ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಅವರಂತೆ ಸುಳ್ಳು ಹೇಳಲ್ಲ: ರಾಹುಲ್‌ ಗಾಂಧಿ

Last Updated 31 ಮಾರ್ಚ್ 2021, 22:48 IST
ಅಕ್ಷರ ಗಾತ್ರ

ಛಾಯಾಗಾಂವ್‌/ಭರ್ಕೆತ್ರಿ (ಅಸ್ಸಾಂ) (ಪಿಟಿಐ): ಬಿಜೆಪಿ ವಿರುದ್ಧದ ವಾಗ್ದಾಳಿಯನ್ನು ಇನ್ನಷ್ಟು ಹರಿತಗೊಳಿಸಿರುವ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ, ತಾವು ಪ್ರಧಾನಿ ನರೇಂದ್ರ ಮೋದಿಯವರ ಹಾಗೆ ದಿನದ 24 ತಾಸೂ ಸುಳ್ಳು ಹೇಳುವ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.

ಸತ್ಯ ಏನು ಎಂದು ಅರಿಯಬೇಕಿದ್ದರೆ ತಮ್ಮ ಮಾತು ಕೇಳುವಂತೆ ಅಸ್ಸಾಂನ ಛಾಯಾಗಾಂವ್‌ ಕ್ಷೇತ್ರದಲ್ಲಿನ ಪ್ರಚಾರ ಭಾಷಣದಲ್ಲಿ ಅವರು ಹೇಳಿದರು.

‘ನಾನು ಸುಳ್ಳು ಹೇಳುವುದಕ್ಕಾಗಿ ಇಲ್ಲಿಗೆ ಬಂದಿಲ್ಲ. ಏಕೆಂದರೆ ನನ್ನ ಹೆಸರು ನರೇಂದ್ರ ಮೋದಿ ಅಲ್ಲ. ಅಸ್ಸಾಂ, ರೈತರು ಅಥವಾ ಇನ್ನಾವುದೇ ವಿಷಯದ ಬಗ್ಗೆ ಅವರು ಹೇಳುವ ಸುಳ್ಳನ್ನು ಕೇಳಲು ಬಯಸಿದರೆ ಟಿ.ವಿ. ಹಾಕಿ ನೋಡಿ. ವಾರದ ಎಲ್ಲ ದಿನವೂ ಅವರು ಸುಳ್ಳು ಹೇಳುತ್ತಿರುತ್ತಾರೆ. ಸತ್ಯ ಏನೆಂದು ತಿಳಿಯಬೇಕಿದ್ದರೆ ನನ್ನ ಮಾತು ಕೇಳಿ’ ಎಂದು ರಾಹುಲ್‌ ಹೇಳಿದ್ದಾರೆ.

‘ವಿವಿಧ ಭಾಷೆ, ಜನಾಂಗ, ಸಿದ್ಧಾಂತಗಳ ಜನರು ಶಾಂತಿಯುತವಾಗಿ ನನ್ನ ಮಾತು ಕೇಳಿದ್ದಾರೆ. ಇದು ಅಸ್ಸಾಂ. ಆದರೆ ಸಹೋದರರು ಪರಸ್ಪರ ಬಡಿದಾಡುವಂತೆ ಬಿಜೆಪಿ ಮಾಡುತ್ತಿದೆ. ದ್ವೇಷ ಹರಡುತ್ತಿದೆ’ ಎಂದು ರಾಹುಲ್ ಆರೋಪಿಸಿದ್ದಾರೆ.

ದೇಗುಲ ಭೇಟಿ: ರಾಹುಲ್‌ ಗಾಂಧಿ ಅವರು ಗುರುವಾರ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿನೀಡಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಾ, ‘ಕೊಟ್ಟ ಭರವಸೆಗಳನ್ನು ಈಡೇರಿಸಿದ ಇತಿಹಾಸ ನಮ್ಮ ಪಕ್ಷಕ್ಕೆ ಇದೆ’ ಎಂದರು.

‘ಸಿಎಎ ರದ್ದತಿ, ಐದು ವರ್ಷಗಳಲ್ಲಿ ಐದು ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ, ಪ್ರತಿ ಮನೆಗೆ 200 ಯೂನಿಟ್‌ಗಳಷ್ಟು ಉಚಿತ ವಿದ್ಯುತ್‌, ಚಹಾ ತೋಟದ ಕಾರ್ಮಿಕರ ವೇತನ ಹೆಚ್ಚಳ ಹಾಗೂ ಗೃಹಿಣಿಯರಿಗೆ ಮಾಸಿಕ ₹ 2000 ಸಹಾಯಧನಗಳ ಐದು ‘ಖಾತರಿ’ಗಳನ್ನು (ಗ್ಯಾರಂಟಿ) ನಾವು ನೀಡಿದ್ದೇವೆ. ಕೊಟ್ಟ ಮಾತನ್ನು ನಾವು ಉಳಿಸಿಕೊಳ್ಳುತ್ತೇವೆ. ಪಂಜಾಬ್‌, ಕರ್ನಾಟಕ ಹಾಗೂ ಛತ್ತೀಸಗಡದಲ್ಲಿ ರೈತರ ಸಾಲ ಮನ್ನಾದ ಭರವಸೆ ನೀಡಿದ್ದೆವು, ಅದರಂತೆ ನಡೆದುಕೊಂಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT