ಬುಧವಾರ, ಸೆಪ್ಟೆಂಬರ್ 22, 2021
28 °C
ಮಹಾರಾಷ್ಟ್ರದ ರಾಯಘಡ್‌ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಪರಿಸರ ನಿಮಯ ಉಲ್ಲಂಘನೆ ಆರೋಪ

ಜಿಂದಾಲ್‌ ಪ್ರಕರಣ : ಐವರು ಸದಸ್ಯರ ಸಮಿತಿ ರಚಿಸಿದ ಎನ್‌ಜಿಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಹಾರಾಷ್ಟ್ರದ ರಾಯಘಡ್‌ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಜಿಂದಾಲ್‌ ಸ್ಟೀಲ್‌ ವರ್ಕ್ಸ್‌ (ಜೆಎಸ್‌ಡಬ್ಲ್ಯೂ) ಕಂಪನಿಯು ಕೈಗಾರಿಕಾ ಚಟುವಟಿಕೆಗಳನ್ನು ನಡೆಸಲು ಪರಿಸರದ ಮಾನದಂಡಗಳನ್ನು ಉಲ್ಲಂಘಿಸಿದೆ ಎಂದು ಸಲ್ಲಿಕೆಯಾದ ಅರ್ಜಿಯ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಐವರು ಸದಸ್ಯರ ಸಮಿತಿಯನ್ನು ರಚಿಸಿದೆ. 

ಸ್ಥಳದಲ್ಲಿ ಜಲ ಮತ್ತು ವಾಯು ರಕ್ಷಣೆಗೆ ಸಂಬಂಧಿಸಿದ ಕಾಯ್ದೆಗಳು ಮತ್ತು ಅಪಾಯಕಾರಿ ತ್ಯಾಜ್ಯ ನಿರ್ವಹಣೆ ಸಂಬಂಧಿಸಿದಂತೆ ನಿಯಮಗಳನ್ನು ಪಾಲಿಸಲಾಗಿದೆಯೇ ಹಾಗೂ ಕೃಷಿಗೆ ಹಾನಿ ಇತ್ಯಾದಿ ವಿಷಯಗಳ ಬಗ್ಗೆ ಪರಿಶೀಲಿಸುವಂತೆ ನ್ಯಾಯಮೂರ್ತಿ ಎ.ಕೆ.ಗೋಯಲ್‌ ಅವರನ್ನೊಳಗೊಂಡ ಪೀಠವು ಸಮಿತಿಗೆ ಸೂಚಿಸಿದೆ.

ಪರಿಸರ ಮತ್ತು ಅರಣ್ಯ ಸಚಿವಾಲಯದ ಜಂಟಿ ನಿರ್ದೇಶಕರ ಹುದ್ದೆಯ ಸಮಾನ ಅಧಿಕಾರಿಯು ಸಮಿತಿಯ ಮುಖ್ಯಸ್ಥರಾಗುತ್ತಾರೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಮುಂಬೈನ ಐಐಟಿ, ರಾಯಘಡದ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರು ಸಮಿತಿಯ ಇತರ ಸದಸ್ಯರಾಗಿರುತ್ತಾರೆ. 

’ಸ್ಥಳದಲ್ಲಿ ಕೈಗಾರಿಕಾ ಚಟುವಟಿಕೆಗಳಿಂದ ಹಾನಿಗೊಳಗಾದ ಪರಿಸರ ಮತ್ತು ಪರಿಹಾರ ನೀಡುವ ಬಗ್ಗೆ ಸಮಿತಿಯು ಅಂದಾಜಿಸಲಿದೆ. ಅಗತ್ಯವಿದ್ದರೆ ತಜ್ಞ ಸಂಸ್ಥೆ ಅಥವಾ ವ್ಯಕ್ತಿಯ ಮೂಲಕ ಸ್ಥಳ ಪರಿಶೀಲನೆ ನಡೆಸಲು ಸಮಿತಿಗೆ ಸ್ವಾತಂತ್ರ್ಯವಿದೆ‘ ಎಂದು ಪೀಠ ಹೇಳಿದೆ.

’ಸ್ಥಳದಲ್ಲಿ ಒಂದು ವೇಳೆ ಪರಿಸರ ನಾಶವಾಗಿರುವುದು ಕಂಡು ಬಂದರೆ ಪರಿಹಾರ ಮೊತ್ತವನ್ನು ನೀಡಲು ಕಂಪನಿಗೆ ಸಲಹೆ ನೀಡಬಹುದು. ಈ ಕುರಿತು ನಾಲ್ಕು ತಿಂಗಳೊಳಗೆ ಇ–ಮೇಲ್‌ ಮೂಲಕ ವರದಿ ಸಲ್ಲಿಸಬೇಕು‘ ಎಂದು ಪೀಠ ನಿರ್ದೇಶನ ನೀಡಿತು.

ಜಿಂದಾಲ್‌ ಸ್ಟೀಲ್‌ ವರ್ಕ್ಸ್‌ ಪರಿಸರ ನಿಯಮಗಳನ್ನು ಉಲ್ಲಂಘಿಸಿದೆ ಎಂದು ರಾಯಘಡದ ಸಮಿತಾ ರಾಜೇಂದ್ರ ಪಾಟೀಲ್‌ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಎನ್‌ಜಿಟಿ, ಈ ನಿರ್ದೇಶನಗಳನ್ನು ನೀಡಿದೆ.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು