ಶುಕ್ರವಾರ, ಏಪ್ರಿಲ್ 23, 2021
28 °C

ಮೋಟೆರಾ ಕ್ರೀಡಾಂಗಣಕ್ಕೆ ಮಾತ್ರ ಮರುನಾಮಕರಣ, ಕ್ರೀಡಾ ಸಂಕೀರ್ಣಕ್ಕಿಲ್ಲ: ಕೇಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಗುಜರಾತ್‌ನ ನವೀಕೃತ ಸರ್ದಾರ್ ಪಟೇಲ್‌ ಕ್ರೀಡಾಂಗಣವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಗೆ ಮರುನಾಮಕರಣ ಮಾಡಲಾಗುತ್ತಿದೆ ಎನ್ನುವ ವಿವಾದದ ಮಧ್ಯೆ, ಹೆಸರು ಬದಲಾವಣೆಯು ಮೋಟೆರಾ ಕ್ರೀಡಾಂಗಣಕ್ಕೆ ಮಾತ್ರ ಸೀಮಿತವಾಗಿದೆ ಮತ್ತು ಇಡೀ ಕ್ರೀಡಾ ಸಂಕೀರ್ಣಕ್ಕೆ ಸರ್ದಾರ್ ಪಟೇಲ್ ಅವರ ಹೆಸರನ್ನೇ ಮುಂದುವರಿಸಲಾಗಿದೆ ಎಂದು ಸರ್ಕಾರ ಬುಧವಾರ ತಿಳಿಸಿದೆ.

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಅಹಮದಾಬಾದ್‌ನಲ್ಲಿ ವಿಶ್ವದ ಅತಿದೊಡ್ಡ ಕ್ರೀಡಾಂಗಣ ಎಂಬ ಶ್ರೇಯ ಹೊಂದಿರುವ ನರೇಂದ್ರ ಮೋದಿ ಎಂಬ ಹೆಸರನ್ನು ಮರುನಾಮಕರಣ ಮಾಡಿರುವ ಕ್ರೀಡಾಂಗಣವನ್ನು ಉದ್ಘಾಟಿಸಿದರು. ಕೂಡಲೇ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಕೆಲವು ನಾಯಕರು ಸೇರಿದಂತೆ ಹಲವರು ಮರುನಾಮಕರಣ ಮಾಡಿರುವುದು ಸರ್ದಾರ್ ಪಟೇಲ್ ಅವರಿಗೆ ಮಾಡಿದ 'ಅವಮಾನ' ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಿಸಿದರು.

ಈ ಆರೋಪಗಳ ಬಗ್ಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, 'ಮೋಟೆರಾ ಕ್ರೀಡಾಂಗಣವನ್ನು ಮಾತ್ರ ಮರುನಾಮಕರಣ ಮಾಡಲಾಗಿದೆ ಮತ್ತು ಸಂಕೀರ್ಣಕ್ಕೆ ವಲ್ಲಭಭಾಯಿ ಪಟೇಲ್ ಅವರ ಹೆಸರನ್ನೇ ಮುಂದುವರಿಸಲಾಗುತ್ತದೆ' ಎಂದು ಹೇಳಿದರು.

ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಜಾವಡೇಕರ್ ಅವರೊಂದಿಗೆ ಹಾಜರಿದ್ದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಕೂಡ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿ, ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಅವರು ಗುಜರಾತ್‌ನ ಕೆವಾಡಿಯಾದಲ್ಲಿ ನಿರ್ಮಿಸಿರುವ ವಿಶ್ವದ ಅತಿ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆಯನ್ನು ಈವರೆಗೂ ಶ್ಲಾಘಿಸಿದ್ದಾರೆಯೇ ಎಂದು ಪ್ರಶ್ನಿಸಿದರು.

ಜಾಗತಿಕ ಮೆಚ್ಚುಗೆಯನ್ನು ಪಡೆದಿರುವ ವಿಶ್ವದ ಅತಿ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆಯಂತಹ ಪ್ರವಾಸಿ ಸ್ಥಳಕ್ಕೆ ಇಬ್ಬರು ನಾಯಕರು ಇನ್ನೂ ಭೇಟಿ ನೀಡಿಲ್ಲ ಹಾಗೂ ಅದನ್ನು ಹೊಗಳಿಲ್ಲ. ಅವರ ಬಗ್ಗೆ ಇನ್ನೇನು ಹೇಳಲು ಇದೆ? ಎಂದು ಹೇಳಿದರು.

ಪಕ್ಷದ ಮತ್ತೋರ್ವ ರಾಜೀವ ಸತವ್, ಮೋಟೆರಾ ಕ್ರಿಕೆಟ್ ಕ್ರೀಡಾಂಗಣವನ್ನು ಸರ್ದಾರ್ ಪಟೇಲ್‌ ಅವರಿಂದ ನರೇಂದ್ರ ಮೋದಿಗೆ ಮರುನಾಮಕರಣ ಮಾಡುವುದು ಸಂಪೂರ್ಣ ನಾಚಿಕೆಗೇಡು. ನಮ್ಮ ಪ್ರಧಾನಿ ಎಷ್ಟು ಆತ್ಮಶ್ಲಾಘನೀಯವಾಗಿ ಮಾರ್ಪಟ್ಟಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಇದು ಅತಿರೇಕದ ಮತ್ತು ನಿರಂಕುಶ ಸರ್ವಾಧಿಕಾರದ ಸ್ಪಷ್ಟ ಸಂಕೇತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಕ್ರೀಡಾಂಗಣದ ಬಗ್ಗೆ ನೇರವಾಗಿ ಮಾತನಾಡದೆಯೇ ಸರ್ದಾರ್ ಪಟೇಲ್ ಅವರ ಉಲ್ಲೇಖವನ್ನು ಹಿಂದಿಯಲ್ಲಿ ಟ್ವೀಟ್ ಮಾಡಿ, 'ಈ ಮಣ್ಣಿನಲ್ಲಿ ವಿಶಿಷ್ಟವಾದದ್ದು ಇದೆ, ಇದು ಅನೇಕ ಅಡೆತಡೆಗಳ ನಡುವೆಯೂ ಯಾವಾಗಲೂ ಮಹಾನ್ ಆತ್ಮಗಳ ವಾಸಸ್ಥಾನವಾಗಿದೆ' ಎಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು