ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಹಣಕ್ಕಾಗಿ ಆಸ್ತಿ ನಗದೀಕರಣ

Last Updated 25 ಆಗಸ್ಟ್ 2021, 22:30 IST
ಅಕ್ಷರ ಗಾತ್ರ

ಹೊಸ ಆದಾಯದ ಮೂಲವೊಂದನ್ನು ಹುಡುಕುವ ಸಲುವಾಗಿ ಕೇಂದ್ರ ಸರ್ಕಾರವು‘ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಯೋಜನೆ’ (ಎನ್‌ಎಂಪಿ) ಜಾರಿಗೆ ತಂದಿದೆ. ಮುಂದಿನ 4 ವರ್ಷಗಳಲ್ಲಿ ₹6 ಲಕ್ಷ ಕೋಟಿ ಹಣ ಸಂಗ್ರಹಿಸುವ ಯೋಜನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಚಾಲನೆ ನೀಡಿದ್ದಾರೆ.ದೇಶದ ಮೂಲಸೌಕರ್ಯ ಯೋಜನೆಗಳಿಗೆ ಅನುದಾನ ಒದಗಿಸಲು ಕೇಂದ್ರ ಸರ್ಕಾರವು ಈ ನಿರ್ಧಾರ ತೆಗೆದುಕೊಂಡಿದೆ.

ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಯೋಜನೆಯಡಿ 2022–2025ರ ಅವಧಿಯಲ್ಲಿ ದೇಶದ ರೈಲು ನಿಲ್ದಾಣಗಳು, ರಸ್ತೆಗಳು, ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆ ಕೊಳವೆ ಮಾರ್ಗಗಳು, ವಿದ್ಯುತ್ ವಲಯಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಿ ಕೊಡುವುದು ಯೋಜನೆಯ ಉದ್ದೇಶ. ಯೋಜನೆಯಡಿ ನೀಡಲಾಗುವ ಆಸ್ತಿಗಳ ಮೇಲೆ ಸರ್ಕಾರದ ಒಡೆತನ ಇರಲಿದೆ. ಖಾಸಗಿಯವರು ನಿಗದಿತ ಸಮಯದ ನಂತರ ಸರ್ಕಾರಕ್ಕೆ ಆಸ್ತಿಗಳನ್ನು ಹಿಂತಿರುಗಿಸಬೇಕಾಗುತ್ತದೆ. ಆದರೆ, ಇದು ದೀರ್ಘಾವಧಿಯ ಗುತ್ತಿಗೆ ಆಗಿರುತ್ತದೆ.

ಉದ್ದೇಶ: ವಿವಿಧ ಇಲಾಖೆಗಳಲ್ಲಿ ಹೆಚ್ಚು ಬಳಕೆಯಾಗದೇ ಉಳಿದಿರುವ ಸರ್ಕಾರದ ಆಸ್ತಿಗಳನ್ನು ಆದಾಯ ಸಂಗ್ರಹದ ಮೂಲಗಳನ್ನಾಗಿ ಪರಿವರ್ತಿಸುವುದು ಯೋಜನೆಯ ಗುರಿ.ಸ್ವತ್ತುಗಳನ್ನು ಮಾರಾಟ ಮಾಡುವ, ಬಂಡವಾಳ ಹಿಂತೆಗೆದುಕೊಳ್ಳುವ ಅಥವಾ ಖಾಸಗೀಕರಣಕ್ಕೆ ಒಳಪಡಿಸುವ ಬದಲಾಗಿ, ‘ರಚನಾತ್ಮಕ ಒಪ್ಪಂದದ ಪಾಲುದಾರಿಕೆ’ಯನ್ನು ಸೃಷ್ಟಿಸುವುದು ಸರ್ಕಾರದ ಉದ್ದೇಶ. ಮೂಲಸೌಕರ್ಯ ಉದ್ದೇಶದಿಂದ ನಿರ್ಮಿಸಿದ ಸರ್ಕಾರದ ವಿವಿಧ ಯೋಜನೆಗಳನ್ನು ಖಾಸಗಿಯವರು ನಿರ್ವಹಣೆ ಮಾಡಲಿದ್ದಾರೆ.

ಆಸ್ತಿಯನ್ನು ನಗದೀಕರಣಗೊಳಿಸುವ ನಿಟ್ಟಿನ‌ಲ್ಲಿ ಇದೊಂದು ಪಾರದರ್ಶಕ ವ್ಯವಸ್ಥೆ ಎಂದು ಸರ್ಕಾರ ಹೇಳಿಕೊಂಡಿದೆ.‘ಹೊಸ ಮೂಲಸೌಕರ್ಯ ಸೃಷ್ಟಿಗೆ ಖಾಸಗಿ ವಲಯದ ಹೂಡಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಲಾಗಿದ್ದು, ಉದ್ಯೋಗಾವಕಾಶ ಸೃಷ್ಟಿಸಲು ಇದು ಅಗತ್ಯವಾಗಿದೆ. ಆ ಮೂಲಕ ಹೆಚ್ಚಿನ ಆರ್ಥಿಕ ಬೆಳವಣಿಗೆ ಸಾಧಿಸಬಹುದು’ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ರಸ್ತೆ ವಲಯದಿಂದ ಗರಿಷ್ಠ ಹಣ ಗಳಿಕೆಗೆ ಉದ್ದೇಶಿಸಲಾಗಿದ್ದು, 2025ರ ವೇಳೆಗೆ ₹1.6 ಲಕ್ಷ ಕೋಟಿ ಮೌಲ್ಯದ ನಗದೀಕರಣ ನಿರೀಕ್ಷಿಸಲಾಗಿದೆ. ನಂತರದ ಸ್ಥಾನದಲ್ಲಿ ರೈಲ್ವೆ ಇದೆ. ಸುಮಾರು 400 ನಿಲ್ದಾಣಗಳು, 150 ರೈಲುಗಳು, ಮತ್ತು ಕೆಲವು ಟ್ರ್ಯಾಕ್‌ಗಳಿಂದ ₹1.5 ಲಕ್ಷ ಕೋಟಿ ಮೌಲ್ಯದ ನಗದೀಕರಣ ಗುರಿ ಹೊಂದಲಾಗಿದೆ.ಯೋಜನೆಯಡಿ 15 ರೈಲ್ವೇ ಕ್ರೀಡಾಂಗಣಗಳು, 25 ವಿಮಾನ ನಿಲ್ದಾಣಗಳು, 160 ಕಲ್ಲಿದ್ದಲು ಗಣಿಗಾರಿಕೆ ಯೋಜನೆಗಳನ್ನು ನಗದೀಕರಣಕ್ಕಾಗಿ ಗುರುತಿಸಲಾಗಿದೆ.

ಜನರಿಗೆ ಶುಲ್ಕದ ಹೊರೆ

ಆಸ್ತಿ ನಗದೀಕರಣ ಯೋಜನೆ ಅಡಿ ದೇಶದ 26,700 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಖಾಸಗಿ ಕಂಪನಿಗಳಿಗೆ ದೀರ್ಘಾವಧಿಯವರೆಗೆ ಭೋಗ್ಯಕ್ಕೆ ನೀಡಲು ಕೇಂದ್ರ ಸರ್ಕಾರವು ಸಿದ್ಧತೆ ನಡೆಸಿದೆ. ಈಕಾರ್ಯಕ್ರಮವು ಅನುಷ್ಠಾನಕ್ಕೆ ಬಂದರೆ ದೇಶದ ಬಹುತೇಕ ರಾಷ್ಟ್ರೀಯ ಹೆದ್ದಾರಿಗಳು ಟೋಲ್‌ ಹೆದ್ದಾರಿಗಳಾಗಿ (ಶುಲ್ಕ ಪಾವತಿಸಿ ಬಳಸುವ ಹೆದ್ದಾರಿ) ಬದಲಾಗಲಿವೆ. ಇದು ಸಾರ್ವಜನಿಕರಿಗೆ ಹೆಚ್ಚು ಹೊರೆಯಾಗಲಿದೆ.

ಈ ಹೆದ್ದಾರಿಗಳನ್ನು ಶುಲ್ಕ-ನಿರ್ವಹಣೆ-ವರ್ಗಾವಣೆ (ಟೋಲ್/ಆಪರೇಟ್/ಟ್ರಾನ್ಸವರ್-ಟಿಒಟಿ) ಮಾದರಿ ಮತ್ತು ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ (ಇನ್ವಿಟ್) ಮಾದರಿಯಲ್ಲಿ ನಗದೀಕರಣ ಮಾಡಿಕೊಳ್ಳಲು ಸರ್ಕಾರವು ರೂಪುರೇಷೆ ಸಿದ್ಧಪಡಿಸಿದೆ.ಸಾರ್ವಜನಿಕರ ಹಣದಲ್ಲಿ ಎನ್‌ಎಚ್‌ಎಐ ನಿರ್ಮಿಸಿದ ಹೆದ್ದಾರಿಯನ್ನು, ನಿರ್ವಹಣೆ ಮತ್ತು ಶುಲ್ಕ ಸಂಗ್ರಹಕ್ಕಾಗಿ ಮಾತ್ರವೇ ಖಾಸಗಿ ಕಂಪನಿಗೆ ಭೋಗ್ಯಕ್ಕೆ ನೀಡಲಾಗುತ್ತದೆ.

26,700 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಹುತೇಕ ಭಾಗವನ್ನು ಟಿಒಟಿ ಮಾದರಿಯಲ್ಲಿ ನಗದೀಕರಣ ಮಾಡಿಕೊಳ್ಳಲಾಗುತ್ತದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು,ರಸ್ತೆ-ಹೆದ್ದಾರಿ ನಗದೀಕರಣಕ್ಕೆ 2016ರಲ್ಲಿ ಸಿದ್ಧಪಡಿಸಿರುವ ಮಾರ್ಗಸೂಚಿಯ ಅನ್ವಯ ಇದನ್ನು ಅನುಷ್ಠಾನಕ್ಕೆ ತರಲಾಗುತ್ತದೆ.

30 ವರ್ಷ ಭೋಗ್ಯಕ್ಕೆ:ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎನ್‌ಎಚ್‌ಎಐ) ಅಭಿವೃದ್ಧಿಪಡಿಸುವ ಹೆದ್ದಾರಿಗಳನ್ನು, ಪ್ರಾಧಿಕಾರವೇ ಎರಡು ವರ್ಷ ನಿರ್ವಹಣೆ ಮಾಡಲಿದೆ. ಆನಂತರ ಅದನ್ನು ಟೆಂಡರ್ ಮೂಲಕ ಖಾಸಗಿ ಕಂಪನಿಗೆ ಭೋಗ್ಯಕ್ಕೆ ಹಾಕಲಾಗುತ್ತದೆ.ಖಾಸಗಿ ಕಂಪನಿಯು, ಬಿಡ್ಡಿಂಗ್‌ನಲ್ಲಿ ನಮೂದಿಸಿದಷ್ಟು ಹಣವನ್ನು ಒಮ್ಮೆಲೇ ಪಾವತಿಸಿ ರಸ್ತೆಯ ಮೇಲ್ವಿಚಾರಣೆಯನ್ನು ವಹಿಸಿಕೊಳ್ಳುತ್ತದೆ. ಪ್ರತಿ ಹೆದ್ದಾರಿಯನ್ನು ಕನಿಷ್ಠ 30 ವರ್ಷಗಳವರೆಗೆ ಭೋಗ್ಯಕ್ಕೆ ನೀಡಲಾಗುತ್ತದೆ.

ಶುಲ್ಕ ನಿಯಂತ್ರಣ ಇಲ್ಲ:30 ವರ್ಷಗಳವರೆಗೆ ಆ ಹೆದ್ದಾರಿಯ ನಿರ್ವಹಣೆ ಮತ್ತು ಶುಲ್ಕ ಸಂಗ್ರಹದ ಕರ್ತವ್ಯ ಮತ್ತು ಹಕ್ಕುಗಳು ಆ ಖಾಸಗಿ ಕಂಪನಿಯದ್ದಾಗಿರುತ್ತದೆ. ಭೋಗ್ಯದ ಅವಧಿ ಮುಗಿದ ನಂತರ ಹೆದ್ದಾರಿಯು ಎನ್‌ಎಚ್‌ಐಎ ಸುಪರ್ದಿಗೆ ಮರಳುತ್ತದೆ.ಶುಲ್ಕ ನಿಗದಿ, ಏರಿಕೆ ಮತ್ತು ಸಂಗ್ರಹದ ಸಂಪೂರ್ಣ ಅಧಿಕಾರವು ಖಾಸಗಿ ಕಂಪನಿಯದ್ದಾಗಿರುತ್ತದೆ. ಸರ್ಕಾರವು ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಹೀಗಾಗಿ ಖಾಸಗಿ ಕಂಪನಿಯು ವಿಧಿಸುವ ಶುಲ್ಕವನ್ನು ಬಳಕೆದಾರರು ಕಟ್ಟಬೇಕಾಗುತ್ತದೆ.

ಶುಲ್ಕ ವಿನಾಯಿತಿ ಇಲ್ಲ: ಬಳಕೆದಾರರ ಶುಲ್ಕ ವಿನಾಯಿತಿಯನ್ನು ತಪ್ಪಿಸುವ ಉದ್ದೇಶದಿಂದಲೇ ಈ ನೀತಿ ಜಾರಿಗೆ ತರಲಾಗುತ್ತಿದೆ ಎಂದು 2016 ರಸ್ತೆ-ಹೆದ್ದಾರಿ ನಗದೀಕರಣ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಹೆದ್ದಾರಿಗಳನ್ನು ಭೋಗ್ಯಕ್ಕೆ ನೀಡಿದ ನಂತರ, ಸ್ಥಳೀಯರಿಗೆ ಬಳಕೆದಾರರ ಶುಲ್ಕದಿಂದ ವಿನಾಯಿತಿ ದೊರೆಯುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಈ ಮಾರ್ಗಸೂಚಿ ಸ್ಪಷ್ಟಪಡಿಸಿಲ್ಲ.

ರೈಲ್ವೆಯೂ ಭೋಗ್ಯಕ್ಕೆ:ಕೊಂಕಣ ರೈಲ್ವೆ, 400 ರೈಲುನಿಲ್ದಾಣಗಳು, 90 ಪ್ರಯಾಣಿಕ ರೈಲುಗಳು, ರೈಲ್ವೆ ಕ್ರೀಡಾಂಗಣಗಳು, ರೈಲ್ವೆ ಕಾಲೋನಿಗಳು, ರೈಲ್ವೆ ಗೋದಾಮುಗಳನ್ನು ಖಾಸಗಿಯವರಿಗೆ ಭೋಗ್ಯಕ್ಕೆ ನೀಡಲಾಗುತ್ತದೆ. ಈ ಎಲ್ಲಾ ಸ್ವತ್ತುಗಳ ನಿರ್ವಹಣೆ ಮತ್ತು ಬಳಕೆದಾರರ ಶುಲ್ಕ ನಿಗದಿಪಡಿಸುವ ಅಧಿಕಾರ ಖಾಸಗಿ ಕಂಪನಿಯದ್ದಾಗಿರುತ್ತದೆ.

ಸವಾಲುಗಳೇನು?

ಯೋಜನೆಯನ್ನು ಕಾರ್ಯಗತಗೊಳಿಸುವುದು ಅಂದುಕೊಂಡಷ್ಟು ಸುಲಭವಲ್ಲ

ಖಾಸಗಿ ಕಂಪನಿಗಳನ್ನು ಆಕರ್ಷಿಸುವುದು ಕಷ್ಟ

ನಿರೀಕ್ಷಿತ ಲಾಭ ಸಾಧ್ಯವಿಲ್ಲದ ಆಸ್ತಿಯಲ್ಲಿ ಹೂಡಿಕೆ ಮಾಡಲು ಖಾಸಗಿ ಸಂಸ್ಥೆಗಳು ಮುಂದಾಗುವುದು ಅನುಮಾನ

ಸಾರ್ವಜನಿಕ ಆಸ್ತಿಯ ಮೇಲೆ ಕೆಲವೇ ಖಾಸಗಿ ಕಂಪನಿಗಳ ಪ್ರಾಬಲ್ಯ ಸಾಧ್ಯತೆ

ಖಾಸಗಿಯವರು, ಆಸ್ತಿಯನ್ನು ಹೇಗೆ ಬಳಕೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಹಾಗೂ ಆದಾಯ ಗಳಿಕೆಯ ಬಗ್ಗೆ ಸ್ಪಷ್ಟ ಕಾರ್ಯತಂತ್ರ ಇಲ್ಲ

ಆಸ್ತಿಯ ಮಾಲೀಕತ್ವ ಸರ್ಕಾರದ ಬಳಿ ಇದ್ದರೂ, ಕೆಲ ಆಸ್ತಿಯನ್ನು ಗುತ್ತಿಗೆ ಪಡೆದ ಖಾಸಗಿ ಕಂಪನಿಗಳು ಅದನ್ನು ನಿಗದಿತ ಅವಧಿಯೊಳಗೆ ಬಿಟ್ಟುಕೊಡುವುದು ಸಾಧ್ಯವಾಗಲಿಕ್ಕಿಲ್ಲ

ರಸ್ತೆ ಹಾಗೂ ವಿದ್ಯುತ್‌ ವಲಯದಲ್ಲಿನ ಯೋಜನೆಗಳನ್ನು ಖಾಸಗಿಯವರಿಗೆ ಕೊಟ್ಟಾಗ, ಆ ಕ್ಷೇತ್ರದ ಗ್ರಾಹಕರು ಹಾಗೂ ಗುತ್ತಿಗೆ ಪಡೆದ ಕಂಪನಿಗಳ ನಡುವೆ ಉಂಟಾಗಬಹುದಾದ ವ್ಯಾಜ್ಯ ಅಥವಾ ವಿವಾದ ಪರಿಹಾರಕ್ಕೆ ಸಂಬಂಧಪಟ್ಟಂತೆ ಕಾರ್ಯಸೂಚಿ ಇಲ್ಲ

ಈಗಾಗಲೇ ಟೋಲ್‌ ಇರುವ ಹೆದ್ದಾರಿಗಳನ್ನು ಹೊರತುಪಡಿಸಿ, ಉಳಿದ ರಾಷ್ಟ್ರೀಯ ಹೆದ್ದಾರಿಗಳನ್ನು ಖಾಸಗಿ ಕಂಪನಿಗಳು ಹೇಗೆ ನಿರ್ವಹಿಸಲಿವೆ ಎಂಬುದರ ಸ್ಪಷ್ಟತೆ ಇಲ್ಲ. ಹೊಸದಾಗಿ ಟೋಲ್‌ ಸಂಗ್ರಹ ಆರಂಭಿಸಿದರೆ, ಸಾರ್ವಜನಿಕರ ಪ್ರತಿರೋಧ ಎದುರಿಸುವ ಸವಾಲು.

‘ಕಾನೂನುಬದ್ಧ ಲೂಟಿ, ಸಂಘಟಿತ ಸುಲಿಗೆ’

ಮೊದಲು ನೋಟು ಅಮಾನ್ಯೀಕರಣ, ನಂತರ ಜಿಎಸ್‌ಟಿ ಈಗ ಬಂತು ನೋಡಿ ನಗದೀಕರಣ ಮೇಳ. ದಶಕಗಳ ಶ್ರಮದಿಂದ ರೂಪಿಸಲಾದ ಮಹತ್ವದ ಸಾರ್ವಜನಿಕ ಸ್ವತ್ತುಗಳನ್ನು ಈಗ ಕೆಲವೇ ಆಯ್ದ ಮಂದಿಗೆ ನೀಡಲಾಗುತ್ತದೆ. ಇದು ಕಾನೂನುಬದ್ಧ ಲೂಟಿ ಮತ್ತು ಸಂಘಟಿತ ಸುಲಿಗೆ.

ಜೈರಾಂ ರಮೇಶ್,ಕಾಂಗ್ರೆಸ್ ಹಿರಿಯ ನಾಯಕ

70 ವರ್ಷದಲ್ಲಿ ಹಿಂದಿನ ಸರ್ಕಾರಗಳು ಏನೂ ಮಾಡಿಲ್ಲ ಎಂದು ಮೋದಿ ಹೇಳುತ್ತಾರೆ. ಆದರೆ, ಹಿಂದಿನ ಸರ್ಕಾರಗಳು70 ವರ್ಷಗಳ ಅವಧಿಯಲ್ಲಿ ಸಾರ್ವಜನಿಕರ ಹಣದಿಂದ ಕಟ್ಟಿದ, ದೇಶದ ಮುಕುಟಪ್ರಾಯವಾದ ಸ್ವತ್ತುಗಳನ್ನು ಈಗ ಮೋದಿ ಸರ್ಕಾರ ಮಾರಾಟ ಮಾಡಲು ಹೊರಟಿದೆ. ಇದರಿಂದ ಮಹತ್ವದ ಕ್ಷೇತ್ರಗಳಲ್ಲಿ ಏಕಸ್ವಾಮ್ಯ ಉಂಟಾಗುತ್ತದೆ. ಉದ್ಯೋಗ ನಷ್ಟವಾಗುತ್ತದೆ.

ರಾಹುಲ್ ಗಾಂಧಿ,ಕಾಂಗ್ರೆಸ್ ಸಂಸದ

ಇದು ದಿವಾಳಿಯಾಗಿರುವ ನರೇಂದ್ರ ಮೋದಿ, ಜಾರಿಗೆ ತರಲು ಹೊರಟಿರುವ ಅತ್ಯಂತ ಅಪಾಯಕಾರಿ ಕಾರ್ಯಕ್ರಮ. ಇದೊಂದು ಅಸಾಧಾರಣ ಮತ್ತು ಜನವಿರೋಧಿ ಕ್ರಮ.

ಸುಖೇಂದು ರೇ, ಟಿಎಂಸಿ ರಾಜ್ಯಸಭಾ ಸದಸ್ಯ

ದೇಶದ ಮಾರಾಟವನ್ನು ಕೇಂದ್ರ ಸರ್ಕಾರವು ಅಧಿಕೃತವಾಗಿ ಘೋಷಿಸಿದೆ. ದೇಶದ ಸ್ವತ್ತು ಮತ್ತು ಮೂಲಸೌಕರ್ಯಗಳನ್ನು ಹೇಗೆ ವ್ಯವಸ್ಥಿತವಾಗಿ ಲೂಟಿ ಹೊಡೆಯಲಾಗುತ್ತದೆ ಎಂಬುದನ್ನು ಹಣಕಾಸು ಸಚಿವರು ಅತ್ಯಂತ ಸ್ಪಷ್ಟವಾಗಿ ವಿವರಿಸಿದ್ದಾರೆ. ಇದು ಸಾರ್ವಜನಿಕ ಸ್ವತ್ತಿನ ಹಗಲು ದರೋಡೆಯಲ್ಲದೆ ಮತ್ತೇನು?

ಸಿಪಿಎಂ

ಅವರಿಗೆ ಇಷ್ಟಬಂದಂತೆ ಮಾರಾಟ ಮಾಡಲು ಇವೇನು ಮೋದಿ ಅಥವಾ ಬಿಜೆಪಿಯ ಸ್ವತ್ತಲ್ಲ, ಸಾರ್ವಜನಿಕರ ಸ್ವತ್ತು. ಈ ನಗದೀಕರಣದಿಂದ ಸಂಗ್ರಹಿಸಿದ ಹಣವನ್ನು ವಿರೋಧ ಪಕ್ಷಗಳನ್ನು ಹತ್ತಿಕ್ಕಲು ನರೇಂದ್ರ ಮೋದಿ ಬಳಸಲಿದ್ದಾರೆ. ಈ ಕಾರ್ಯಕ್ರಮದ ವಿರುದ್ಧ ದೇಶದ ಜನರೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು.

ಮಮತಾ ಬ್ಯಾನರ್ಜಿ,ಪಶ್ಚಿಮ ಬಂಗಾಳ ಮುಖ್ಯಮಂತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT