ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷಗಳ ಗದ್ದಲ: ಸಂಸತ್‌ ಕಲಾಪ ಸೋಮವಾರಕ್ಕೆ

ಅಂಟಾರ್ಕಟಿಕ್‌ ಮಸೂದೆಗೆ ಲೋಕಸಭೆ ಒಪ್ಪಿಗೆ
Last Updated 22 ಜುಲೈ 2022, 17:13 IST
ಅಕ್ಷರ ಗಾತ್ರ

ನವದೆಹಲಿ: ಬೆಲೆ ಏರಿಕೆಯ ಕುರಿತು ಚರ್ಚೆ ನಡೆಸಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆಯೇ ಭಾರತೀಯ ಅಂಟಾರ್ಕಟಿಕ್‌ ಮಸೂದೆ 2022ಕ್ಕೆ ಲೋಕಸಭೆಯು ಶುಕ್ರವಾರ ಅನುಮೋದನೆ ನೀಡಿತು. ಅಂಟಾರ್ಕಟಿಕ್‌ ಪ್ರದೇಶದಲ್ಲಿ ಭಾರತವು ಸ್ಥಾಪಿಸಿರುವ ಸಂಶೋಧನಾ ಕೇಂದ್ರಗಳಿಗೆ ದೇಶೀಯ ಕಾನೂನು ಅನ್ವಯ ಮಾಡುವುದನ್ನು ವಿಸ್ತರಿಸುವುದಕ್ಕಾಗಿ ಈ ಮಸೂದೆ ರೂಪಿಸಲಾಗಿದೆ.

ಇದು ಈ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಅಂಗೀಕಾರವಾದ ಮೊದಲ ಮಸೂದೆಯಾಗಿದೆ.

ಎರಡು ಮುಂದೂಡಿಕೆಗಳ ಬಳಿಕ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಸದನವು ಸೇರಿತು. ಭೂ ವಿಜ್ಞಾನಗಳ ಖಾತೆಯ ಸಚಿವ ಜಿತೇಂದ್ರ ಸಿಂಗ್‌ ಅವರು ಮಸೂದೆಯನ್ನು ಮಂಡಿಸಿದರು. 1959ರಲ್ಲಿ ರೂಪುಗೊಂಡ ಅಂಟಾರ್ಕಟಿಕ್‌ ಒಪ್ಪಂದಕ್ಕೆ ಭಾರತವು 1983ರಲ್ಲಿ ಸೇರ್ಪಡೆಯಾಯಿತು ಎಂದು ಜಿತೇಂದ್ರ ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿಯೂ ವಿರೋಧ ಪಕ್ಷಗಳ ಸಂಸದರು ಗದ್ದಲ ನಿಲ್ಲಿಸಲಿಲ್ಲ. ಮಸೂದೆಯ ಮೇಲಿನ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಸ್ಪೀಕರ್ ಸ್ಥಾನದಲ್ಲಿದ್ದ ರಾಜೇಂದ್ರ ಅಗರ್‌ವಾಲ್‌ ಅವರು ಮಾಡಿದ ಮನವಿಯೂ ಫಲ ನೀಡಲಿಲ್ಲ. ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ವಾರದಲ್ಲಿ ಮಹತ್ವದ ಯಾವುದೇ ಚಟುವಟಿಕೆ ನಡೆದಿಲ್ಲ.

ಮಸೂದೆಯ ಮೇಲಿನ ಚರ್ಚೆಗೆ ವಿರೋಧ ಪಕ್ಷಗಳು ಸಿದ್ಧ ಇವೆ. ಆದರೆ, ಬೆಲೆ ಏರಿಕೆ ಕುರಿತ ಚರ್ಚೆಗೆ ಸರ್ಕಾರ ಒಪ್ಪಬೇಕು. ಈಗಿನ ಬಿಕ್ಕಟ್ಟು ನಿವಾರಣೆಗೆ ಸದನ ನಾಯಕರ ಸಭೆ ಕರೆಯಬೇಕು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಅಧಿರ್ ರಂಜನ್‌ ಚೌಧರಿ ಹೇಳಿದರು.

ರಾಷ್ಟ್ರ‍ಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರು ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಸೋಮವಾರ ಬೆಳಿಗ್ಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಂಸದರು ಅದರಲ್ಲಿ ಭಾಗಿಯಾಗುವುದು ಸಾಧ್ಯವಾಗುವಂತೆ ಕಲಾಪವನ್ನು ಸೋಮವಾರ ಮಧ್ಯಾಹ್ನ 2ರ ನಂತರ ನಡೆಸಲು ನಿರ್ಧರಿಸಲಾಗಿದೆ.

ರಾಜ್ಯಸಭೆ: ಅಲ್ಪ ಹೊತ್ತು ಪ್ರಶ್ನೋತ್ತರ

ರಾಜ್ಯಸಭೆಯ ಕಲಾಪವು ಊಟದ ವಿರಾಮದ ಹೊತ್ತಿಗೆ ಎರಡು ಬಾರಿ ಮುಂದೂಡಿಕೆಯಾಯಿತು. ಬೆಲೆ ಏರಿಕೆ ಮತ್ತು ಇತರ ವಿಚಾರಗಳ ಚರ್ಚೆಯಾಗಬೇಕು ಎಂದು ವಿರೋಧ ಪಕ್ಷಗಳು ನಿರಂತರವಾಗಿ ಪ್ರತಿಭಟನೆ ನಡೆಸಿದವು. ಮಧ್ಯಾಹ್ನ 12ರ ಬಳಿಕ ಸದನವು ಸೇರಿದಾಗ, ರಾಜ್ಯಸಭಾ ಉಪಸಭಾಪತಿ ಹರಿವಂಶ ನಾರಾಯಣ್‌ ಸಿಂಗ್‌ ಅವರು ‘ಪ್ರಶ್ನೋತ್ತರ ವೇಳೆ’ಯನ್ನು ಕೈಗೆತ್ತಿಕೊಂಡರು.

ಕೆಲ ಸಚಿವರು ಪ್ರಶ್ನೆಗಳಿಗೆ ಉತ್ತರ ನೀಡಿದರು. ಆದರೆ, ಗದ್ದಲ ನಿಲ್ಲದ ಕಾರಣ ಕಲಾಪವನ್ನು ಸೋಮವಾರ ಮಧ್ಯಾಹ್ನ 2ರವರೆಗೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT