ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಾನಿಪುರ: ಉಪಚುನಾವಣೆ ತಡೆಗೆ ನಕಾರ

Last Updated 28 ಸೆಪ್ಟೆಂಬರ್ 2021, 16:40 IST
ಅಕ್ಷರ ಗಾತ್ರ

ಕೋಲ್ಕತ್ತ: ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿದ ಪ್ರಕಾರ ಭವಾನಿಪುರ ವಿಧಾನಸಭಾ ಕ್ಷೇತ್ರಕ್ಕೆ ಗುರುವಾರವೇ ಉಪಚುನಾವಣೆ ನಡೆಯಲಿದೆ.

ನಿಗದಿಯಾದ ದಿನದಂದೇ ಚುನಾವಣೆ ನಡೆಸುವಂತೆ ಕಲ್ಕತ್ತ ಹೈಕೋರ್ಟ್‌ ಸೂಚಿಸಿದ್ದು, ಈ ಹಂತದಲ್ಲಿ ಚುನಾವಣಾ ಆಯೋಗದ ನಿರ್ಧಾರದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳಿದೆ.

ರಾಜ್ಯದಲ್ಲಿ ಎದುರಾಗಬಹುದಾದ ಸಾಂವಿಧಾನಿಕ ಬಿಕ್ಕಟ್ಟುಗಳನ್ನು ತಪ್ಪಿಸುವುದಕ್ಕಾಗಿ ಭವಾನಿಪುರದಲ್ಲಿ ತುರ್ತಾಗಿ ಚುನಾವಣೆ ನಡೆಸಬೇಕು ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದ ರಾಜ್ಯದ ಮುಖ್ಯ ಕಾರ್ಯದರ್ಶಿ ಎಚ್‌.ಕೆ. ದ್ವಿವೇದಿ ಅವರನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿತು.

ತಾವು ಸರ್ಕಾರಿ ಅಧಿಕಾರಿ ಎಂಬುದನ್ನು ಮರೆತು ರಾಜಕೀಯ ಪಕ್ಷವೊಂದರ ಸೇವಕನಂತೆ ತಮ್ಮನ್ನು ಬಿಂಬಿಸಿಕೊಂಡಿದ್ದಾರೆ. ಅಲ್ಲದೇ ಚುನಾವಣಾ ಆಯೋಗವನ್ನೂ ದಾರಿ ತಪ್ಪಿಸಲು ನೋಡಿದ್ದಾರೆ ಎಂದು ಎಂದು ಹರಿಹಾಯ್ದಿತು.

ಮುಖ್ಯ ಕಾರ್ಯದರ್ಶಿ ಶಿಫಾರಸಿನಂತೆ ಚುನಾವಣೆಯನ್ನು ನಡೆಸಲು ಮುಂದಾಗಿದ್ದ ಚುನಾವಣಾ ಆಯೋಗದ ನಿರ್ಧಾರವನ್ನು ರದ್ದುಮಾಡಬೇಕು ಎಂದು ಆಗ್ರಹಿಸಿ, ಫಯಾನ್‌ ಸಿನ್ಹಾ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್‌ ಹಾಗೂ ರಾಜರ್ಷಿ ಭಾರದ್ವಾಜ್‌ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ, ರಾಜ್ಯದಲ್ಲಿ ಕೋವಿಡ್‌ ಹಾಗೂ ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿರುವುದಾಗಿ ಮುಖ್ಯಕಾರ್ಯದರ್ಶಿಯು ಆಯೋಗಕ್ಕೆ ನೀಡಿದ ಮಾಹಿತಿಯೂ ಸತ್ಯಕ್ಕೆ ದೂರವಾಗಿದೆ. ಯಾವುದೇ ಪಕ್ಷವು ಅಧಿಕಾರದಲ್ಲಿರಲಿ, ಅವರು ಒಬ್ಬ ಸರ್ಕಾರಿ ಅಧಿಕಾರಿಯಾಗಿ ಮಾತ್ರ ಕಾರ್ಯನಿರ್ವಹಿಸಬೇಕು ಎಂದು ಕಟುವಾಗಿ ಹೇಳಿತು.

ಈ ಅರ್ಜಿಗೆ ಸಂಬಂಧಪಟ್ಟ ವಿಸ್ತೃತ ವಿಷಯಗಳನ್ನು ಪರಿಗಣಿಸಲು, ಮುಂದಿನ ವಿಚಾರಣೆಯನ್ನು ನ.17ಕ್ಕೆ ನಿಗದಿಪಡಿಸಿತು.

ಚುನಾಯಿತ ಸದಸ್ಯರೊಬ್ಬರು ಯಾವುದೇ ಕಾರಣವಿಲ್ಲದೇ ರಾಜೀನಾಮೆ ನೀಡಿ, ಆ ಕ್ಷೇತ್ರದಲ್ಲಿ ಮತ್ತೆ ಚುನಾವಣೆಗೆ ಕಾರಣರಾಗುತ್ತಾರೆ. ಮತ್ತೆ ಚುನಾವಣೆ ನಡೆಸಲು ಬೊಕ್ಕಸಕ್ಕೆ ಆಗುವ ಹೊರೆಯನ್ನು ಭರಿಸುವವರು ಯಾರು ಎಂಬಂಥ ವಿಷಯಗಳ ಬಗ್ಗೆಯೂ ಮುಂದಿನ ವಿಚಾರಣೆಯಲ್ಲಿ ನಿರ್ಧರಿಸುವುದಾಗಿ ನ್ಯಾಯಪೀಠ ಹೇಳಿತು.

ಟಿಎಂಸಿಯ ಸೋವನ್‌ದೇವ್‌ ಚಟ್ಟೋಪಾಧ್ಯಾಯ,ಭವಾನಿಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ತಮ್ಮ ನಾಯಕಿ ಮಮತಾ ಬ್ಯಾನರ್ಜಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT