ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈವಾಹಿಕ ತಾಲತಾಣಗಳ ಮೂಲಕ ಸುಮಾರು 300 ಮಹಿಳೆಯರಿಗೆ ವಂಚನೆ: ನೈಜೀರಿಯಾ ಪ್ರಜೆ ಬಂಧನ

Last Updated 27 ಮೇ 2022, 16:17 IST
ಅಕ್ಷರ ಗಾತ್ರ

ನೋಯ್ಡಾ: ಭಾರತದ ಸುಮಾರು 300 ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ನೈಜೀರಿಯಾ ಪ್ರಜೆಯೊಬ್ಬನನ್ನು ಉತ್ತರ ಪ್ರದೇಶದ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ.

ಸೋಶಿಯಲ್ ಮೀಡಿಯಾ ಮತ್ತು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳ ಮೂಲಕ ಮಹಿಳೆಯರ ಜೊತೆ ಸ್ನೇಹ ಬೆಳೆಸಿದ್ದ ಈತ, ತನ್ನನ್ನು ಕೆನಡಾದಲ್ಲಿ ನೆಲೆಯೂರಿರುವ ಅನಿವಾಸಿ ಭಾರತೀಯನೆಂದು ಪರಿಚಯ ಮಾಡಿಕೊಂಡಿದ್ದ. ವಧುವಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಮಹಿಳೆಯರನ್ನು ನಂಬಿಸಿದ್ದ. ಬಳಿಕ, ನೆಪ ಹೇಳಿ ಅವರಿಂದ ಹಣ ಪಡೆದು ವಂಚಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೈಜೀರಿಯಾದ ಲಾಗೊಸ್ ಮೂಲದ ಗರುಬಾ ಗಲುಮ್ಜೆ(38) ಬಂಧಿತ ಆರೋಪಿಯಾಗಿದ್ದು, ದಕ್ಷಿಣ ದೆಹಲಿಯ ಕಿಶನ್ ಘರ್ ಪ್ರದೇಶದ ಮನೆಯಲ್ಲಿ ಆತನನ್ನು ನೋಯ್ಡಾದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

‘ಉತ್ತರ ಪ್ರದೇಶದ ಮೀರತ್‌ನ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ನೈಜೀರಿಯಾ ಪ್ರಜೆಯನ್ನು ಬಂಧಿಸಲಾಗಿದೆ. ವರನ ಹುಡುಕಾಟದಲ್ಲಿದ್ದ ಮಹಿಳೆ ಜೀವನ್‌ಸಾಥಿ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದರು. ಅಲ್ಲಿ ಆಕೆಯನ್ನು ಸಂಪರ್ಕಿಸಿದ್ದ ಗರುಬಾ, ತಾನು ಇಂಡೋ–ಕೆನಡಿಯನ್ ಎನ್‌ಆರ್‌ಐ ಸಂಜಯ್ ಸಿಂಗ್ ಎಂದು ಪರಿಚಯಿಸಿಕೊಂಡಿದ್ದ’ ಎಂದು ನೋಯ್ದಾ ಸೈಬರ್ ಕ್ರೈಂ ಘಟಕದ ಇನ್‌ಸ್ಪೆಕ್ಟರ್ ರೀಟಾ ಯಾದವ್ ಹೇಳಿದ್ದಾರೆ.

'ಮಹಿಳೆಯ ಸ್ನೇಹ ಬೆಳೆಸಿದ್ದ ವ್ಯಕ್ತಿ, ಆಕೆಗೆ ವಿಶ್ವಾಸ ಬರುವಂತೆ ಮಾಡಿ ವಿವಿಧ ಬ್ಯಾಂಕ್ ಖಾತೆಗಳಿಗೆ ₹ 60 ಲಕ್ಷ ವರ್ಗಾವಣೆ ಮಾಡಿಸಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ವಂಚನೆ ಕುರಿತಂತೆ ಪೊಲೀಸರು ಪರಿಶೀಲನೆ ನಡೆಸಿದಾಗ ಆರೋಪಿ ದೆಹಲಿಯಲ್ಲೇ ಇರುವುದು ಗಮನಕ್ಕೆ ಬಂದಿದೆ. ಬಳಿಕ, ಆತನನ್ನು ಬಂಧಿಸಲಾಗಿದೆ.

‘ವಿಚಾರಣೆ ವೇಳೆ ಆತ ಇದೇ ರೀತಿ ಹಲವರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಸುಮಾರು 300 ಮಹಿಳೆಯರಿಗೆ ಹಲವು ಜಾಲತಾಣಗಳ ಮೂಲಕ ನಂಬಿಸಿ, ಕೋಟ್ಯಂತರ ರೂಪಾಯಿ ಪಡೆದು ವಂಚಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ವೈವಾಹಿಕ ಜಾಲತಾಣಗಳು ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಸ್ಪುರದ್ರೂಪಿ ಯುವಕರ ಚಿತ್ರಗಳನ್ನು ಹಾಕಿ ಮಹಿಳೆಯರ ದಾರಿ ತಪ್ಪಿಸಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

ಮಾನವರ ಕೂದಲು ಮತ್ತು ಒಳ ಉಡುಪು ಬ್ಯುಸಿನೆಸ್ ಸಂಬಂಧಿತ 6 ತಿಂಗಳ ವೀಸಾದಡಿ 2019ರ ಫೆಬ್ರುವರಿಯಲ್ಲಿ ಗರುಬಾ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದ. ಈ ವರ್ಷದ ಮಾರ್ಚ್ 16ರಂದು ಮತ್ತೆ ಭಾರತಕ್ಕೆ ಮೆಡಿಕಲ್ ವೀಸಾ ಪಡೆದು ಆಗಮಿಸಿದ್ದ. ವೀಸಾ ಅವಧಿ ಮೇ 22ಕ್ಕೆ ಮುಗಿದರೂ ಪದೇ ಪದೇ ಜಾಗ ಬದಲಿಸುತ್ತಾ ಇಲ್ಲಿಯೇ ಉಳಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಗರುಬಾ ಬಳಿ ಇದ್ದ ಪಾಸ್‌ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಆದರೆ, ಅದರ ಮೇಲೆ ಭಾರತೀಯ ಅಧಿಕಾರಿಗಳು ಹಾಕಿದ ಯಾವುದೇ ಅಧಿಕೃತ ಮುದ್ರೆ ಇಲ್ಲ. ವೀಸಾ ಸಂಬಂಧಿತ ದಾಖಲೆಗಳು ಆತನ ಬಳಿ ಇಲ್ಲ ಎಂದು ಪೊಲೀಸರು ತಿಳಿಸಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT