ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್: ಯಾವ ರಾಜ್ಯದಲ್ಲಿ ಎಷ್ಟು ಮಂದಿ ವಿದೇಶಿ ಪ್ರಯಾಣಿಕರು ತಲೆಮರೆಸಿಕೊಂಡರು?

Last Updated 4 ಡಿಸೆಂಬರ್ 2021, 9:49 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮೈಕ್ರಾನ್‌ನಿಂದ ಸೋಂಕು ತಗುಲಿರುವ ಪ್ರಕರಣ ವರದಿಯಾದ ಬೆನ್ನಲ್ಲೇ ವಿದೇಶಗಳಿಂದ ಬಂದ ಪ್ರಯಾಣಿಕರು ವಿಮಾನ ನಿಲ್ದಾಣಗಳಿಂದ ಕಣ್ಮರೆಯಾಗುತ್ತಿರುವುದು ಹಾಗೂ ಕ್ವಾರಂಟೈನ್ ನಿಯಮ ಉಲ್ಲಂಘಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

ಓಮೈಕ್ರಾನ್‌ ಸೋಂಕಿತರಿರುವ ದೇಶಗಳಿಂದ ಬಂದ ಪ್ರಯಾಣಿಕರು ತಪ್ಪು ವಿಳಾಸ ನೀಡಿ ತಲೆಮರೆಸಿಕೊಂಡಿರುವುದು, ಕ್ವಾರಂಟೈನ್‌ ನಿಯಮ ಉಲ್ಲಂಘಿಸುತ್ತಿರುವ ಪ್ರಕರಣಗಳು ಕೆಲವು ರಾಜ್ಯಗಳಲ್ಲಿ ವರದಿಯಾಗಿವೆ. ಆ ಪೈಕಿ ಪ್ರಮುಖವಾದವು ಇಲ್ಲಿವೆ;

* ದೇಶದಲ್ಲಿ ಮೊದಲ ಓಮೈಕ್ರಾನ್ ಪ್ರಕರಣ ಗುರುವಾರ ದೃಢಪಟ್ಟಿತ್ತು. ಬೆಂಗಳೂರಿನ 66 ವರ್ಷದ ಹಾಗೂ 44 ವರ್ಷದ ವ್ಯಕ್ತಿಯಲ್ಲಿ ಓಮೈಕ್ರಾನ್ ಪತ್ತೆಯಾಗಿತ್ತು.

* ವಿದೇಶಗಳಿಂದ ಬಂದ 300 ಮಂದಿಯ ಪೈಕಿ 13 ಜನ ತಪ್ಪು ವಿಳಾಸ ನೀಡಿ ಕಣ್ಮರೆಯಾದ ಪ್ರಕರಣ ಉತ್ತರ ಪ್ರದೇಶದ ಮೀರತ್‌ನಲ್ಲಿ ವರದಿಯಾಗಿದೆ. ಓಮೈಕ್ರಾನ್ ಮೊದಲು ಪತ್ತೆಯಾದ ದಕ್ಷಿಣ ಆಫ್ರಿಕಾದಿಂದ ಬಂದ ಏಳು ಮಂದಿ ಕಣ್ಮರೆಯಾಗಿದ್ದಾರೆ. ಅವರ ಪತ್ತೆಗೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದು ‘ಎಎನ್‌ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.

* ದಕ್ಷಿಣ ಆಫ್ರಿಕಾದಿಂದ ಪಂಜಾಬ್‌ಗೆ ಬಂದ ಮಹಿಳೆಯೊಬ್ಬರು ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಚಂಡೀಗಡದ ಅಧಿಕಾರಿಗಳು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯು ದೇಶಕ್ಕೆ ಆಗಮಿಸಿದ ವೇಳೆ ಅವರ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿತ್ತು. ಹೀಗಾಗಿ ಒಂದು ವಾರ ಮನೆಯಲ್ಲೇ ಪ್ರತ್ಯೇಕ ವಾಸದಲ್ಲಿರುವಂತೆ ಅವರಿಗೆ ಸೂಚಿಸಲಾಗಿತ್ತು. ಆದರೆ, ಅವರು ಮನೆಗೆ ಮರಳುವ ಮೊದಲೇ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

* ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿರುವ 10 ಮಂದಿ ಪ್ರಯಾಣಿಕರು ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ ಎಂದು ಶುಕ್ರವಾರ ವರದಿಯಾಗಿತ್ತು.‌ ದೂರವಾಣಿ ಸಂಪರ್ಕಕ್ಕೂ ಸಿಗದ ಈ ಪ್ರಯಾಣಿಕರು ದಕ್ಷಿಣ ಆಫ್ರಿಕಾದಿಂದ ನವೆಂಬರ್ 12 ಮತ್ತು 22ರ ಅವಧಿಯಲ್ಲಿ ಬೆಂಗಳೂರಿಗೆ ಬಂದಿದ್ದರು.

* ದೆಹಲಿಯಲ್ಲಿ 12 ಮಂದಿಯನ್ನು ಓಮೈಕ್ರಾನ್‌ ಶಂಕೆಯೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲ ಕಳೆದ ಕೆಲವು ದಿನಗಳಲ್ಲಿ ವಿದೇಶಗಳಿಂದ ಬಂದವರು. ಈ ಪೈಕಿ 8 ಮಂದಿಯ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಇತರ ನಾಲ್ವರ ಪರೀಕ್ಷಾ ವರದಿ ಇನ್ನಷ್ಟೇ ಬರಬೇಕಿದೆ. ಮಾದರಿಗಳನ್ನು ವಂಶವಾಹಿ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ ಎಂದು ಆಸ್ಪತ್ರೆ ಮೂಲಗಳನ್ನು ಉಲ್ಲೇಖಿಸಿ ದೃಶ್ಯ ಮಾಧ್ಯಮಗಳು ವರದಿ ಮಾಡಿವೆ.

* ಓಮೈಕ್ರಾನ್ ಪ್ರಕರಣಗಳು ವರದಿಯಾಗಿರುವ ದೇಶಗಳಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿರುವ ಇಬ್ಬರಲ್ಲಿ ಶುಕ್ರವಾರ ಕೋವಿಡ್ ದೃಢಪಟ್ಟಿದೆ. ಇವರ ಮಾದರಿಗಳನ್ನು ವಂಶವಾಹಿ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.

* ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿರುವ ಜೈಪುರದ ಕುಟುಂಬವೊಂದರ 9 ಮಂದಿಯಲ್ಲಿ ಶುಕ್ರವಾರ ಕೋವಿಡ್ ದೃಢಪಟ್ಟಿದೆ. ಈ ಪೈಕಿ ನಾಲ್ವರನ್ನು ಜೈಪುರದ ಆಸ್ಪತ್ರೆಯಲ್ಲಿ ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ. 9 ಮಂದಿಯ ಮಾದರಿಗಳನ್ನು ವಂಶವಾಹಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ‘ಪಿಟಿಐ’ ಸುದ್ದಿಸಂಸ್ಥೆ ವರದಿ ಮಾಡಿದೆ.

* ದೆಹಲಿ, ಚಂಡೀಗಡ, ಮುಂಬೈಯಲ್ಲಿ ಈ ವಾರ 18 ಇತರ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಸೋಂಕಿತರೆಲ್ಲ ಕೇಂದ್ರ ಸರ್ಕಾರದ ಓಮೈಕ್ರಾನ್‌ ಸಂಬಂಧಿತ ಮಾರ್ಗಸೂಚಿ ಬಿಡುಗಡೆಯಾಗುವುದಕ್ಕೂ ಮುನ್ನ ವಿದೇಶಗಳಿಂದ ಬಂದಿದ್ದವರು. ಈ ಪೈಕಿ ಮೂವರು ಓಮೈಕ್ರಾನ್ ಪ್ರಕರಣಗಳು ವರದಿಯಾದ ದೇಶಗಳಿಂದ ಬಂದಿದ್ದರು. ಇವರೆಲ್ಲರ ಮಾದರಿಗಳನ್ನೂ ವಂಶವಾಹಿ ಪರೀಕ್ಷೆಗೆ ಕಳುಹಿಸಲಾಗಿದೆ.

ಈ ಮಧ್ಯೆ ಗುಜರಾತ್‌ನಲ್ಲಿಯೂ ಓಮೈಕ್ರಾನ್‌ ಪ್ರಕರಣ ದೃಢಪಟ್ಟಿದೆ. ಜಿಂಬಾಬ್ವೆಯಿಂದ ಜಾಮ್‌ನಗರಕ್ಕೆ ವಾಪಸಾಗಿರುವ 72 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಗುಜರಾತ್ ಆರೋಗ್ಯ ಇಲಾಖೆ ತಿಳಿಸಿದೆ. ಗುಜರಾತ್‌ನಲ್ಲಿ ವರದಿಯಾದ ಮೊದಲ ಓಮೈಕ್ರಾನ್ ಪ್ರಕರಣ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT