ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಹೇಳಿಕೆಗೆ ಕಾಂಗ್ರೆಸ್‌ನಲ್ಲೇ ವಿರೋಧ

ಭಾರತದ ಯಾವುದೇ ಪ್ರದೇಶವನ್ನು ಪಕ್ಷವು ಅಗೌರವಿಸಿಲ್ಲ: ಹಿರಿಯ ಮುಖಂಡ ಆನಂದ ಶರ್ಮಾ
Last Updated 24 ಫೆಬ್ರುವರಿ 2021, 18:55 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಭಾರತದವರಿಗಿಂತ ದಕ್ಷಿಣ ಭಾರತದವರು ಯಾವುದೇ ಸಮಸ್ಯೆ ಅಥವಾ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ನೀಡಿರುವ ಹೇಳಿಕೆಗೆ ಪಕ್ಷದ ಕೆಲವು ಮುಖಂಡರೇ ವಿರೋಧ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಆನಂದ್‌ ಶರ್ಮಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ’ದೇಶದ ಯಾವುದೇ ಪ್ರದೇಶವನ್ನು ಪಕ್ಷವು ಅಗೌರವಿಸಿಲ್ಲ. ಹೀಗಾಗಿ, ತಪ್ಪು ತಿಳಿವಳಿಕೆ ಉಂಟಾಗಿರುವ ಬಗ್ಗೆ ರಾಹುಲ್‌ ಅವರೇ ಸ್ಪಷ್ಟನೆ ನೀಡಬೇಕು’ ಎಂದು ಹೇಳಿದ್ದಾರೆ.

‘ಕಾಂಗ್ರೆಸ್‌ ಎಂದಿಗೂ ದೇಶವನ್ನು ವಿಭಜಿಸಿಲ್ಲ. ಭಾರತದ ಪ್ರತಿಯೊಂದು ಭಾಗವು ಮುಖ್ಯವಾಗಿದೆ. ಎಲ್ಲ ಪ್ರದೇಶಗಳನ್ನು ಸಮಾನವಾಗಿ ಕಂಡಿದೆ. ಉತ್ತರ ಭಾರತವು ಸಹ ಅಪಾರ ಕೊಡುಗೆ ನೀಡಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮೋತಿಲಾಲ್‌ ನೆಹರೂ, ಜವಾಹರ ಲಾಲ್‌ ನೆಹರೂ, ಡಾ. ರಾಜೇಂದ್ರ ಪ್ರಸಾದ್ ಮುಂತಾದವರು ನಿಸ್ವಾರ್ಥದಿಂದ ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ದೊರೆತ ಬಳಿಕವೂ ಪಂಡಿತ ಜವಾಹರಲಾಲ್‌ ನೆಹರೂ, ಇಂದಿರಾಗಾಂಧಿ, ಲಾಲ್‌ ಬಹಾದ್ದೂರ ಶಾಸ್ತ್ರಿ, ಅಟಲ್‌ ಬಿಹಾರಿ ವಾಜಪೇಯಿ, ಡಾ. ಮನಮೋಹನ್‌ ಸಿಂಗ್‌ ಮುಂತಾದ ಮುಖಂಡರು ಅಪಾರ ಕೊಡುಗೆ ನೀಡಿದ್ದಾರೆ’ ಎಂದು ವಿವರಿಸಿದ್ದಾರೆ.

‘ನಾವು ಏಕತೆಯ ಮತ್ತು ಒಗ್ಗಟ್ಟಿನ ಭಾರತದಲ್ಲಿ ನಂಬಿಕೆ ಇಟ್ಟಿದ್ದೇವೆ. ಹೀಗಾಗಿ, ಅಗೌರವ ತೋರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಹೇಳಿದ್ದಾರೆ.

ರಾಜ್ಯಸಭೆಯ ಹಿರಿಯ ಸದಸ್ಯ ಕಪಿಲ್ ಸಿಬಲ್ ಅವರು ಸಹ ಆನಂದ ಶರ್ಮಾ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ.

‘ದೇಶದ ಎಲ್ಲಾ ಭಾಗದ ಮತದಾರರು ಜಾಣರಿದ್ದಾರೆ. ಅವರ ಬುದ್ಧಿವಂತಿಕೆಯನ್ನು ಕಡೆಗಣಿಸಬಾರದು’ ಎಂದು ಕಪಿಲ್‌ ಸಿಬಲ್‌ ಹೇಳಿದ್ದಾರೆ.

ತಿರುವನಂತಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್‌ ಗಾಂಧಿ, ‘15 ವರ್ಷಗಳ ಕಾಲ ಉತ್ತರ ಭಾರತದಲ್ಲಿ ಸಂಸದನಾಗಿದ್ದೆ. ಅಲ್ಲಿನ ರಾಜಕೀಯವೇ ವಿಭಿನ್ನವಾಗಿತ್ತು. ಕೇರಳಕ್ಕೆ ಬಂದ ಮೇಲೆ ದಿಢೀರನೆ ಹೊಸತನ ಕಾಣಿಸಿತು. ಇಲ್ಲಿನ ಜನರು ನೈಜ ವಿಷಯಗಳು ಮತ್ತು ಸಮಸ್ಯೆಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಕೇವಲ ತೋರಿಕೆಯ ವಿಷಯಗಳ ಬದಲು ನೈಜ ವಿಷಯಗಳ ಬಗ್ಗೆ ಗಮನಹರಿಸುತ್ತಾರೆ’ ಎಂದು ಹೇಳಿದ್ದರು.

ಈ ಹೇಳಿಕೆ ಬಳಿಕ ವಾಗ್ದಾಳಿ ನಡೆಸಿದ್ದ ಬಿಜೆಪಿ ಮುಖಂಡರು, ‘ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವಕಾಶವಾದಿ. ಕೇರಳದಲ್ಲಿ ಮಾಡಿದ ಭಾಷಣದಲ್ಲಿ ಉತ್ತರ ಭಾರತೀಯರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ’ ಎಂದು ಟೀಕಿಸಿದ್ದರು.

ಉತ್ತರ ಪ್ರದೇಶದ ಅಮೇಠಿ ಕ್ಷೇತ್ರವನ್ನು ರಾಹುಲ್‌ ಗಾಂಧಿ 2004ರಿಂದ ಪ್ರತಿನಿಧಿಸುತ್ತಿದ್ದರು. ಬಳಿಕ, 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಅಮೇಠಿ ಮತ್ತು ಕೇರಳದ ವಯನಾಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಅಮೇಠಿಯಲ್ಲಿ ಪರಾಭವಗೊಂಡಿದ್ದ ರಾಹುಲ್‌, ವಯನಾಡುನಲ್ಲಿ ಜಯಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT