ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸ ಸರೋವರ, ಪಿಒಕೆ ಮರಳಿ ಸಿಗಲೆಂದು ನಿತ್ಯ ಬೆಳಿಗ್ಗೆ ಪ್ರಾರ್ಥಿಸಿ: RSS ನಾಯಕ

Last Updated 5 ನವೆಂಬರ್ 2022, 15:42 IST
ಅಕ್ಷರ ಗಾತ್ರ

ಜಮ್ಮು: ಚೀನಾ ಮತ್ತು ಪಾಕಿಸ್ತಾನ ದೇಶಗಳು ಆಕ್ರಮಿಸಿಕೊಂಡಿರುವ ಕೈಲಾಸ ಮಾನಸ ಸರೋವರ ಮತ್ತು ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂದಿರುಗಿ ಪಡೆಯಲು ದೇಶದ ನಾಗರಿಕರು ಪ್ರತಿದಿನ ಬೆಳಿಗ್ಗೆ ವಿಶೇಷ ಪ್ರಾರ್ಥನೆ ಸಲ್ಲಿಸಬೇಕು ಎಂದು ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ದೇಶದ ಜನರಲ್ಲಿ ಶನಿವಾರ ಮನವಿ ಮಾಡಿದ್ದಾರೆ.

ಪ್ರಾದೇಶಿಕ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಕಳೆದ 70 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಆಳಿದವರೇ ಇಲ್ಲಿನ ಸಾವು ಮತ್ತು ವಿನಾಶಕ್ಕೆ ಕಾರಣಕರ್ತರು ಎಂದು ‌ಆರೋಪಿಸಿದ್ದಾರೆ.

‘ಕೈಲಾಸ ಮಾನಸ ಸರೋವರವು ಭಾರತದ ಭಾಗವಾಗಿತ್ತು. ಅದು ಈಗ (ಚೀನಾದ) ಆಕ್ರಮಣಕ್ಕೀಡಾಗಿದೆ. ಅದು ಭಾರತಕ್ಕೆ ಸೇರಬೇಕು. ಭವಿಷ್ಯದಲ್ಲಿ ಈ ಕಾರ್ಯ ಆಗುತ್ತದೆ ಎಂದು ದೇಶದ ಬಹುಪಾಲು ಜನರು ನಂಬಿದ್ದಾರೆ' ಎಂದು ಇಂದ್ರೇಶ್‌ ಕುಮಾರ್ ಹೇಳಿದರು.

ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗಿನ ಭೇಟಿಯ ಬಗ್ಗೆ ಮಾತನಾಡಿದ ಅವರು, ಜಮ್ಮು ಕಾಶ್ಮೀರ ಮತ್ತು ಪಾಕ್ ಆಕ್ರಮಿತ ಜಮ್ಮು ಕಾಶ್ಮೀರದ (ಪಿಒಜೆಕೆ) ಪರಿಸ್ಥಿತಿಯ ಬಗ್ಗೆ ಲೆಫ್ಟಿನೆಂಟ್‌ ಗವರ್ನರ್‌ ಜೊತೆ ಸಂವಾದ ನಡೆಸಿದ್ದಾಗಿ ಹೇಳಿದರು.

‘ಪಾಕ್‌ ಆಕ್ರಮಿತ ಜಮ್ಮು ಕಾಶ್ಮೀರ ದೇಶದ ಅವಿಭಾಜ್ಯ ಭಾಗವಾಗಿದೆ. ಕೈಲಾಸ ಮಾನಸ ಸರೋವರ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಲು ಎಲ್ಲರೂ ಪ್ರತಿದಿನ ಬೆಳಿಗ್ಗೆ ಪ್ರಾರ್ಥಿಸಬೇಕೆಂದು ನಾನು ವಿನಂತಿಸುತ್ತೇನೆ. ಪ್ರಾರ್ಥನೆಗಳಿಗೆ ಶಕ್ತಿಯಿದೆ ಮತ್ತು ನಾವು ಕೈಲಾಸ ಮಾನಸ ಸರೋವರಕ್ಕಾಗಿ ಪ್ರಾರ್ಥಿಸಬೇಕು. ಪಾಕ್‌ ಆಕ್ರಮಿತ ಕಾಶ್ಮೀರ ದೇಶದ ಭಾಗವಾಗಬೇಕು’ ಎಂದು ಅವರು ಹೇಳಿದರು.

‘ಜನರು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ನಂಬಿಕೆ ಇಡಬೇಕು. ಚೀನಾವನ್ನು ತಡೆಯುವ ಗುರಿಯನ್ನು ಹೊಂದಿರುವ ಅದರ ನೀತಿಗಳು ಮತ್ತು ಕ್ರಮಗಳಿಗೆ ಸಂಪೂರ್ಣ ಬೆಂಬಲವನ್ನು ನೀಡಬೇಕು’ ಎಂದು ಅವರು ಹೇಳಿದರು.

‘ಚೀನಾ ವಿಸ್ತರಣಾವಾದವನ್ನು ಅನುಸರಿಸುತ್ತಿದೆ. ಆದರೆ ವಿಸ್ತರಣಾ ಮನೋಭಾವ ಹೊಂದಿರುವವರನ್ನು ತಡೆಯುವುದು ನಮ್ಮ ನೀತಿಯಾಗಿದೆ’ ಎಂದು ಆರ್‌ಎಸ್‌ಎಸ್ ನಾಯಕ ಇಂದ್ರೇಶ್‌ ಕುಮಾರ್‌ ಹೇಳಿದರು. ‌

ಕಾಶ್ಮೀರವಿಲ್ಲದೆ ದೇಶ ಅಪೂರ್ಣ ಎಂದು ಪಾಕಿಸ್ತಾನದ ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಕರಾಚಿ, ನನಕಾನ ಸಾಹಿಬ ಮತ್ತು ಶಾರದ ಪೀಠಗಳಿಲ್ಲದೆ ಭಾರತವೂ ಅಪೂರ್ಣ ಎಂದು ಭಾರತದ ಸಾಮಾನ್ಯ ಜನರು ಅಭಿಪ್ರಾಯಪಟ್ಟಿದ್ದಾರೆ ಎಂದು ಇಂದ್ರೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT