ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರ್ಮು ಬೆಂಬಲಿಸುವಂತೆ ಒತ್ತಡ ಇರಲಿಲ್ಲ, ನನ್ನದು ಸಂಕುಚಿತ ಮನಸ್ಸಲ್ಲ: ಠಾಕ್ರೆ

ಅಕ್ಷರ ಗಾತ್ರ

ಮುಂಬೈ: ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲು ನನಗೆ ಯಾರ ಒತ್ತಡವೂ ಇರಲಿಲ್ಲ ಎಂದು ಶಿವ ಸೇನಾ ನಾಯಕ ಹಾಗೂ ಮಾಜಿ ಸಿಎಂ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.

ಮುರ್ಮು ಅವರನ್ನು ಚುನಾವಣೆಯಲ್ಲಿ ಬೆಂಬಲಿಸುವಂತೆ ಶಿವ ಸೇನಾದ 22 ಸಂಸದರಲ್ಲಿ (19 ಲೋಕಸಭೆ, 3 ರಾಜ್ಯಸಭೆ ಸದಸ್ಯರು) 16 ಸಂಸದರು ಠಾಕ್ರೆ ಅವರ ಮೇಲೆ ಒತ್ತಡ ಹೇರಿದ್ದರು ಎನ್ನಲಾಗಿತ್ತು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದ್ರೌಪದಿ ಅವರು ಒಬ್ಬ ಮಹಿಳೆ ಹಾಗೂ ಆದಿವಾಸಿ ಜನಾಂಗದಿಂದ ಬಂದವರು ಎಂಬ ಉದ್ದೇಶದಿಂದ, ಈ ದೇಶದ ಆದಿವಾಸಿಗಳಿಗೆ ನ್ಯಾಯ ಸಿಗಬೇಕು ಎಂಬ ದೃಷ್ಟಿಯಿಂದ ಅವರನ್ನು ಬೆಂಬಲಿಸಿದ್ದೇವೆ ಎಂದು ಹೇಳಿದ್ದಾರೆ.

ನನ್ನದು ಸಂಕುಚಿತ ಮನಸ್ಸಲ್ಲ, ಯಾವ ಸಮಯದಲ್ಲಿ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ. ಇಂದು ನಡೆದ ಶಿವ ಸೇನಾ ಸಂಸದರ ಸಭೆಯಲ್ಲಿ ಯಾರೂ ನನ್ನ ಮೇಲೆ ಒತ್ತಡ ಹೇರಿದ್ದಿಲ್ಲ ಎಂದು ಅವರು ಹೇಳಿದ್ದಾರೆ.

ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿರುವ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಶಿವ ಸೇನಾದಿಂದ ಬೆಂಬಲಿಸುವುದಕ್ಕೆ ಶಿವಸೇನೆ ನಾಯಕ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಇಂದು ಅಧಿಕೃತವಾಗಿ ಒಪ್ಪಿಕೊಂಡಿದ್ದರು.

ಅದಕ್ಕೂ ಮೊದಲು ಲೋಕಸಭೆಯ ವಿರೋಧ ಪಕ್ಷಗಳು ಒಮ್ಮತದಿಂದ ಯಶವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಚುನಾವಣೆಗೆ ಬೆಂಬಲಿಸಿದ್ದರು. ಇದಕ್ಕೆ ಶಿವ ಸೇನಾ ಕೂಡ ಒಪ್ಪಿಗೆ ಸೂಚಿಸಿತ್ತು. ಇದೀಗ ಶಿವ ಸೇನೆ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಂತಾಗಿದೆ.

ಮುರ್ಮು ಅವರು ಒಬ್ಬ ಮಹಿಳೆ ಹಾಗೂ ಆದಿವಾಸಿ ಸಮುದಾಯಕ್ಕೆ ರಾಷ್ಟ್ರಪತಿ ಹುದ್ದೆ ಸಿಗುವುದು ಹೆಮ್ಮೆಯ ವಿಷಯ. ಶೇ 10 ರಷ್ಟು ಆದಿವಾಸಿ ಜನಾಂಗವನ್ನು ಹೊಂದಿರುವ ಮಹಾರಾಷ್ಟ್ರದಿಂದ ಅವರನ್ನು ನಾವು ಬೆಂಬಲಿಸಬೇಕು ಎಂಬ ಒತ್ತಾಸೆಯನ್ನು ಠಾಕ್ರೆ ಮೇಲೆ ಸೇನಾ ಸಂಸದರು ಹೇರಿದ್ದರು ಎಂದು ಕೆಲ ವರದಿಗಳು ಹೇಳಿದ್ದವು.

22 ಸಂಸದರಲ್ಲಿ 6 ಸಂಸದರು ಏಕನಾಥ ಶಿಂಧೆ ಬಣದೊಂದಿಗೆ ಗುರುತಿಸಿಕೊಂಡಿದ್ದಾರೆ. ಜುಲೈ 18 ಕ್ಕೆ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಮುರ್ಮು ಅವರ ಆಯ್ಕೆ ನಿಚ್ಚಳವಾಗಿದೆ. ಅವರಿಗೆ ಜೆಡಿಎಸ್, ಟಿಡಿಪಿ ಸೇರಿದಂತೆ ಅನೇಕ ಪಕ್ಷಗಳು ಬೆಂಬಲ ಸೂಚಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT