈಟಿ, ವಾಣಿಜ್ಯ ಸಂಕೀರ್ಣಗಳ ಮಾಲೀಕರು ಹಾಗೂ ವಸತಿ ಸಮುಚ್ಛಯಗಳ ಒಡೆತನ ಹೊಂದಿರುವವರಿಗೆ ನಿರ್ದೇಶಿಸಬೇಕು’ ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು (ಎನ್‌ಜಿಟಿ) ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತಕ್ಕೆ ಸೂಚಿಸಿದೆ.

‘ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತವು ಸಾರ್ವಜನಿಕ ಉದ್ಯಾನಗಳಲ್ಲಿ ಗಿಡ ನೆಡುವಂತೆ ಸಂಬಂಧಪಟ್ಟವರನ್ನು ಪ್ರೇರೇಪಿಸಬೇಕು. ಇದರಿಂದ ಉತ್ತಮ ಪರಿಸರ ನೆಲೆಗೊಳ್ಳುತ್ತದೆ. ಪರಿಶುದ್ಧ ಗಾಳಿಯೂ ಸಿಗುತ್ತದೆ’ ಎಂದು ನ್ಯಾಯಮೂರ್ತಿ ಆದರ್ಶ್‌ಕುಮಾರ್‌ ಗೋಯಲ್‌ ಅವರಿದ್ದ ಪೀಠ ಹೇಳಿದೆ.

ಸೊಸೈಟಿ ಫಾರ್‌ ಪ್ರೊಟೆಕ್ಷನ್‌ ಆಫ್‌ ಕಲ್ಚರ್‌, ಹೆರಿಟೇಜ್‌, ಎನ್ವಿರಾನ್‌ಮೆಂಟ್‌, ಟ್ರಡಿಷನ್ಸ್‌ ಆ್ಯಂಡ್‌ ಪ್ರೊಮೊಷನ್‌ ಆಫ್‌ ನ್ಯಾಷನಲ್‌ ಅವೇರ್‌ನೆಸ್‌ ಹೆಸರಿನ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೀಠ ಸೋಮವಾರ ನಡೆಸಿತು.

ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳ ಬದಿಯಲ್ಲಿರುವ ಸರ್ಕಾರಿ ಜಾಗಗಳಲ್ಲಿ ಗಿಡಗಳನ್ನು ನೆಡಬೇಕೆಂದು 2017ರ ಸೆಪ್ಟೆಂಬರ್‌ 5ರಂದು ಎನ್‌ಜಿಟಿ ನೀಡಿದ್ದ ಆದೇಶ ಪಾಲನೆಯಾಗುತ್ತಿಲ್ಲ ಎಂದು ಎನ್‌ಜಿಒ ದೂರಿತ್ತು.

2015ರ ಹಸಿರು ಹೆದ್ದಾರಿ ನೀತಿಯನ್ನು ಕಡ್ಡಾಯವಾಗಿ ಪಾಲಿಸುವುದಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಹಿಂದಿನ ವಿಚಾರಣೆ ವೇಳೆ ಪೀಠಕ್ಕೆ ಮನವರಿಕೆ ಮಾಡಿಕೊಟ್ಟಿತ್ತು.

‘ವಾಹನಗಳಿಂದ ಉಂಟಾಗುತ್ತಿರುವ ಮಾಲಿನ್ಯವನ್ನು ತಡೆಗಟ್ಟುವುದಕ್ಕಾಗಿ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಗಿಡಗಳನ್ನು ಬೆಳೆಸುವುದು ಎನ್‌ಎಚ್‌ಎಐನ ಜವಾಬ್ದಾರಿ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಇದರ ಮೇಲ್ವಿಚಾರಣೆ ನಡೆಸಬೇಕು. ರಾಜ್ಯ ಲೋಕೋಪಯೋಗಿ ಇಲಾಖೆಗಳೂ ಇದನ್ನು ಪಾಲಿಸಬೇಕು. ಇದೊಂದು ಸಾಂವಿಧಾನಿಕ ಆದೇಶ’ ಎಂದೂ ಪೀಠವು ತಿಳಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.