ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UP Election 2022: ನೋಟಾದತ್ತ ಲಖಿಂಪುರ ರೈತರ ಚಿತ್ತ

ಬಿಜೆಪಿ, ಎಸ್‌ಪಿಯಿಂದ ವಂಚನೆ: ಯಾವ ಪಕ್ಷಕ್ಕೂ ಮತ ಹಾಕದಿರುವ ಬಗ್ಗೆ ಚಿಂತನೆ
Last Updated 1 ಫೆಬ್ರುವರಿ 2022, 19:31 IST
ಅಕ್ಷರ ಗಾತ್ರ

ಲಖಿಂಪುರ ಖೇರಿ (ಉತ್ತರ ಪ್ರದೇಶ) (ಪಿಟಿಐ): ಕಳೆದ ಅಕ್ಟೋಬರ್‌ನಲ್ಲಿ ಎಸ್‌ಯುವಿ ಹರಿಸಿ ನಾಲ್ವರು ರೈತರ ಹತ್ಯೆ ಪ್ರಕರಣದ ಆಘಾತ ಲಖಿಂಪುರ ಖೇರಿಯ ರೈತರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಈ ಪ್ರದೇಶದ ರೈತರು ಈ ಬಾರಿ ನೋಟಾ (ಯಾರಿಗೂ ಮತ ಇಲ್ಲ) ಮತ ಹಾಕುವ ಯೋಚನೆಯಲ್ಲಿ ಇದ್ದಾರೆ.

ರಾಜ್ಯದ ಎರಡು ಮುಖ್ಯ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಎಸ್‌ಪಿ ತಮಗೆ ಮೋಸ ಮಾಡಿವೆ. ಇತರ ಪಕ್ಷಗಳು ಲೆಕ್ಕಕ್ಕೆ ಇಲ್ಲ ಎಂದು ಇಲ್ಲಿನ ರೈತರು ಹೇಳಿದ್ದಾರೆ.

ಲಖಿಂಪುರ ಖೇರಿ ಜಿಲ್ಲೆಯ ಜನರಲ್ಲಿ ಹೆಚ್ಚಿನವರು ರೈತರು. ಕೃಷಿ ಕಾಯ್ದೆಗಳ ಕಾರಣಕ್ಕಾಗಿ ಬಿಜೆಪಿಗೆ ಮತ ಹಾಕಲು ಇಲ್ಲಿನ ರೈತರಿಗೆ ಮನಸ್ಸಿಲ್ಲ. ಸಕ್ಕರೆ ಕಾರ್ಖಾನೆಯ ಮಾಲೀಕರು ರೈತರಿಗೆ ನೀಡಬೇಕಿದ್ದ ₹2,000 ಕೋಟಿ ಬಡ್ಡಿಯನ್ನು ಈ ಹಿಂದೆ ಅಧಿಕಾರದಲ್ಲಿ ಇದ್ದ ಎಸ್‌ಪಿ ಸರ್ಕಾರ ರದ್ದು ಮಾಡಿತ್ತು. ಹಾಗಾಗಿ, ಆ ಪಕ್ಷಕ್ಕೂ ಮತ ಹಾಕುವುದಿಲ್ಲ ಎಂದು ರೈತರು ಹೇಳುತ್ತಿದ್ದಾರೆ.

ಚುನಾವಣೆ ಸಮಯದಲ್ಲಿ ಭರವಸೆ ನೀಡುವ ರಾಜಕಾರಣಿಗಳು, ಚುನಾವಣೆಯ ಬಳಿಕ ಯಾವುದೇ ಕೆಲಸ ಮಾಡುವುದಿಲ್ಲ. ಹಾಗಾಗಿ, ಈ ಬಾರಿ ನೋಟಾ ಮತ ಚಲಾಯಿಸುವುದಾಗಿ ಹಲವು ರೈತರು ಹೇಳಿದ್ದಾರೆ.

ಬಿಜೆಪಿ, ಎಸ್‌ಪಿ, ಬಿಎಸ್‌ಪಿ ಮತ್ತು ಕಾಂಗ್ರೆಸ್ ಪಕ್ಷಗಳು ಹುಸಿ ಭರವಸೆ ಕೊಡುತ್ತವೆ. ಚುನಾವಣೆ ಸಮಯದಲ್ಲಿ ತಮ್ಮನ್ನು ವಸ್ತುಗಳ ರೀತಿ ಬಳಸುತ್ತವೆ ಎಂದು ಮರೌಚ ಗ್ರಾಮದ ರೈತ ಜಗಪಾಲ್‌ ಧಿಲ್ಲೋನ್‌ ಹೇಳುತ್ತಾರೆ.

‘ಯಾವುದೇ ರಾಜಕೀಯ ಪಕ್ಷದ ಮೇಲೆ ನಮಗೆ ಭರವಸೆ ಇಲ್ಲ. ಅಕ್ಟೋಬರ್ 3ರಂದು ತಿಕೋನಿಯಾದಲ್ಲಿ ನಡೆದ ಘಟನೆಯ ಫಲವನ್ನು ಬಿಜೆಪಿ ಅನಭವಿಸಲೇಬೇಕು’ ಎಂದು ಅವರು ಹೇಳಿದ್ದಾರೆ.

ಲಖಿಂಪುರ ಖೇರಿಯ ತಿಕೋನಿಯಾ ಗ್ರಾಮದಲ್ಲಿ ಅಕ್ಟೋಬರ್‌ 3ರಂದು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಎಸ್‌ಯುವಿ ಹರಿಸಿ ನಾಲ್ವರು ರೈತರು ಹತ್ಯೆ ಮಾಡಲಾಗಿತ್ತು. ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಮಗ ಆಶಿಶ್‌ ಮಿಶ್ರಾ ಅವರು ಈ ಎಸ್‌ಯುವಿ ಚಲಾಯಿಸುತ್ತಿದ್ದರು ಎಂದು ಹೇಳಲಾಗಿದೆ.

ಕೇವಲ್‌ ಸಿಂಗ್ ಮತ್ತು ಅವರ ಇಬ್ಬರು ಸಹೋದರರಿಗೆ ಜತೆಯಾಗಿ 45 ಎಕರೆ ಜಮೀನು ಇದೆ. ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ನೀಡಬೇಕಿದ್ದ ₹2,000 ಕೋಟಿ ಬಡ್ಡಿಯನ್ನು ಅಖಿಲೇಶ್‌ ಯಾದವ್‌ ನೇತೃತ್ವದ ಸರ್ಕಾರವು ರದ್ದು ಮಾಡಿದ್ದನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಕೇವಲ್‌ ಸಿಂಗ್‌ ಹೇಳಿದ್ದಾರೆ.

ಆದರೆ, ರೈತರ ಆದಾಯವನ್ನು ದುಪ್ಪಟ್ಟು ಮಾಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಆಳ್ವಿಕೆಯಲ್ಲಿ ರೈತರ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಯಿತು ಎಂದು ಕೇವಲ್‌ ಸಿಂಗ್‌ ವಿವರಿಸಿದ್ದಾರೆ.

1966ರ ಕಬ್ಬು ನಿಯಂತ್ರಣ ಆದೇಶದ ಪ್ರಕಾರ, ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿ ಮಾಡಬೇಕಿರುವ ಮೊತ್ತವನ್ನು 14 ದಿನದಲ್ಲಿ ಪಾವತಿ ಮಾಡದೇ ಇದ್ದರೆ ಅದಕ್ಕೆ ಶೇ 15ರಷ್ಟು ಬಡ್ಡಿ ಪಾವತಿಸಬೇಕು. ವಿವಿಧ ಕಾರ್ಖಾನೆಗಳು ಪಾವತಿಸಬೇಕಿದ್ದ ಮೊತ್ತವು ₹2,000 ಕೋಟಿ ಆಗಿತ್ತು. ಸಕ್ಕರೆ ಕಾರ್ಖಾನೆಗಳು ಸಂಕಷ್ಟದ ಸ್ಥಿತಿಯಲ್ಲಿವೆ ಎಂಬ ಕಾರಣಕ್ಕೆ ಬಡ್ಡಿಯನ್ನು ಮನ್ನಾ ಮಾಡಿ ಸರ್ಕಾರ ಆದೇಶಿಸಿತ್ತು.

ಈ ಬಾರಿ ಯಾರಿಗೆ ಮತ ಹಾಕುತ್ತೀರಿ ಎಂಬ ಪ್ರಶ್ನೆಗೆ ಕೇವಲ್‌ ಸಿಂಗ್‌ ಉತ್ತರಿಸಿದ್ದು ಹೀಗೆ: ‘ಬಿಜೆಪಿ ಮತ್ತು ಎಸ್‌ಪಿಯ ವಿಚಾರದಲ್ಲಿ ಯಾವುದೇ ಭರವಸೆ ಉಳಿದಿಲ್ಲ. ಉಳಿದ ಪಕ್ಷಗಳಿಗೆ ಅರ್ಥವೇ ಇಲ್ಲ. ದೊಡ್ಡ ಸಂಖ್ಯೆಯ ರೈತರು ಮತ ಹಾಕದೇ ಇರಲು ನಿರ್ಧರಿಸಿದ್ದಾರೆ. ನೋಟಾ ಮತ ಹಾಕುವ ಬಗ್ಗೆ ಯೋಚನೆ ಇದೆ’.

ಬಿಜೆಪಿ ಮತ್ತು ಎಸ್‌ಪಿ ರೈತರನ್ನು ವಂಚಿಸಿವೆ ಎಂದು ರಾಷ್ಟ್ರೀಯ ಕಿಸಾನ್‌ ಮಜ್ದೂರ್‌ ಸಂಘಟನೆಯ ವಿ.ಎಂ. ಸಿಂಗ್‌ ಅವರೂ ಹೇಳಿದ್ದಾರೆ.

ಲಖಿಂಪುರ ಖೇರಿಯ ಶೇ 75ರಷ್ಟು ರೈತರು ಕಬ್ಬು ಬೆಳೆಯುತ್ತಾರೆ. ಇಲ್ಲಿ ಒಂಬತ್ತು ಸಕ್ಕರೆ ಕಾರ್ಖಾನೆಗಳಿವೆ.

‘ನಮ್ಮ ಬಾಕಿ ನಮಗೆ ದೊರೆಯಲಿದೆ ಎಂದು ನರೇಂದ್ರ ಮೋದಿ ಅವರು ಭರವಸೆ ಕೊಟ್ಟಿದ್ದರು. ಬಾಕಿ ದೊರೆಯುವುದನ್ನು ತಮ್ಮ‍ ಪಕ್ಷವು ಖಚಿತಪಡಿಸಲಿದೆ ಎಂದಿದ್ದರು. ಆದರೆ, ಐದು ವರ್ಷವಾದರೂ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ’ ಎಂದು ರೈತ ನಾಯಕ ಅಂಜನಿ ದೀಕ್ಷಿತ್‌ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT