ಶನಿವಾರ, ಜನವರಿ 29, 2022
19 °C

ಮುಂಬೈ: 9 ವಿದೇಶಿ ಪ್ರಯಾಣಿಕರಲ್ಲಿ ಕೋವಿಡ್‌ ದೃಢ– ಬರಬೇಕಿದೆ ಓಮೈಕ್ರಾನ್‌ ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮುಂಬೈ: ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ದಕ್ಷಿಣ ಆಫ್ರಿಕಾದ ಒಬ್ಬ ನಾಗರಿಕ ಸೇರಿದಂತೆ ಒಂಬತ್ತು ವಿದೇಶಿ ಪ್ರಯಾಣಿಕರಲ್ಲಿ ಕೋವಿಡ್‌ ಸೋಂಕು ಇರುವುದು ದೃಢಪಟ್ಟಿದೆ. 

ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್‌ ಸೋಂಕಿನ ಆತಂಕದ ನಡುವೆಯೇ ಈ ಮಾಹಿತಿ ಹೊರಬಂದಿರುವುದು ಮುಂಬೈ ಮಹಾನಗರ ಪಾಲಿಕೆಗೆ(ಬಿಎಂಸಿ) ತಲೆನೋವಾಗಿ ಪರಿಣಮಿಸಿದೆ. 

ಓಮೈಕ್ರಾನ್‌ ರೂಪಾಂತರದ ಕುರಿತ ಹೆಚ್ಚಿನ ಪರೀಕ್ಷೆಗಾಗಿ ಈ ಎಲ್ಲಾ ಒಂಬತ್ತು ಪ್ರಯಾಣಿಕರ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ ಎಂದು ಬಿಎಂಸಿ ತಿಳಿಸಿದೆ.

ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿಗೆ (ಬಿ.1.1.529) ‘ಓಮೈಕ್ರಾನ್‌’ ಎಂಬ ಹೆಸರಿಡಲಾಗಿದೆ. ಇದು ಜಗತ್ತಿನಾದ್ಯಂತ ಭಾರಿ ಕಳವಳ ಮೂಡಿಸಿದ್ದು, ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ.

ದಕ್ಷಿಣ ಆಫ್ರಿಕಾ, ಬೋಟ್ಸ್‌ವಾನಾ, ಜಿಂಬಾಬ್ವೆ, ನಮೀಬಿಯಾ ಮತ್ತು ಲೆಸೊಟೊ ದೇಶದಲ್ಲಿ ಈ ತಳಿಯ ವೈರಾಣು ತಗುಲಿರುವ ಪ್ರಕರಣಗಳು ಪತ್ತೆಯಾಗಿವೆ. ದಕ್ಷಿಣ ಆಫ್ರಿಕಾದಲ್ಲಿ ಈ ತಿಂಗಳ ಆರಂಭದಿಂದ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಏರಿಕೆಗೆ ಓಮೈಕ್ರಾನ್‌ ತಳಿಯೇ ಕಾರಣವಾಗಿರಬಹುದು. ದಕ್ಷಿಣ ಆಫ್ರಿಕಾದ ನೆರೆಯ ದೇಶಗಳಿಗೂ ಈ ರೂಪಾಂತರ ತಳಿಯು ಹರಡಿರಬಹದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕಾ ಘಟಕವು ಹೇಳಿದೆ.

ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 9,216 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 391 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು