ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರ ಲಾಂಛನ ಸ್ವರೂಪ ತಿರುಚಿದ ಬಿಜೆಪಿ: ವಿರೋಧ ಪಕ್ಷಗಳು ತೀವ್ರ ಆಕ್ಷೇಪ

ಸಾಮಾಜಿಕ ಕಾರ್ಯಕರ್ತರ ತೀವ್ರ ಆಕ್ಷೇಪ
Last Updated 12 ಜುಲೈ 2022, 19:31 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಷ್ಟ್ರ ಲಾಂಛನದ ಸ್ವರೂಪವನ್ನು ತಿರುಚಿದೆ ಎಂದು ವಿರೋಧ ಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಅಶೋಕ ಸ್ತಂಭದಿಂದ ಆಯ್ಕೆ ಮಾಡಿಕೊಳ್ಳಲಾಗಿರುವ ಲಾಂಛನದಲ್ಲಿರುವ ಸಿಂಹಗಳು ಘನಗಂಭೀರ ಭಾವದಲ್ಲಿವೆ. ಆದರೆ, ನಿರ್ಮಾಣ ಹಂತದಲ್ಲಿರುವ ನೂತನ ಸಂಸತ್ ಭವನದ ಕಟ್ಟಡದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣ ಮಾಡಿರುವ ಲಾಂಛನದಲ್ಲಿರುವ ಸಿಂಹಗಳು ಕೆರಳಿದ ರೂಪದಲ್ಲಿವೆ’ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಲಾಂಛನವನ್ನು ಬದಲಿಸುವಂತೆ ಆಗ್ರಹಿಸಿವೆ.

ನಿರ್ಮಾಣ ಹಂತದ ಕಟ್ಟಡದ ಮೇಲೆ ಸ್ಥಾಪಿಸಲಾಗಿರುವ 9.5 ಟನ್‌ ತೂಕದ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅನಾವರಣ ಮಾಡಿದ್ದರು. ಆ ಕಾರ್ಯಕ್ರಮಕ್ಕೆ ರಾಷ್ಟ್ರಪತಿ, ವಿರೋಧ ಪಕ್ಷಗಳ ನಾಯಕರಿಗೆ ಆಹ್ವಾನ ನೀಡಿರಲಿಲ್ಲ. ಇದಕ್ಕೂ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಮೂಲ ಲಾಂಛನದ ಚಿತ್ರ ಮತ್ತು ಪ್ರಧಾನಿ ಅನಾವರಣ ಮಾಡಿದ ಲಾಂಛನದ ಚಿತ್ರವನ್ನು ವಿರೋಧ ಪಕ್ಷಗಳ ಹಲವು ನಾಯಕರು ಟ್ವೀಟ್ ಮಾಡಿದ್ದಾರೆ. ಜತೆಗೆ ‘ಭಾರತದ ರಾಷ್ಟ್ರ ಲಾಂಛನ (ಅಸಮಂಜಸ ಬಳಕೆ ನಿಷೇಧ) ಕಾಯ್ದೆ–2005’ರಲ್ಲಿರುವ ಲಾಂಛನದ ವಿನ್ಯಾಸವನ್ನೂ ಹಂಚಿಕೊಂಡಿದ್ದಾರೆ.

‘ಇದು ನಮ್ಮ ರಾಷ್ಟ್ರ ಲಾಂಛನಕ್ಕೆ ಮಾಡಿದ ಅವಮಾನ. ಎಡಭಾಗದಲ್ಲಿರುವುದು, ಮೂಲ ಲಾಂಛನದಲ್ಲಿರುವ ಆಕರ್ಷಕ ಮತ್ತು ರಾಜಗಾಂಭೀರ್ಯದಿಂದ ಇರುವ ಸಿಂಹಗಳು. ಬಲಭಾಗದಲ್ಲಿರುವುದು,ನೂತನ ಸಂಸತ್ ಭವನದ ಮೇಲೆ ಸ್ಥಾಪಿಸಲಾಗಿರುವ ಲಾಂಛನದಲ್ಲಿರುವ ಸಿಡಿಗುಟ್ಟುತ್ತಿರುವ ಮತ್ತು ಅನಗತ್ಯವಾಗಿ ಕೆರಳಿರುವ ಸಿಂಹಗಳು. ನಾಚಿಕೆಯಾಗಬೇಕು. ಇದನ್ನು ತಕ್ಷಣವೇ ಬದಲಿಸಿ’ ಎಂದು ಎರಡು ಲಾಂಛನಗಳ ಚಿತ್ರಗಳ ಜೊತೆಗೆ ಟಿಎಂಸಿ ರಾಜ್ಯಸಭಾ ಸದಸ್ಯ ಜವಾಹರ್ ಸರ್ಕಾರ್‌ ಟ್ವೀಟ್‌ ಮಾಡಿದ್ದಾರೆ.

‘ನರೇಂದ್ರ ಮೋದಿ ಜೀ, ಲಾಂಛನದಲ್ಲಿರುವ ಸಿಂಹಗಳ ಮುಖ ನೋಡಿ. ಅವು ಸಾರಾನಾಥದಲ್ಲಿರುವ ಅಶೋಕ
ಸ್ತಂಭದ ಸಿಂಹಗಳನ್ನು ಹೋಲುತ್ತವೆಯೇ ಅಥವಾ ಗಿರ್ ಅರಣ್ಯದ ಸಿಂಹದ ವಿಕೃತರೂಪವನ್ನು ಹೋಲುತ್ತದೆಯೇ ಎಂಬುದನ್ನು ಗಮನಿಸಿ. ಅಗತ್ಯವಿದ್ದರೆ ಅದನ್ನು ಸರಿಪಡಿಸಿ’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧಿರ್ ರಂಜನ್ ಚೌಧರಿ ಟ್ವೀಟ್ ಮಾಡಿದ್ದಾರೆ.

‘ಅಶೋಕ ಸ್ತಂಭದಲ್ಲಿದ್ದ ಸಿಂಹಗಳನ್ನು ರಾಷ್ಟ್ರಲಾಂಛನವಾಗಿ ನಾವು 1950ರಲ್ಲೇ ಅಳವಡಿಸಿಕೊಂಡಿದ್ದೇವೆ. ನಮ್ಮ ಈ ಸಿಂಹಗಳು ಕೆರಳಿದಂತೆ ಮತ್ತು ಕ್ರೋಧಭರಿತವಾಗಿ ಏಕೆ ಕಾಣಬೇಕು’ ಎಂದು ಇತಿಹಾಸ ತಜ್ಞ ಎಸ್‌.ಇರ್ಫಾನ್‌ ಹಬೀಬ್‌ ಪ್ರಶ್ನಿಸಿದ್ದಾರೆ.

ಸರ್ಕಾರ ತಿರುಗೇಟು:ವಿರೋಧ ಪಕ್ಷಗಳ ಈ ಆಕ್ಷೇಪಕ್ಕೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದೆ. ‘ಸೌಂದರ್ಯವು ನೋಡುವವರ ನೋಟದಲ್ಲಿದೆ’ ಎಂದು ಕೇಂದ್ರ ವಸತಿ ಮತ್ತು ನಗರಾಡಳಿತ ಸಚಿವ ಹರದೀಪ್‌ ಸಿಂಗ್‌ ಪುರಿ ಹೇಳಿದ್ದಾರೆ. ‘ಮೂಲ ಲಾಂಛನದ ಯಥಾವತ್ ಪ್ರತಿಕೃತಿಯನ್ನು ಅಷ್ಟು ಎತ್ತರದಲ್ಲಿ ಇರಿಸಿದರೆ, ಅದು ಕಾಣುವುದೇ ಇಲ್ಲ. ಹೀಗಾಗಿ ಅದರ ಗಾತ್ರವನ್ನು ಹೆಚ್ಚಿಸಲಾಗಿದೆ. ವಿರೋಧ ಪಕ್ಷಗಳು ರಾಜಕೀಯ ಕಾರಣಕ್ಕೆ ಇದನ್ನು ವಿವಾದವಾಗಿಸುತ್ತಿವೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಕಾಯ್ದೆ ಹೇಳುವುದೇನು...

ರಾಷ್ಟ್ರ ಲಾಂಛನದ ವಿನ್ಯಾಸ ಹೇಗಿರಬೇಕು ಎಂಬುದನ್ನು ‘ಭಾರತದ ರಾಷ್ಟ್ರ ಲಾಂಛನ (ಅಸಮಂಜಸ ಬಳಕೆ ನಿಷೇಧ) ಕಾಯ್ದೆ–2005’ರ, ‘ವಿವರ ಮತ್ತು ವಿನ್ಯಾಸ’ ಪರಿಚ್ಛೇದದಲ್ಲಿ ವಿವರಿಸಲಾಗಿದೆ.ಈ ಪರಿಚ್ಛೇದದ ಅನುಬಂಧ–1ರಲ್ಲಿ ಲಾಂಛನದ ಒಂದು ವಿನ್ಯಾಸವನ್ನು ನೀಡಲಾಗಿದೆ. ಸರ್ಕಾರಿ ಮುದ್ರೆಗಳು, ಲೆಟರ್‌ಹೆಡ್‌ಗಳಲ್ಲಿ ಬಳಸಲು ರೂಪಿಸಿರುವ ಲಾಂಛನದ ವಿನ್ಯಾಸವನ್ನು ಈ ಅನುಬಂಧದಲ್ಲಿ ನೀಡಲಾಗಿದೆ. ದೊಡ್ಡ ಗಾತ್ರದಲ್ಲಿ ಮರು ತಯಾರಿಸಲು, ಮತ್ತೊಂದು ರೀತಿಯ ವಿನ್ಯಾಸವನ್ನು ನೀಡಲಾಗಿದೆ. ಆ ವಿನ್ಯಾಸದ ಚಿತ್ರವನ್ನು ಇದೇ ಪರಿಚ್ಛೇದದ ಅನುಬಂಧ–2ರಲ್ಲಿ ನೀಡಲಾಗಿದೆ.‘ಅನುಬಂಧ–1 ಮತ್ತು ಅನುಬಂಧ–2ರಲ್ಲಿ ನೀಡಲಾಗಿರುವ ವಿನ್ಯಾಸಗಳಿಗೆ ರಾಷ್ಟ್ರ ಲಾಂಛನವು ಬದ್ಧವಾಗಿರಬೇಕು’ ಎಂದು ‘ವಿವರ ಮತ್ತು ವಿನ್ಯಾಸ’ ಪರಿಚ್ಛೇದದಲ್ಲಿ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT