ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಸೇನೆಗೆ ಸೇರಿದ ಪುಲ್ವಾಮ ಹುತಾತ್ಮನ ಪತ್ನಿ

ಬಹುರಾಷ್ಟ್ರೀಯ ಕಂಪನಿಗೆ ರಾಜೀನಾಮೆ
Last Updated 30 ಮೇ 2021, 2:00 IST
ಅಕ್ಷರ ಗಾತ್ರ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ವಿರುದ್ಧದ ಸೇನಾ ಕಾರ್ಯಾಚರಣೆಯಲ್ಲಿ ಹುತಾತ್ಮರಾದ, ಮರಣೋತ್ತರ ಶೌರ್ಯ ಚಕ್ರ ಪುರಸ್ಕೃತ ಮೇಜರ್‌ ವಿಭೂತಿ ಶಂಕರ್‌ ಧೌಂಡಿಯಲ್‌ ಅವರ ಪತ್ನಿ 29 ವರ್ಷದ ನಿತಿಕಾ ಕೌಲ್‌ ಸೇನೆಗೆ ಸೇರಿದ್ದಾರೆ.

ಪತಿಯ ಶೌರ್ಯದ ಹಾದಿಯಲ್ಲೇ ನಡೆಯಲು ನಿರ್ಧರಿಸಿದ ಕೌಲ್‌ ಒಂದು ವರ್ಷ ತಮಿಳುನಾಡಿನಲ್ಲಿ ಕಠಿಣ ತರಬೇತಿ ಮುಗಿಸಿ ಶನಿವಾರ ಸೇನೆಯ ಸಮವಸ್ತ್ರ ಧರಿಸಿದರು. ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇನೆಯ ಉತ್ತರ ಕಮಾಂಡ್‌ ವಿಭಾಗದ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ವೈ ಕೆ ಜೋಶಿ ನಿತಿಕಾರ ಹೆಗಲಿನ ಪಟ್ಟಿಗೆ ಸ್ಟಾರ್‌ಗಳನ್ನು ಜೋಡಿಸಿದರು.

ನಿತಿಕಾ ಕೌಲ್‌ ಸೇನೆಗೆ ಸೇರ್ಪಡೆಗೊಳ್ಳುತ್ತಿರುವ ವಿಡಿಯೊವನ್ನು ರಕ್ಷಣಾ ಸಚಿವಾಲಯದ ಪ್ರೊ ಉಧಮ್‌ಪುರ್‌ ಟ್ವೀಟ್‌ ಮಾಡಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

"2019ರಲ್ಲಿ ಪುಲ್ವಾಮಾದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೇಜರ್‌ ವಿಭೂತಿ ಶಂಕರ್‌ ಸರ್ವೋಚ್ಚ ತ್ಯಾಗ ಮಾಡಿದ್ದರು. ಇಂದು ಅವರ ಪತ್ನಿ ನಿತಿಕಾ ಕೌಲ್‌ ಸೇನೆಗೆ ಸೇರ್ಪಡೆಗೊಳ್ಳುವ ಮೂಲಕ ಪತಿಯ ಬಲಿದಾನಕ್ಕೆ ಅತ್ಯುತ್ತಮ ಗೌರವ ನೀಡಿದ್ದಾರೆ'' ಎಂದು ಶ್ಲಾಘಿಸಿ ಪ್ರೊ ಉಧಮ್‌ಪುರ್‌ ವಿಡಿಯೊ ಪೋಸ್ಟ್‌ ಮಾಡಿದೆ.

ಮದುವೆಯಾದ 9 ತಿಂಗಳಿಗೆ ಕಾಶ್ಮೀರ ಮೂಲದ ಕೌಲ್‌ ಪತಿ ವಿಭೂತಿ ಶಂಕರ್‌ ಅವರನ್ನು ಕಳೆದುಕೊಂಡಿದ್ದರು. ಫೆಬ್ರವರಿ 18, 2019ರಂದು ನಡೆದ ಕಾಳಗದಲ್ಲಿ ವಿಭೂತಿ ಶಂಕರ್‌ ಸೇರಿದಂತೆ ಐವರು ಭದ್ರತಾ ಪಡೆ ಸಿಬ್ಬಂದಿ ಪ್ರಾಣಕಳೆದುಕೊಂಡರು. ಪುಲ್ವಾಮಾ ಆತ್ಮಾಹುತಿ ದಾಳಿಯ ಹಿಂದಿನ ಶಂಕಿತ ಇಬ್ಬರು ಕಮಾಂಡರ್‌ ಸೇರಿದಂತೆ ಮೂವರು ಉಗ್ರರನ್ನು ಸೇನೆ ಹೊಡೆದುರುಳಿಸಿತ್ತು.

ಪತಿ ವಿಭೂತಿ ಶಂಕರ್‌ ಅವರ ತ್ಯಾಗ, ಬಲಿದಾನದಿಂದ ಪ್ರೇರಣೆಗೊಂಡ ನಿತಿಕಾ ಕೌಲ್‌ ಶಾರ್ಟ್‌ ಸರ್ವಿಸ್‌ ಕಮಿಷನ್‌ (ಎಸ್‌ಎಸ್‌ಸಿ) ಪರೀಕ್ಷೆ ಬರೆದಿದ್ದರು. ಸೇನೆಗೆ ಸೇರಲು ದಿಲ್ಲಿಯ ಬಹುರಾಷ್ಟ್ರೀಯ ಕಂಪನಿಗೆ ರಾಜೀನಾಮೆ ನೀಡಿದ್ದರು. ಕಳೆದ ವರ್ಷ ನಡೆದ ಸಂದರ್ಶನದಲ್ಲಿ ತೇರ್ಗಡೆಗೊಂಡು ಒಂದು ವರ್ಷ ಕಠಿಣ ತರಬೇತಿಯನ್ನು ಪೂರೈಸಿದ ಬಳಿಕ ಶನಿವಾರ ಅಧಿಕೃತವಾಗಿ ಸೇನೆಗೆ ಸೇರ್ಪಡೆಗೊಂಡರು.

ಮೇಜರ್‌ ವಿಭೂತಿ ಶಂಕರ್‌ ಅವರ ತವರು ಡೆಹ್ರಾಡೂನ್‌ನಲ್ಲಿ ನಡೆದ ಅಂತಿಮ ವಿಧಿವಿಧಾನದ ಸಂದರ್ಭ ನಿಕಿತಾ ಕೌರ್‌ ಕಣ್ಣೀರಿಡುತ್ತ ಪತಿಗೆ ಫ್ಲೈಯಿಂಗ್‌ ಕಿಸ್‌ ನೀಡಿ, ಪಾರ್ಥೀವ ಶರೀರಕ್ಕೆ ಸಲ್ಯೂಟ್‌ ಹೊಡೆದ ದೃಶ್ಯ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT