ಮಂಗಳವಾರ, ಮಾರ್ಚ್ 28, 2023
32 °C
ಚೈಲ್ಡ್‌ ರೈಟ್ಸ್‌ ಆ್ಯಂಡ್‌ ಯು ಸಂಸ್ಥೆ ವರದಿ

ಮಕ್ಕಳ ಮೇಲೆ ಆನ್‌ಲೈನ್‌ ದೌರ್ಜನ್ಯ: ‘ಶೇ 70ರಷ್ಟು ಪೋಷಕರು ದೂರು ನೀಡುವುದಿಲ್ಲ’

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ತಮ್ಮ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ಪೊಲೀಸರಿಗೆ ದೂರು ನೀಡುವುದಿಲ್ಲ ಎಂದು ಶೇ 70ರಷ್ಟು ಪೋಷಕರು ಹೇಳಿದ್ದಾರೆ.

ಮಕ್ಕಳ ಮೇಲೆ ಆನ್‌ಲೈನ್‌ ವೇದಿಕೆಗಳ ಮೂಲಕ ನಡೆಯುವ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ಚೈಲ್ಡ್‌ ರೈಟ್ಸ್‌ ಆ್ಯಂಡ್‌ ಯು (ಕ್ರೈ) ಹಾಗೂ ಪಟ್ನಾದ ಚಾಣಕ್ಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (ಸಿಎನ್‌ಎಲ್‌ಯು) ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ತಿಳಿದುಬಂದಿದೆ.

‘ಮಕ್ಕಳು ಆನ್‌ಲೈನ್‌ ಲೈಂಗಿಕ ದೌರ್ಜನ್ಯಕ್ಕೆ ಒಳಗಾದರೆ, ನೀವು ಏನು ಮಾಡುತ್ತೀರಿ ಎಂದು ಪೋಷಕರನ್ನು ಕೇಳಲಾಯಿತು. ಅಧ್ಯಯನದಲ್ಲಿ ಭಾಗಿಯಾದ 424 ಪೋಷಕರ ಪೈಕಿ ಶೇ 30ರಷ್ಟು ಪೋಷಕರು ಪೊಲೀಸರ ಬಳಿ ಹೋಗಿ, ದೂರು ನೀಡುತ್ತೇವೆ ಎಂದರೆ, ಶೇ 70ರಷ್ಟು ಪೋಷಕರು ತಾವು ಪೊಲೀಸರ ಬಳಿ ಹೋಗುವುದಿಲ್ಲ ಎಂದಿದ್ದಾರೆ’ ಎಂದು ವರದಿಯಲ್ಲಿ ಹೇಳಲಾಗಿದೆ.

‘ಆನ್‌ಲೈನ್‌ನಲ್ಲಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಕ್ಕಾಗಿ ಇರುವ ಕಾನೂನುಗಳ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಶೇ 16ರಷ್ಟು ಪೋಷಕರು ಹೇಳಿದ್ದಾರೆ’ ಎನ್ನುವ ಅಂಶ ವರದಿಯಲ್ಲಿದೆ.

‘ಅಪರಿಚಿತರಿಂದ ಸಂಪರ್ಕ’: ವಿವಿಧ ಆನ್‌ಲೈನ್‌ ವೇದಿಕೆಗಳ ಮೂಲಕ ತಮ್ಮ ಮಕ್ಕಳನ್ನು ಸಂಪರ್ಕಿಸಲು ಅಪರಿಚಿತರು ಪ್ರಯತ್ನಿಸುತ್ತಿದ್ದಾರೆ. ಸ್ನೇಹ ಬೆಳೆಸುವ ಸಲುವಾಗಿ, ವೈಯಕ್ತಿಕ ಹಾಗೂ ಕುಟುಂಬದ ಮಾಹಿತಿ ಪಡೆದುಕೊಳ್ಳಲು, ಲೈಂಗಿಕ ಚರ್ಚೆ ನಡೆಸಲು ಈ ಮೂಲಕ ಯತ್ನಿಸುತ್ತಿದ್ದಾರೆ ಎಂದು ಶೇ 33ರಷ್ಟು ಪೋಷಕರು ಹೇಳಿದ್ದಾರೆ.

‘ಮಕ್ಕಳ ಮೇಲಿನ ಆನ್‌ಲೈನ್‌ ಲೈಂಗಿಕ ದೌರ್ಜನ್ಯವು ತಮ್ಮ ಮಕ್ಕಳನ್ನೂ ಭಾದಿಸಿದೆ ಎಂದು ಗ್ರಾಮೀಣ ಪ್ರದೇಶದ ಪೋಷಕರು ಅಧಿಕ ಸಂಖ್ಯೆಯಲ್ಲಿ ಹೇಳಿದ್ದಾರೆ. ಹುಡುಗಿಯರು ಹಾಗೂ ಹುಡುಗರು ಇಬ್ಬರೂ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ತಮ್ಮ ಮಕ್ಕಳಿಗೆ ಲೈಂಗಿಕ ಪ್ರಚೋದಕ ಚಿತ್ರ, ವಿಡಿಯೊಗಳನ್ನು ಕಳುಹಿಸಲಾಗಿದೆ. ಜೊತೆಗೆ ತಮ್ಮ ಮಕ್ಕಳೊಂದಿಗೆ ಲೈಂಗಿಕ ಸಂಭಾಷಣೆಗಳನ್ನೂ ನಡೆಸಲಾಗಿದೆ ಎಂದು ಪೋಷಕರು ಹೇಳಿದ್ದಾರೆ’ ಎಂದು ವರದಿ ಹೇಳಿದೆ.

*

ಏಕಾಗ್ರತೆ ಕೊರತೆ, ಶಾಲೆಗೆ ಗೈರಾಗುವುದು (ಶೇ 26), ಶಾಲೆಯಲ್ಲಿ ಅತಿಯಾದ ಮೊಬೈಲ್‌ ಬಳಕೆ (ಶೇ 20.9)– ಇವು ದೌರ್ಜನ್ಯಕ್ಕೆ ಒಳಗಾದ ಮಕ್ಕಳಲ್ಲಿ ಶಿಕ್ಷಕರು ಗಮನಿಸಿರುವ ಅಂಶಗಳು. ಮಹಾರಾಷ್ಟ್ರ, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಮಧ್ಯ ಪ್ರದೇಶದ 384 ಶಿಕ್ಷಕರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು

*

ಮಕ್ಕಳ ಕಳ್ಳಸಾಗಣೆಗೆ ಅಂತರ್ಜಾಲ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ಈ ಅಧ್ಯಯನವು ಸ್ಪಷ್ಟಪಡಿಸಿದೆ. ಆದ್ದರಿಂದ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಮೌಲ್ಯಮಾಪನ ಮಾಡಿ, ಇನ್ನಷ್ಟು ಬಲಗೊಳಿಸಬೇಕು.
–ಸೋಹಾ ಮೊಯಿತ್ರಾ, ನಿರ್ದೇಶಕಿ,ಅಭಿವೃದ್ಧಿ ಬೆಂಬಲ ವಿಭಾಗ, ಚೈಲ್ಡ್‌ ರೈಟ್ಸ್‌ ಆ್ಯಂಡ್‌ ಯು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು