ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಮುಂಗಾರು ಬೇಸಾಯಕ್ಕೆ ರಸಗೊಬ್ಬರ ಕೊರತೆ ಇಲ್ಲ: ಸಚಿವ ಡಿ.ವಿ.ಸದಾನಂದಗೌಡ

Last Updated 14 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಮುಂಗಾರು ಬೇಸಾಯಕ್ಕೆ ಅಗತ್ಯವಿರುವಷ್ಟು ರಸಗೊಬ್ಬರ ಲಭ್ಯವಿದ್ದು, ಯಾವುದೇ ಕೊರತೆ ಇಲ್ಲ. ಪೂರೈಕೆಯಲ್ಲಿ ವ್ಯತ್ಯಯವಾಗುವುದಿಲ್ಲ ಎಂದು ಕೇಂದ್ರ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಜೂನ್‌ ತಿಂಗಳಿನಿಂದ ದೇಶದಲ್ಲಿ ಮುಂಗಾರು ಬೇಸಾಯ ಆರಂಭವಾಗುತ್ತದೆ. ಜೂನ್‌ನಿಂದ ನವೆಂಬರ್‌ವರೆಗೂ ಬೇಸಾಯದ ವಿವಿಧ ಹಂತಗಳಲ್ಲಿ ರಸಗೊಬ್ಬರದ ಅವಶ್ಯಕತೆ ಇರುತ್ತದೆ. ಆ ಅವಧಿಯಲ್ಲಿ ದೇಶದಾದ್ಯಂತ ಅಗತ್ಯವಿರುವಷ್ಟು ರಸಗೊಬ್ಬರ ಲಭ್ಯವಿರುವಂತೆ ನೋಡಿಕೊಳ್ಳಲು ಸರ್ಕಾರವು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಹೀಗಾಗಿ ರಸಗೊಬ್ಬರದ ಲಭ್ಯತೆಯಲ್ಲಿ ಯಾವುದೇ ಕೊರತೆ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.

‘ರಸಗೊಬ್ಬರದ ಕೊರತೆಗೆ ಕಾರಣರಾಗುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ರಸಗೊಬ್ಬರದ ಅಕ್ರಮ ಸಂಗ್ರಹ, ಕೃತಕ ಕೊರತೆ ಸೃಷ್ಟಿ ಮತ್ತು ಕಾಳಸಂತೆಯಲ್ಲಿ ಮಾರಾಟ ಮಾಡುವುದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ದೇಶದಲ್ಲಿ ಕೋವಿಡ್‌-19 ಹೊಸ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ ಕಾರಣದಿಂದ ಹಲವುರಾಜ್ಯಗಳಲ್ಲಿ ಅರೆಲಾಕ್‌ಡೌನ್‌ ಜಾರಿಯಲ್ಲಿದೆ. ಆದರೆ ಈ ಯಾವ ನಿರ್ಬಂಧಗಳಿಂದಲೂ ರಸಗೊಬ್ಬರ ಸಾಗಣೆಗೆ ತೊಡಕಾಗದು. ರಸಗೊಬ್ಬರ ಸಾಗಣೆಗೆ ತೊಡಕಾಗದಂತೆ ನೋಡಿಕೊಳ್ಳುವ ವ್ಯವಸ್ಥೆ ಇದೆ’ ಎಂದು ಅವರು ವಿವರಿಸಿದ್ದಾರೆ.

‘ಅಮೆರಿಕ ಮತ್ತು ಬ್ರೆಜಿಲ್‌ನಲ್ಲಿ ಈ ಋತುವಿನ ಬೇಸಾಯ ಅಂತ್ಯವಾಗಿದೆ. ರಸಗೊಬ್ಬರದ ಬಳಕೆ ಇಲ್ಲವಾಗಿದೆ. ಯೂರೋಪ್‌ನಲ್ಲಿಯೂ ಈ ತಿಂಗಳ ಅಂತ್ಯಕ್ಕೆ ಬೇಸಾಯದ ಋತು ಮುಗಿಯಲಿದೆ. ಹೀಗಾಗಿ ಮುಂದಿನ ತಿಂಗಳಿನಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರವು ಭಾರಿ ಪ್ರಮಾಣದಲ್ಲಿ ಲಭ್ಯವಾಗಲಿದೆ. ಜೂನ್‌ನಿಂದ ಚೀನಾ ಮತ್ತು ಭಾರತಕ್ಕೆ ಮಾತ್ರ ರಸಗೊಬ್ಬರ ಮಾರಾಟ ಮಾಡಬೇಕಾಗುತ್ತದೆ. ಹೀಗಾಗಿ ರಸಗೊಬ್ಬರ ಕೊರತೆ ಉಂಟಾಗುವುದಿಲ್ಲ’ ಎಂದು ಅವರು ವಿವರಿಸಿದ್ದಾರೆ.

‘ಬೆಲೆ ಇಳಿಯಬಹುದು’

‘ರಸಗೊಬ್ಬರ ತಯಾರಿಕಾ ಕಂಪನಿಗಳ ಜತೆ ಮಾತುಕತೆ ನಡೆಸಲಾಗಿದೆ. ಯೂರಿಯಾಯೇತರ ಗೊಬ್ಬರಗಳನ್ನು ಹಳೆಯ ದರದಲ್ಲೇ ಮಾರಾಟ ಮಾಡಲು ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ. ಹೀಗಾಗಿ ರಸಗೊಬ್ಬರದ ಬೆಲೆಯಲ್ಲಿ ಯಾವುದೇ ಏರಿಕೆ ಆಗುವುದಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ತೀವ್ರವಾಗಿದ್ದ ಕಾರಣ, ಬೆಲೆಯಲ್ಲಿ ಏರಿಕೆಯಾಗಿತ್ತು. ಈಗ ಅಮೆರಿಕ, ಬ್ರೆಜಿಲ್ ಮತ್ತು ಯೂರೋಪ್‌ನಲ್ಲಿ ಬೇಡಿಕೆ ಕಡಿಮೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರ ಮತ್ತು ಯೂರಿಯಾ ಬೆಲೆ ಇಳಿಕೆಯಾಗುತ್ತಿದೆ. ಹೀಗಾಗಿ ದೇಶದಲ್ಲೂ ರಸಗೊಬ್ಬರದ ಬೆಲೆ ಇಳಿಕೆಯಾಗಬಹುದು’ ಎಂದು ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ರಸಗೊಬ್ಬರ ತಯಾರಿಕಾ ಖಾಸಗಿ ಕಂಪನಿಗಳು ಮಾರ್ಚ್‌ ಎರಡನೇ ವಾರದಿಂದಲೇ ರಸಗೊಬ್ಬರಗಳ ಬೆಲೆಯಲ್ಲಿ ಏರಿಕೆ ಮಾಡಿವೆ. ಭಾರತದ ಅತ್ಯಂತ ದೊಡ್ಡ ರಸಗೊಬ್ಬರ ತಯಾರಿಕಾ ಕಂಪನಿ ಇಫ್ಕೊ ಸಹ ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ರಸಗೊಬ್ಬರಗಳ ಬೆಲೆಯಲ್ಲಿ ಭಾರಿ ಏರಿಕೆ ಮಾಡಿತ್ತು. ಬೆಲೆ ಏರಿಕೆಗೆ ಭಾರಿ ಆಕ್ಷೇಪ ವ್ಯಕ್ತವಾಗಿತ್ತು.

ಮಧ್ಯಪ್ರವೇಶಕ್ಕೆ ಮನವಿ: ಈಗ ದೇಶದಲ್ಲಿ ಗೊಬ್ಬರ ಮಾರಾಟ ಕೇಂದ್ರಗಳಲ್ಲಿ, ಗೋದಾಮುಗಳಲ್ಲಿ ಇರುವ ರಸಗೊಬ್ಬರಕ್ಕೆ ಮಾತ್ರ ಹಳೆಯ ದರ ಅನ್ವಯವಾಗುತ್ತದೆ. 'ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರ ಮತ್ತು ಕಚ್ಚಾವಸ್ತುಗಳ ಬೆಲೆ ಏರಿಕೆಯಾಗಿದೆ. ಹೊಸದಾಗಿ ತಯಾರಿಸುವ ಗೊಬ್ಬರವನ್ನು ಹಳೆಯ ದರದಲ್ಲಿ ಮಾರಾಟ ಮಾಡಿದರೆ, ಕಂಪನಿಗಳಿಗೆ ನಷ್ಟವಾಗುತ್ತದೆ. ಹೀಗಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಗೊಬ್ಬರ ಲಭ್ಯವಾಗುವಂತೆ ರಾಜತಾಂತ್ರಿಕ ಮಾರ್ಗ ಮೂಲಕ ಯತ್ನಿಸಬೇಕು' ಎಂದು ಕಂಪನಿಗಳು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿವೆ.

‘ರಾಜತಾಂತ್ರಿಕ ಮಾರ್ಗದಲ್ಲಿ, ಕಡಿಮೆ ಬೆಲೆಗೆ ಕಚ್ಚಾವಸ್ತು ಮತ್ತು ರಸಗೊಬ್ಬರ ಲಭ್ಯವಾಗುವಂತೆ ನೋಡಿಕೊಳ್ಳುತ್ತೇವೆ’ ಎಂದು ಸರ್ಕಾರವು ಭರವಸೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT