ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್: ವಿದೇಶದಿಂದ ಬಂದವರಿಗೆ ಹೋಂ ಕ್ವಾರಂಟೈನ್ ಕಡ್ಡಾಯ; ಮುಂಬೈ ಪಾಲಿಕೆ ಕ್ರಮ

Last Updated 4 ಡಿಸೆಂಬರ್ 2021, 11:37 IST
ಅಕ್ಷರ ಗಾತ್ರ

ಮುಂಬೈ: ಕೊರೊನಾವೈರಸ್‌ನ ರೂಪಾಂತರಿ ತಳಿ ಓಮೈಕ್ರಾನ್ ಪ್ರಕರಣಗಳು ದೇಶದಲ್ಲಿಯೂ ವರದಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬೃಹನ್ ಮುಂಬೈ ಮಹಾನಗರ ಪಾಲಿಕೆಯು, ಹೋಂ ಕ್ವಾರಂಟೈನ್‌ಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ವಿದೇಶಗಳಿಂದ ವಾಪಸ್ ಆಗುವ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಕ್ವಾರಂಟೈನ್‌ ಕಡ್ಡಾಯಗೊಳಿಸಿದ್ದು, ನಿಗಾ ಇಡುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ಓಮೈಕ್ರಾನ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿರುವ ದೇಶಗಳಿಂದ ಬರುವ ಪ್ರಯಾಣಿಕರು ತಾವಾಗಿಯೇ ಏಳು ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕು. ನಿಯಮ ಪಾಲನೆಯ ಬಗ್ಗೆ ವಾರ್ಡ್‌ ವಾರ್‌ ರೂಂ (ಡಬ್ಲ್ಯುಡಬ್ಲ್ಯುಆರ್‌) ತಂಡವು ಮೇಲ್ವಿಚಾರಣೆ ನಡೆಸಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಓಮೈಕ್ರಾನ್ ದೃಢಪಟ್ಟ ಮೂರು ಪ್ರಕರಣಗಳು ದೇಶದಲ್ಲಿ ಇದುವರೆಗೆ ವರದಿಯಾಗಿವೆ. ಕರ್ನಾಟಗದಲ್ಲಿ ಎರಡು ಮತ್ತು ಗುಜರಾತ್‌ನಲ್ಲಿ ಒಂದು ಪ್ರಕರಣ ಪತ್ತೆಯಾಗಿವೆ.

ಮಾರ್ಗಸೂಚಿಯಲ್ಲಿರುವ ಅಂಶಗಳು
* ವಿಪತ್ತು ನಿರ್ವಹಣಾ ಘಟಕವು ಅಂತರರಾಷ್ಟ್ರೀಯ ಪ್ರಯಾಣಿಕರ ಪಟ್ಟಿಯನ್ನು ಪ್ರತಿದಿನ ಬೆಳಗ್ಗೆ 10ಕ್ಕೆಡಬ್ಲ್ಯುಡಬ್ಲ್ಯುಆರ್‌ಗೆ ಕಳುಹಿಸಲಿದೆ.
* ಕ್ವಾರಂಟೈನ್‌ ಮಾರ್ಗಸೂಚಿಗೆ ಸಂಬಂಧಿಸಿದಂತೆಪ್ರಯಾಣಿಕರಿಗೆ ಕರೆ ಮಾಡಿ ಡಬ್ಲ್ಯುಡಬ್ಲ್ಯುಆರ್‌ ಮಾಹಿತಿ ನೀಡಲಿದೆ.ಸಭ್ಯತೆಯಿಂದ ನಿಯಮ ಪಾಲಿಸುವುದು ಕಡ್ಡಾಯವೆಂದೂ ತಿಳಿಸಲಿದೆ.
* ಕ್ವಾರಂಟೈನ್‌ನಲ್ಲಿ ಉಳಿಯುವ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಡಬ್ಲ್ಯುಡಬ್ಲ್ಯುಆರ್‌ ನಿಗಾ ಇಡಲಿದ್ದು, ನಿಯಮ ಪಾಲನೆಯನ್ನು ಖಚಿತ ಪಡಿಸಿಕೊಳ್ಳಲು ದಿನದಲ್ಲಿ ಐದು ಬಾರಿವರೆಗೆ ಕರೆ ಮಾಡಿ ವಿಚಾರಿಸಲಿದೆ.
* ಡಬ್ಲ್ಯುಡಬ್ಲ್ಯುಆರ್‌, ನಿಯಮಿತವಾಗಿ ವೈದ್ಯಕೀಯ ತಂಡ ಮತ್ತು ಆಂಬುಲೆನ್ಸ್‌ ಅನ್ನೂ ಕಳುಹಿಸಲಿದೆ.
* ಅಂತರರಾಷ್ಟ್ರೀಯ ಪ್ರಯಾಣಿಕರೊಂದಿಗೆ ಸಂವಹನ ನಡೆಸಲು ವೈದ್ಯರೂ ಕರೆ ಮಾಡಲಿದ್ದು, ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಲಿದ್ದಾರೆ.
* ಕ್ವಾರಂಟೈನ್‌ ಆದೇಶ ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸುವ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ.
* ಏಳು ದಿನಗಳ ಬಳಿಕ ಆರ್‌ಟಿ–ಪಿಸಿಆರ್‌ ಪರೀಕ್ಷೆ ನಡೆಸಲಿದ್ದು, ವರದಿಗೆ ಅನುಸರವಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT