ಶನಿವಾರ, ಅಕ್ಟೋಬರ್ 1, 2022
20 °C
ಬಿಹಾರದಲ್ಲಿ ಸಂಚಲನ l ಮಹಾಮೈತ್ರಿ ಸೇರಿದ ಜೆಡಿಯು l

ಮತ್ತೆ ಎನ್‌ಡಿಎ ತೊರೆದ ನಿತೀಶ್‌: ಸಿ.ಎಂ ಆಗಿ ಇಂದು ಪ್ರಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಟ್ನಾ: ಬಿಹಾರ ರಾಜಕಾರಣವು ಚುರುಕಿನ ರಾಜಕೀಯ ಬೆಳವಣಿಗೆಗಳಿಗೆ ಮಂಗಳವಾರ ಸಾಕ್ಷಿಯಾಯಿತು. ಬಿಜೆಪಿಯ ಸಖ್ಯ ತೊರೆದ ಜೆಡಿಯು ನಾಯಕ ನಿತೀಶ್‌ ಕುಮಾರ್‌ ಅವರು ರಾಜ್ಯಪಾಲ ಫಗು ಚೌಹಾಣ್‌ ಅವರನ್ನು ಎರಡೆರಡು ಬಾರಿ ಭೇಟಿಯಾದರು. ಮೊದಲ ಬಾರಿ ಭೇಟಿಯಾಗಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು. ಬಳಿಕ, ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹಕ್ಕು ಮಂಡಿಸಿದರು. ಅದರಂತೆ ಅವರು ಬುಧವಾರ ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ
ಸ್ವೀಕರಿಸಲಿದ್ದಾರೆ.

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಪಡೆದುಕೊಳ್ಳಲಿದ್ದಾರೆ. ನಿತೀಶ್‌ ಅವರು ತಮಗೆ 164 ಶಾಸಕರ ಬೆಂಬಲ ಇದೆ ಎಂದಿದ್ದಾರೆ. ಈ ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ವಿಧಾನಸಭೆಯ ಸದಸ್ಯ ಬಲ 242. ಸರಳ ಬಹುಮತಕ್ಕೆ 123 ಶಾಸಕರ ಬೆಂಬಲ ಬೇಕಿದೆ. 

ನಿತೀಶ್‌ ಅವರು 2017ರವರೆಗೆ ಮಹಾಮೈತ್ರಿಕೂಟದ ಭಾಗವಾಗಿಯೇ ಇದ್ದರು. ಆದರೆ, 2017ರಲ್ಲಿ ಮಹಾಮೈತ್ರಿಕೂಟ ತೊರೆದು ಬಿಜೆಪಿ ನೇತೃತ್ವದ ಎನ್‌ಡಿಎ ಸೇರಿಕೊಂಡರು. ಮಹಾಮೈತ್ರಿಕೂಟಕ್ಕೆ ಸೇರುವ ಮೊದಲೂ ಅವರು ಎನ್‌ಡಿಎಯಲ್ಲಿಯೇ ಇದ್ದರು. ಈಗ, 9 ವರ್ಷಗಳಲ್ಲಿ ಎರಡನೇ ಬಾರಿಗೆ ಬಿಜೆಪಿ ಜತೆಗಿನ ನಂಟನ್ನು ಅವರು ಕಡಿದುಕೊಂಡಿದ್ದಾರೆ. ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಯ ಅಭ್ಯರ್ಥಿ ಎಂದು ಬಿಜೆಪಿ 2013ರಲ್ಲಿ ನಿರ್ಧರಿಸಿದಾಗ ನಿತೀಶ್‌ ಅವರು ಎನ್‌ಡಿಎ ತೊರೆದಿದ್ದರು.

ಜೆಡಿಯು ಒಡೆಯಲು ಯತ್ನ ಆರೋಪ ನಿರಾಕರಿಸಿದ ಬಿಜೆಪಿ

ಜೆಡಿಯುವನ್ನು ಒಡೆಯಲು ಬಿಜೆಪಿ ಯತ್ನಿಸಿದೆ ಎಂದು ಜೆಡಿಯು ಮುಖಂಡರು ಆರೋಪಿಸಿದ್ದಾರೆ. ಆದರೆ ಬಿಜೆಪಿ ಇದನ್ನು ಅಲ್ಲಗಳೆದಿದೆ. 

ಜೆಡಿಯು ಪ‍ಕ್ಷವನ್ನು ದುರ್ಬಲಗೊಳಿಸಿ, ತಮ್ಮನ್ನು ಮೂಲೆಗುಂಪು ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಶಾಸಕರು ಮತ್ತು ಸಂಸದರ ಸಭೆಯಲ್ಲಿ ನಿತೀಶ್ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಚಿರಾಗ್‌ ಪಾಸ್ವಾನ್‌ ಅವರನ್ನು ತಮ್ಮ ವಿರುದ್ಧ ಮೊದಲು ಎತ್ತಿಕಟ್ಟಲಾಯಿತು. ಬಳಿಕ, ಜೆಡಿಯು ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಆರ್‌.ಸಿ.ಪಿ ಸಿಂಗ್‌ ಅವರನ್ನೂ ತಮ್ಮ ವಿರುದ್ಧ ಬಳಸಿಕೊಂಡರು ಎಂದೂ ಅವರು ಹೇಳಿದ್ದಾರೆ. 

ಆರ್‌.ಸಿ.ಪಿ ಸಿಂಗ್‌ ಅವರನ್ನು ತಮ್ಮ ಒಪ್ಪಿಗೆ ಇಲ್ಲದೆಯೇ ಕೇಂದ್ರದಲ್ಲಿ ಸಚಿವನನ್ನಾಗಿ ಮಾಡಲಾಯಿತು ಎಂಬ ಮಾತನ್ನೂ ನಿತೀಶ್ ಹೇಳಿದ್ದಾರೆ. ಹಾಗಾಗಿಯೇ ಅವರ ರಾಜ್ಯಸಭಾ ಸದಸ್ಯತ್ವದ ಅವಧಿ ಮುಗಿದ ಬಳಿಕ, ಮತ್ತೊಂದು ಅವಕಾಶ ನೀಡಲು ನಿತೀಶ್ ನಿರಾಕರಿಸಿದ್ದರು. ಆರ್‌.ಸಿ.ಪಿ ಸಿಂಗ್ ಅವರನ್ನು ಬಳಸಿಕೊಂಡು ಜೆಡಿಯು ಪಕ್ಷವನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. 

ಬಿಜೆಪಿ ಮತ್ತು ಜೆಡಿಯು ನಡುವಣ ಸಂಬಂಧ ಇತ್ತೀಚಿನ ದಿನಗಳಲ್ಲಿ ಚೆನ್ನಾಗಿ ಇರಲಿಲ್ಲ. ಜಾತಿ ಸಮೀಕ್ಷೆ, ಅಗ್ನಿಪಥ ಯೋಜನೆ, ಜನಸಂಖ್ಯಾ ನಿಯಂತ್ರಣದಂತಹ ವಿಚಾರಗಳಲ್ಲಿ ಎರಡೂ ಪಕ್ಷಗಳು ಭಿನ್ನ ನಿಲುವು ಪ್ರದರ್ಶಿಸಿವೆ. 

ನಿತೀಶ್‌ ಅವರ ಒಪ್ಪಿಗೆ ಇಲ್ಲದೆಯೇ ಸಿಂಗ್ ಅವರನ್ನು ಸಚಿವನನ್ನಾಗಿ ಮಾಡಲಾಗಿದೆ ಎಂಬುದು ಸುಳ್ಳು. ಜೆಡಿಯು ಪಕ್ಷವನ್ನು ಒಡೆಯಲು ಬಿಜೆಪಿ ಯತ್ನಿಸಿತ್ತು ಎಂಬುದೂ ಸುಳ್ಳು ಎಂದು ಬಿಜೆಪಿ ಮುಖಂಡ ಸುಶೀಲ್‌ ಕುಮಾರ್‌ ಮೋದಿ ಹೇಳಿದ್ದಾರೆ.

ಮಂಗಳವಾರದ ಬೆಳವಣಿಗೆ

ಬೆಳಿಗ್ಗೆ 11; ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮನೆಯಲ್ಲಿ ಜೆಡಿಯು ಶಾಸಕರು ಹಾಗೂ ಸಂಸದರ ಸಭೆ

11.15; ಬಿಹಾರ ವಿಧಾನಸಭೆಯ ಪ್ರತಿಪಕ್ಷ ಹಾಗೂ ವಿಧಾನಸಭೆಯಲ್ಲಿ ಅತಿದೊಡ್ಡ ಪಕ್ಷ ಎನಿಸಿರುವ ಆರ್‌ಜೆಡಿ ಶಾಸಕರ ಸಭೆ

ಮಧ್ಯಾಹ್ನ 1; ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿ ನಿವಾಸದಲ್ಲಿ ಕಾಂಗ್ರೆಸ್, ಎಡಪಕ್ಷಗಳನ್ನು ಒಳಗೊಂಡ ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟದ ಸಭೆ;ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರನ್ನು ಬೆಂಬಲಿಸುವ ಪತ್ರಕ್ಕೆ ಸಹಿ

ಸಂಜೆ 4; ಬಿಹಾರದ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ನೀಡಿದ ನಿತೀಶ್ ಕುಮಾರ್. ‘ಎನ್‌ಡಿಎ ಮುಖ್ಯಮಂತ್ರಿ’ ಹುದ್ದೆಗೆ ರಾಜೀನಾಮೆ ನೀಡಿದ್ದಾಗಿ ಹೇಳಿಕೆ

4.45; ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಜೊತೆ ಮಾತುಕತೆ ನಡೆಸಲು ರಾಬ್ಡಿದೇವಿ ನಿವಾಸಕ್ಕೆ ತೆರಳಿದ ನಿತೀಶ್ ಕುಮಾರ್

5.20; ಜೆಡಿಯು ಹಾಗೂ ಇತರ ಪಕ್ಷಗಳ ಬೆಂಬಲ ಪತ್ರದೊಂದಿಗೆ, ತೇಜಸ್ವಿ ಯಾದವ್ ಜೊತೆ ಮತ್ತೆ ರಾಜಭವನಕ್ಕೆ ಮರಳಿದ ನಿತೀಶ್ ಕುಮಾರ್

6:00; ಎಂಟನೇ ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ ನಿತೀಶ್ ಕುಮಾರ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು