ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿರ್ವಹಣೆ: ಒಕ್ಕೂಟ ಪ್ರಜ್ಞೆ ಮೆರೆದ ರಾಜ್ಯಗಳು- ಪ್ರಧಾನಿ ಮೋದಿ ಶ್ಲಾಘನೆ

ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ಮೋದಿ ಶ್ಲಾಘನೆ
Last Updated 7 ಆಗಸ್ಟ್ 2022, 22:00 IST
ಅಕ್ಷರ ಗಾತ್ರ

ನವದೆಹಲಿ: ‘ಕೋವಿಡ್‌ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಪ್ರತಿಯೊಂದು ರಾಜ್ಯವೂ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಇದರಿಂದಾಗಿ ಅಭಿವೃದ್ಧಿಶೀಲ ದೇಶಗಳು ಭಾರತವನ್ನು ಒಂದು ಮಾದರಿಯಾಗಿ ಮತ್ತು ಜಾಗತಿಕ ನಾಯಕನನ್ನಾಗಿ ನೋಡಲು ಆರಂಭಿಸಿದವು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳನ್ನು ಶ್ಲಾಘಿಸಿದ್ದಾರೆ. ಎಲ್ಲ ರಾಜ್ಯಗಳೂ ಸಹಕಾರಿ ಒಕ್ಕೂಟ ಪ್ರಜ್ಞೆಯನ್ನು ಮೆರೆದಿವೆ ಎಂದೂ ಹೇಳಿದ್ದಾರೆ.

ನೀತಿ ಆಯೋಗದ ಆಡಳಿತ ಮಂಡಳಿಯ ಏಳನೇ ಸಭೆಯನ್ನು ಉದ್ದೇಶಿಸಿ ಅವರು ಭಾನುವಾರ ಮಾತನಾಡಿದರು.

ಸ್ಥಳೀಯ ವಸ್ತುಗಳನ್ನೇ ಸಾಧ್ಯವಾದಲ್ಲೆಲ್ಲಾ ಬಳಸುವಂತೆ ಜನರಿಗೆ ಉತ್ತೇಜನ ನೀಡಬೇಕು ಎಂದರು.

ಕೃಷಿ, ಹೈನುಗಾರಿಕೆ ಮತ್ತು ಆಹಾರ ಸಂಸ್ಕರಣೆ ಕ್ಷೇತ್ರಗಳು ಆಧುನೀಕರಣಗೊಳ್ಳಬೇಕು ಎಂದು ಪ್ರಧಾನಿ ಮೋದಿ ಅವರು ಬಲವಾಗಿ ಪ್ರತಿಪಾದಿಸಿದರು. ಇದು ಭಾರತವು ಸ್ವಾವಲಂಬಿಯಾಗಲು ನೆರವಾಗುವುದಲ್ಲದೆ, ಕೃಷಿ ಕ್ಷೇತ್ರದಲ್ಲಿ ದೇಶವು ಜಾಗತಿಕ ನಾಯಕ ಎನಿಸಿಕೊಳ್ಳಬಹುದು ಎಂದರು.

ಜಿಎಸ್‌ಟಿ ಸಂಗ್ರಹವನ್ನು ಇನ್ನಷ್ಟು ಹೆಚ್ಚಿಸಲು ಎಲ್ಲರೂ ಜೊತೆಗೂಡಿ ಕೆಲಸ ಮಾಡಬೇಕು ಎಂದು ಅವರು ಕರೆ ಕೊಟ್ಟರು. ಜಿಎಸ್‌ಟಿ ಸಂಗ್ರಹವು ಈಗ ಉತ್ತಮಗೊಂಡಿದೆ. ಆದರೆ, ಇನ್ನೂ ಹೆಚ್ಚು ಸಂಗ್ರಹಿಸಲು ಅವಕಾಶ ಇದೆ. ನಮ್ಮ ಅರ್ಥವ್ಯವಸ್ಥೆಯನ್ನು ಬಲಪಡಿಸಲು ಮತ್ತು ಐದು ಲಕ್ಷ ಕೋಟಿ ಡಾಲರ್‌ ವಹಿವಾಟಿಗೆ ಏರಿಸಲು ಇದು ಅಗತ್ಯವಾಗಿದೆ ಎಂದರು.

ಈ ಸಭೆಯಲ್ಲಿ ಚರ್ಚಿಸಿದ ವಿಚಾರಗಳು ದೇಶದ ಮುಂದಿನ 25 ವರ್ಷಗಳ ಆದ್ಯತೆಗಳನ್ನು ನಿರ್ಧರಿಸಲಿವೆ. ಇಂದು ಬಿತ್ತುವ ಬೀಜವು 2047ರ ಹೊತ್ತಿಗೆ ಫಲ ಕೊಡಲಿದೆ ಎಂದರು.

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸಭೆಯಲ್ಲಿ ಭಾಗವಹಿಸಿರಲಿಲ್ಲ. 23 ರಾಜ್ಯಗಳ ಮುಖ್ಯಮಂತ್ರಿಗಳು, ಮೂವರು ಲೆಫ್ಟಿನೆಂಟ್‌ ಗವರ್ನರ್‌ಗಳು ಮತ್ತು ಇಬ್ಬರು ಆಡಳಿತಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಧಾನ್ಯ, ಎಣ್ಣೆಬೀಜಗಳು ಮತ್ತು ಇತರ ಕೃಷಿ ಉತ್ಪನ್ನಗಳಲ್ಲಿ ಸ್ವಾವಲಂಬನೆ ಸಾಧನೆ, ಬೆಳೆ ವೈವಿಧ್ಯ, ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿ ಮತ್ತು ನಗರಾಡಳಿತ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಹೊಸ ಶಿಕ್ಷಣ ನೀತಿಯ ಬಗ್ಗೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT