ಗುರುವಾರ , ಆಗಸ್ಟ್ 11, 2022
23 °C

ಖಲಿಸ್ತಾನ್‌ ಪರ ಅಭಿಯಾನ: ವಿದೇಶದಲ್ಲಿರುವ 16 ಜನರ ವಿರುದ್ಧ ಆರೋಪ ಪಟ್ಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಖಲಿಸ್ತಾನ್‌ ರಚನೆ ಹೆಸರಿನಲ್ಲಿ ದೇಶದ್ರೋಹ ಚಟುವಟಿಕೆ, ಧರ್ಮ ಹಾಗೂ ಪ್ರಾದೇಶಿಕತೆ ವಿಷಯಾಧಾರಿತ ದ್ವೇಷ ಪಸರಿಸುತ್ತಿರುವ ಆರೋಪದಡಿ ಅಮೆರಿಕ, ಬ್ರಿಟನ್ ಹಾಗೂ ಕೆನಡಾದಲ್ಲಿ ನೆಲೆಸಿರುವ 16 ಜನರ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ (ಯುಎಪಿಎ) ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆರೋಪಪಟ್ಟಿ ದಾಖಲಿಸಿದೆ.

ಅಮೆರಿಕದಲ್ಲಿರುವ ಏಳು ಜನ, ಬ್ರಿಟನ್‌ನ ನಾಲ್ವರು ಹಾಗೂ ಕೆನಡಾದಲ್ಲಿರುವ ಮೂವರು ಖಲಿಸ್ತಾನ್‌ ರಚನೆಗಾಗಿ ‘ರೆಫರೆಂಡಮ್‌ 2020’ ಹೆಸರಿನಲ್ಲಿ ಪ್ರತ್ಯೇಕತಾವಾದಿ ಅಭಿಯಾನ ಏರ್ಪಡಿಸುವ ಸಂಘಟಿತ ಸಂಚಿನಲ್ಲಿ ಭಾಗಿಯಾಗಿದ್ದರು ಎಂದು ಎನ್‌ಐಎ ಆರೋಪಿಸಿದೆ.

ಆರೋಪಿಗಳಲ್ಲಿ, ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಉಗ್ರರು ಎಂದು ಗೃಹ ಸಚಿವಾಲಯವು ಘೋಷಿಸಿರುವ ಗುರ್ಪತ್ವಂತ್‌ ಸಿಂಗ್‌ ಪನ್ನುನ್‌, ಹರ್ದೀಪ್‌ ಸಿಂಗ್‌ ನಿಜ್ಜರ್‌ ಹಾಗೂ ಪರಮ್‌ಜೀತ್‌ ಸಿಂಗ್‌ ಹೆಸರಿದೆ. ಇವರೆಲ್ಲರೂ ಸಿಖ್‌ ಫಾರ್‌ ಜಸ್ಟಿಸ್‌(ಎಸ್‌ಎಫ್‌ಜೆ) ಸಂಘಟನೆ ಸದಸ್ಯರಾಗಿದ್ದು, ಈ ಸಂಘಟನೆಯು ಪಾಕಿಸ್ತಾನ ಸೇರಿದಂತೆ ವಿದೇಶಗಳಲ್ಲಿದ್ದುಕೊಂಡು ಕಾರ್ಯನಿರ್ವಹಿಸುತ್ತಿದೆ. ಈ ಸಂಘಟನೆಯನ್ನು ಯಎಪಿಎ ಕಾಯ್ದೆಯಡಿ ಉಗ್ರ ಸಂಘಟನೆ ಎಂದು 2019 ಜುಲೈನಲ್ಲಿ ಭಾರತ ಘೋಷಿಸಿದೆ. 

‘ಅಭಿಯಾನದಡಿ ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್‌ಆ್ಯಪ್‌, ಯೂಟ್ಯೂಬ್‌ನಲ್ಲಿ ಹಲವು ಖಾತೆಗಳನ್ನು ತೆಗೆದು, ಇದರ ಮುಖಾಂತರ ದೇಶದ್ರೋಹ ಚಟುವಟಿಕೆ ನಡೆಸಲಾಗುತ್ತಿದೆ. ಜೊತೆಗೆ ಪ್ರಾದೇಶಿಕತೆ ಹಾಗೂ ಧರ್ಮದ ಹೆಸರಿನಲ್ಲಿ ದ್ವೇಷವನ್ನು ಬಿತ್ತುವ ಕೆಲಸವೂ ನಡೆದಿದೆ. ಶಾಂತಿ ಮತ್ತು ಸಾರ್ವಭೌಮತೆಗೆ ಧಕ್ಕೆ ತರಲು ಈ ಖಾತೆಗಳ ಮುಖಾಂತರ ಭಾರತೀಯ ಸೇನೆಯಲ್ಲಿರುವ ಸಿಖ್‌ ಸಿಬ್ಬಂದಿಯನ್ನು ಹಾಗೂ ಕಾಶ್ಮೀರದ ಯುವಜನರನ್ನು ತೀವ್ರವಾದಿಗಳನ್ನಾಗಿಸಲು ಪ್ರೇರೇಪಿಸುತ್ತಿದ್ದವು. ಉಗ್ರ ಚಟುವಟಿಕೆಗಳಿಗೆ ಈ ಮೂಲಕವೇ ಹಣ ಸಂಗ್ರಹಿಸಲಾಗುತ್ತಿದೆ’ ಎಂದು ಎನ್‌ಐಎ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು