ಸೋಮವಾರ, ಜುಲೈ 4, 2022
21 °C
ವಿರೋಧ ಪಕ್ಷಗಳು, ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಆಕ್ರೋಶ

ಪೆಗಾಸಸ್‌ ಬೇಹುಗಾರಿಕೆ: ‘ಸುಪ್ರೀಂ, ಸಂಸತ್ತನ್ನು ತಪ್ಪುದಾರಿಗೆಳೆದ ಸರ್ಕಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇಸ್ರೇಲ್‌ನ ಬೇಹುಗಾರಿಕೆ ಕುತಂತ್ರಾಂಶ ಪೆಗಾಸಸ್ ಅನ್ನು ಭಾರತ ಖರೀದಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ವರದಿಯನ್ನು ಇಟ್ಟುಕೊಂಡು ಸರ್ಕಾರದ ಮೇಲೆ ಪ್ರತಿಪಕ್ಷಗಳು ಮುಗಿಬಿದ್ದಿವೆ. ಕಾಂಗ್ರೆಸ್ ಇದನ್ನು ‘ಪ್ರಜಾಪ್ರಭುತ್ವದ ಲಜ್ಜೆಗೆಟ್ಟ ಅಪಹರಣ’ ಮತ್ತು ‘ದೇಶದ್ರೋಹದ ಕೃತ್ಯ’ ಎಂದು ಕರೆದಿದೆ. ಸರ್ಕಾರವು ಸಂಸತ್ತನ್ನು ವಂಚಿಸಿರುವುದಲ್ಲದೇ, ಸುಪ್ರೀಂ ಕೋರ್ಟನ್ನೂ ದಾರಿ ತಪ್ಪಿಸಿದೆ ಎಂದು ಆರೋಪಿಸಲಾಗಿದೆ. 

ಪ್ರತಿಪಕ್ಷ ಮಾತ್ರವಲ್ಲದೇ, ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರಿಂದಲೂ ಕೇಂದ್ರ ಸರ್ಕಾರವು ಟೀಕೆಗೆ ಗುರಿಯಾಗಿದೆ. ‘ಸರ್ಕಾರವು ಸುಪ್ರೀಂಕೋರ್ಟ್ ಮತ್ತು ಸಂಸತ್ತಿನ ದಾರಿತಪ್ಪಿಸಿದೆ’ ಎಂದು ವರದಿ ಸೂಚ್ಯವಾಗಿ ಹೇಳಿದೆ ಎಂದಿರುವ ಅವರು, ಇದು ಮತ್ತೊಂದು ‘ವಾಟರ್‌ಗೇಟ್’ ಹಗರಣವೇ ಎಂದು ಪ್ರಶ್ನಿಸಿದ್ದಾರೆ.  

‘ನಮ್ಮ ಸರ್ಕಾರವು ಕೋರ್ಟ್ ಮತ್ತು ಸಂಸತ್ತನ್ನು ತಪ್ಪುದಾರಿಗೆಳೆಯಿತು ಎಂದು ಈ ವರದಿ ಸೂಚಿಸುತ್ತದೆ. ಇಸ್ರೇಲಿ ಎನ್‌ಎಸ್‌ಒ ಕಂಪನಿಯ ಪೆಗಾಸಸ್‌ ಕುತಂತ್ರಾಂಶಕ್ಕೆ ಜನರ ತೆರಿಗೆ ಹಣದ ₹300 ಕೋಟಿ ನೀಡಿ ಸರ್ಕಾರವು ಚಂದಾದಾರಿಕೆ ಪಡೆದಿದೆ ಎಂಬ ಪತ್ರಿಕೆಯ ವರದಿಯು ಸುಳ್ಳು ಎಂದು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಹೇಳಬೇಕು’ ಎಂದು ಸ್ವಾಮಿ ಆಗ್ರಹಿಸಿದ್ದಾರೆ.

ಪ್ರಜಾಪ್ರಭುತ್ವ ಸಂಸ್ಥೆಗಳು, ರಾಜಕೀಯ ನಾಯಕರು ಹಾಗೂ ಜನರ ಮೇಲೆ ಗೂಢಚರ್ಯೆ ನಡೆಸಲು ಕೇಂದ್ರ ಸರ್ಕಾರವು ಕುತಂತ್ರಾಂಶ ಖರೀದಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ‘ದೂರವಾಣಿ ಕದ್ದಾಲಿಕೆ ಮೂಲಕ ಸರ್ಕಾರಿ ಅಧಿಕಾರಿಗಳು, ಪ್ರತಿಪಕ್ಷ ನಾಯಕರು, ಸೇನಾಧಿಕಾರಿಗಳು, ನ್ಯಾಯಾಂಗದವರ ಮೇಲೆ ಸರ್ಕಾರ ಕಣ್ಣಿಟ್ಟಿತ್ತು. ಮೋದಿ ಸರ್ಕಾರವು ದೇಶದ್ರೋಹ ಎಸಗಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ತೃಣಮೂಲ ಕಾಂಗ್ರೆಸ್ ಪಕ್ಷವು ಇದನ್ನು ಕೇಂದ್ರ ಸರ್ಕಾರಿ ಪ್ರಾಯೋಜಿತ ಗೂಢಚರ್ಯೆ ಎಂದು ಕರೆದಿದ್ದು, ಸರ್ಕಾರವು ಭಾರತೀಯರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದೆ. ‘2017ರಲ್ಲಿ ಇಸ್ರೇಲ್ ಜೊತೆಗಿನ ₹15,000 ಕೋಟಿ ಮೊತ್ತದ ಒಪ್ಪಂದದಲ್ಲಿ ಪೆಗಾಸಸ್ ಕುತಂತ್ರಾಂಶ ಖರೀದಿಯೇ ಕೇಂದ್ರಬಿಂದುವಾಗಿದೆ ಎಂದು ವರದಿಗಳು ತೋರಿಸಿದ ನಂತರ ನರೇಂದ್ರ ಮೋದಿಯವರ ಚಿಕ್ಕ ರಹಸ್ಯ ಬಯಲಾಗಿದೆ. ನಾಚಿಕೆಯಾಗಬೇಕು’ ಎಂದು ಪಕ್ಷ ಟ್ವೀಟ್ ಮಾಡಿದೆ. 

ಭಾರತದ ಪ್ರಜಾಪ್ರಭುತ್ವವನ್ನು ನಾಶ ಮಾಡಲು ಸಾರ್ವಜನಿಕರ ಹಣದಿಂದ ಪೆಗಾಸಸ್ ಖರೀದಿಸಲಾಗಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆರೋಪಿಸಿದ್ದಾರೆ. ಈ ಸೈಬರ್ ಅಸ್ತ್ರವನ್ನು ಏಕೆ ಖರೀದಿಸಲಾಯಿತು, ಅದರ ಬಳಕೆಗೆ ಅನುಮತಿ ನೀಡಿದವರು ಯಾರು, ಗುರಿಪಡಿಸುವ ವ್ಯಕ್ತಿಗಳನ್ನು ಹೇಗೆ ಆಯ್ಕೆ ಮಾಡಲಾಗಿದೆ ಮತ್ತು ಈ ವರದಿಗಳನ್ನು ಯಾರು ಪಡೆದರು ಎಂಬುದನ್ನು ಸರ್ಕಾರ ಪ್ರಮಾಣಪತ್ರದಲ್ಲಿ ವಿವರಿಸಬೇಕು ಎಂದು ಯೆಚೂರಿ ಆಗ್ರಹಿಸಿದ್ದಾರೆ. 

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ, ಪೆಗಾಸಸ್ ಕುತಂತ್ರಾಂಶ ಬಳಸಿಕೊಂಡು ಅಕ್ರಮ ಮತ್ತು ಅಸಾಂವಿಧಾನಿಕ ಬೇಹುಗಾರಿಕೆಯನ್ನು ಕೇಂದ್ರ ಸರ್ಕಾರವೇ ಮಾಡುತ್ತಿದೆ ಎಂಬ ಕಾಂಗ್ರೆಸ್‌ನ ದೀರ್ಘಕಾಲದ ಆಪಾದನೆಗೆ ಪತ್ರಿಕಾ ವರದಿಯು ಪುಷ್ಟಿ ನೀಡಿದೆ ಎಂದು ಅವರು ಹೇಳಿದ್ದಾರೆ. 

ಪೆಗಾಸಸ್ ವರದಿಗಳು ಆಧಾರರಹಿತ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವನಿ ವೈಷ್ಣವ್ ಸಂಸತ್ತಿಗೆ ತಿಳಿಸಿದ್ದರು. ಈ ಹೇಳಿಕೆಯ ಮೂಲಕ ಸರ್ಕಾರವು ಸಂಸತ್ತನ್ನು ವಂಚಿಸಿದೆ ಎಂದು ಸುರ್ಜೇವಾಲಾ ಆರೋಪಿಸಿದ್ದಾರೆ. 

***

ಚುನಾವಣಾ ಆಯೋಗ, ರಾಜಕೀಯ ನಾಯಕರು, ಸುಪ್ರೀಂ, ತನಿಖಾಧಿಕಾರಿಗಳ ಮೇಲೆ ಬೇಹುಗಾರಿಕೆ ನಡೆಸುವುದು ಪ್ರಜಾಪ್ರಭುತ್ವದ ವಿಧ್ವಂಸಕ ಕೆಲಸ.

- ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

***

ಸರ್ಕಾರವು ಸಾರ್ವಜನಿಕ ಹಣವನ್ನು ಬೇಹುಗಾರಿಕೆಗೆ ಬಳಸಿದೆ ಎಂಬುದು ಈಗ ಸ್ಪಷ್ಟವಾಗಿದೆ. ಬೇಹುಗಾರಿಕೆ ಮೂಲಕ ಪ್ರಜಾಪ್ರಭುತ್ವವನ್ನು ಅಪಹರಿಸಿದೆ.

- ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್ ಮುಖ್ಯ ವಕ್ತಾರ</span>

***

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಶತ್ರುವಿನಂತೆ ಏಕೆ ವರ್ತಿಸಿದರು ಮತ್ತು ಭಾರತೀಯ ನಾಗರಿಕರ ವಿರುದ್ಧ ಈ ಅಸ್ತ್ರವನ್ನು ಏಕೆ ಬಳಸಿದರು

- ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯ ಪ್ರತಿಪಕ್ಷ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು