ಗುರುವಾರ , ಅಕ್ಟೋಬರ್ 22, 2020
22 °C

ಭೀಮಾ ಕೋರೆಗಾಂವ್‌ ಪ್ರಕರಣ: ಎಂಟು ಜನರ ವಿರುದ್ಧ ಆರೋಪಪಟ್ಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಭೀಮಾ ಕೋರೆಗಾಂವ್‌ನಲ್ಲಿ ಹಿಂಸಾಚಾರಕ್ಕೆ ಪಿತೂರಿ ನಡೆಸಿದ್ದರು ಎಂಬ ಆರೋಪದಡಿ ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಖಾ, ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹನಿ ಬಾಬು, 82 ವರ್ಷದ ಫಾದರ್‌ ಸ್ಟ್ಯಾನ್‌ ಸ್ವಾಮಿ ಸೇರಿದಂತೆ ಎಂಟು ಜನರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಶುಕ್ರವಾರ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ.

ಆರೋಪಪಟ್ಟಿಯಲ್ಲಿರುವವರು ಮಾವೊವಾದಿ ಸಂಘಟನೆ ಅಥವಾ ಕಬೀರ್ ಕಲಾ ಮಂಚ್‌ ಸಂಘಟನೆಯ ಸದಸ್ಯರಾಗಿದ್ದರು ಅಥವಾ ಅದರ ಜತೆ ಸಂಪರ್ಕ ಹೊಂದಿದ್ದರು ಎಂದು ಆರೋಪಿಸಲಾಗಿದೆ.

ತನಿಖೆ ಸಂದರ್ಭದಲ್ಲಿ ಈ ಎಂಟು ಆರೋಪಿಗಳನ್ನು ಎನ್‌ಐಎ ಬಂಧಿಸಿತ್ತು. ಈಗ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಎನ್‌ಐಎ ವಕ್ತಾರೆ, ಡಿಐಜಿ ಸೋನಿಯಾ ನಾರಂಗ್‌ ತಿಳಿಸಿದರು. ಪ್ರಕರಣದಲ್ಲಿ ಗೋವಾ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ಪ್ರಾಧ್ಯಾಪಕ ಆನಂದ್‌ ತೇಲ್‌ತುಂಬ್ಡೆ ಹಾಗೂ ಅವರ ಸಹೋದರ ಮಿಲಿಂದ್‌ ತೇಲ್‌ತುಂಬ್ಡೆ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದೆ. ಮಿಲಿಂದ್‌ ಅವರನ್ನು ತಲೆಮರೆಸಿಕೊಂಡಿರು ಮಾವೊವಾದಿ ಮತ್ತು ಪೊಲೀಸರಿಗೆ ಬೇಕಾದ ಆರೋಪಿ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ ಭೀಮಾ ಕೋರೆಗಾಂವ್‌ ಶೌರ್ಯ ದಿನ ಪ್ರೇರಣಾ ಅಭಿಯಾನ ಸಮೂಹದ ಕಾರ್ಯಕರ್ತರಾದ ಜ್ಯೋತಿ ಜಗ್ತಾಪ್‌, ಸಾಗರ್‌ ಗೋರ್ಖೆ ಮತ್ತು ರಮೇಶ್‌ ಗಾಯ್ಚೋರ್‌ ಅವರ ಹೆಸರೂ ಆರೋಪಪಟ್ಟಿಯಲ್ಲಿದೆ.

ಬಂಧನಕ್ಕೆ ಒಳಗಾಗಿರುವ ಮಾನವ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರಧ್ವಾಜ್‌ ಅವರ ಹೆಸರು ಆರೋಪಟ್ಟಿಯಲ್ಲಿ ಇಲ್ಲ. 

2018ರ ಜ.1ರಂದು ಕೋರೆಗಾಂವ್‌ ಯುದ್ಧದ 200ನೇ ವರ್ಷಾಚರಣೆ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಘಟನೆಯಲ್ಲಿ ನೂರಾರು ಜನರು ಗಾಯಗೊಂಡಿದ್ದರು. 2017 ಡಿ.31ರಂದು ಎಲ್ಗಾರ್‌ ಪರಿಷತ್‌ನ ಸದಸ್ಯರು ಮಾಡಿದ್ದ ಭಾಷಣವೇ ಹಿಂಸಾಚಾರಕ್ಕೆ ಕಾರಣ ಎಂದು ಪುಣೆ ಪೊಲೀಸರು ಆರೋಪಿಸಿದ್ದರು. ಈ ಪ್ರಕರಣದ ತನಿಖೆಯನ್ನು 2020ರ ಜ.24ರಂದು ಎನ್‌ಐಎ ಕೈಗೆತ್ತಿಕೊಂಡಿತ್ತು.    

ಸ್ಟ್ಯಾನ್‌‌ ಸ್ವಾಮಿ ಬಂಧನ

ಭೀಮಾ ಕೋರೆಗಾಂವ್‌ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಹೋರಾಟಗಾರ ಫಾದರ್‌ ಸ್ಟ್ಯಾನ್‌ ಸ್ವಾಮಿ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ರಾಂಚಿಯಲ್ಲಿ ಬಂಧಿಸಲಾಗಿದ್ದು, ಅವರನ್ನು ಮುಂಬೈಗೆ ಕರೆದೊಯ್ಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ಬಾರಿ ಸ್ವಾಮಿ ಅವರನ್ನು ಪ್ರಶ್ನಿಸಿರುವ ಪುಣೆ ಪೊಲೀಸ್ ಮತ್ತು ಎನ್‌ಐಎ ತಂಡದರು, ಗುರುವಾರ ಅವರನ್ನು ರಾಂಚಿ ಮನೆಯಲ್ಲಿ ಬಂಧಿಸಿದ್ದಾರೆ. ನಿಷೇಧಿತ ಸಿಪಿಐ (ಮಾವೊವಾದಿ) ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆಂಬ ಆರೋಪದಡಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾನೂನು ಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆಯಡಿ(ಯುಎಪಿಎ) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅ.23ರವರೆಗೆ ನ್ಯಾಯಾಂಗ ಬಂಧನ: ಸ್ವಾಮಿ ಅವರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ಅ.23ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಲೆಮರೆಸಿಕೊಂಡಿರುವ ಮಿಲಿಂದ್‌ ತೇಲ್‌ತುಂಬ್ಡೆ ಹೊರತುಪಡಿಸಿ ಆರೋಪಪಟ್ಟಿಯಲ್ಲಿ ಇರುವ ಉಳಿದೆಲ್ಲರೂ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. 

‘ಸ್ವಾಮಿ ಅವರಿಗೆ ವಯಸ್ಸಾಗಿದ್ದು, ಎನ್‌ಐಎ ಅವರನ್ನು ಕಸ್ಟಡಿಗೆ ನೀಡಬೇಕು ಎಂದು ಕೇಳಿಲ್ಲ. ಶೀಘ್ರದಲ್ಲೇ ಜಾಮೀನು ಅರ್ಜಿ ಸಲ್ಲಿಸಲಾಗುವುದು’ ಎಂದು ಸ್ವಾಮಿ ಪರ ವಕೀಲ ಶರೀಫ್‌ ಶೇಖ್‌ ತಿಳಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು