ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಂಗಳೂರಿನಲ್ಲಿ ಎನ್ಐಎ ಶಾಶ್ವತ ಕಚೇರಿಗೆ ಕೇಂದ್ರದ ಒಪ್ಪಿಗೆ’

ಗುಲಾಬಿ ಈರುಳ್ಳಿ ರಫ್ತು ರದ್ದತಿಗೆ ಮನವಿ: ತೇಜಸ್ವಿ ಸೂರ್ಯ
Last Updated 27 ಸೆಪ್ಟೆಂಬರ್ 2020, 20:58 IST
ಅಕ್ಷರ ಗಾತ್ರ

ನವದೆಹಲಿ: ದಿನೇದಿನೇ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಿಗ್ರಹದ ನಿಟ್ಟಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಶಾಶ್ವತ ಕಚೇರಿಯನ್ನು ಬೆಂಗಳೂರಿನಲ್ಲಿ ಆರಂಭಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ನೂತನ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬೆಂಗಳೂರಿನ ಡಿ.ಜೆ. ಹಳ್ಳಿ ಹಾಗೂ ಕೆ.ಜೆ. ಹಳ್ಳಿಗಳಲ್ಲಿ ಇತ್ತೀಚೆಗೆ ಭಾರಿ ಗಲಭೆ ನಡದಿದ್ದು, ಈ ಹಿಂದೆಯೂ ರಾಜ್ಯದಲ್ಲಿ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಸೂಕ್ತ ತನಿಖೆಗಾಗಿ ಈ ಕಚೇರಿ ಆರಂಭಿಸುವಂತೆ ಸಲ್ಲಿಸಿದ ಮನವಿಗೆ ಕೇಂದ್ರ ಸ್ಪಂದಿಸಿದೆ ಎಂದರು.

ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಶುಕ್ರವಾರ ಭೇಟಿ ಮಾಡಿ ಈ ಕುರಿತು ಚರ್ಚಿಸಿ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಸೂಕ್ತವಾಗಿ ಸ್ಪಂದಿಸಿರುವ ಸಚಿವರು, ಎನ್ಐಎ ಕಚೇರಿ ಆರಂಭಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಅವರು ಹೇಳಿದರು.

ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಉಗ್ರರನ್ನು, ಉಗ್ರ ಸಂಘಟನೆಗಳನ್ನು ಮಟ್ಟ ಹಾಕಲು ಎನ್ಐಎ ಶಾಶ್ವತ ಕಚೇರಿಯ ಅಗತ್ಯ ಇದೆ ಎಂಬುದನ್ನು ಸಚಿವರಿಗೆ ಮನವರಿಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಬೆಂಗಳೂರು ಗ್ರಾಮಾಂತರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ರೈತರು ಬೆಳೆಯುವ ಗುಲಾಬಿ ಈರುಳ್ಳಿ (ರೋಸ್‌ ಆನಿಯನ್) ರಫ್ತನ್ನು ರದ್ದುಗೊಳಿಸದಂತೆ ಕೋರಿ ಕೇಂದ್ರದ ವಾಣಿಜ್ಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಈ ಉತ್ಪನ್ನಕ್ಕೆ ಪ್ರತ್ಯೇಕ ಕೋಡ್ ನೀಡುವ ಮೂಲಕ ಈರುಳ್ಳಿ ರಫ್ತು ರದ್ದತಿ ಆದೇಶದ ವೇಳೆ ಪ್ರತ್ಯೇಕಗೊಳಿಸುವಂತೆಯೂ ಸಲಹೆ ನೀಡಲಾಗಿದೆ ಎಂದು ತೇಜಸ್ವಿ ಹೇಳಿದರು.

ಅದೇ ರೀತಿ ವಸತಿ ಯೋಜನೆ ಅಡಿ ರಾಜ್ಯದ ಬಡ ಜನತೆಗೆ ಮತ್ತಷ್ಟು ಮನೆಗಳನ್ನು ಮಂಜೂರು ಮಾಡುವಂತೆ ಹಾಗೂ ಬಾಕಿ ಉಳಿದಿರುವ ಅನುದಾನ ಬಿಡುಗಡೆ ಮಾಡುವಂತೆ ವಸತಿ ಸಚಿವ ವಿ.ಸೋಮಣ್ಣ ಜೊತೆ ಇತ್ತೀಚೆಗೆ ತೆರಳಿ ಸಂಬಂಧಿಸಿದ ಸಚಿವರನ್ನು ಕೋರಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪಿಸುವಂತೆಯೂ ಮನವಿ ಸಲ್ಲಿಸಲಾಗಿದ್ದು ಈಡೇರಿಸುವ ಭರವಸೆ ದೊರೆತಿದೆ ಎಂದು ಅವರು ತಿಳಸಿದರು.

ಯುವ ಮೋರ್ಚಾ ಅಧ್ಯಕ್ಷ ಸ್ಥಾನದ ನಿರೀಕ್ಷೆ ಇರಲಿಲ್ಲ. ಪ್ರಧಾನಿ ಮೋದಿ ಹಾಗೂ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಯುವಕರಿಗೆ ಆದ್ಯತೆ ನೀಡಿರುವುದು ಅಭಿನಂದನೀಯ ಎಂದು ಅವರು ಹೇಳಿದರು.

ಪಶ್ಚಿಮ ಬಂಗಾಳ ಬಿಜೆಪಿಗೆ ಮಹತ್ವದ ರಾಜ್ಯವಾಗಿದೆ. ಅಲ್ಲಿ ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲದಂತಾಗಿದ್ದು, ಸಂಸದರೂ ರೌಡಿಗಳಂತೆ ವರ್ತಿಸುತ್ತಿದ್ದಾರೆ ಎಂದು ದೂರಿದ ಅವರು ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ಬಂಗಾಳದಲ್ಲಿ ಪಕ್ಷ ಬಲಪಡಿಸಿ ಅಧಿಕಾರಕ್ಕೆ ತರಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT